Advertisement

ವಿಶ್ವಕಪ್‌ ಶೂಟಿಂಗ್‌: ರಿಜ್ವಿಗೆ ಬೆಳ್ಳಿ

06:00 AM Apr 25, 2018 | Team Udayavani |

ಚಾಂಗ್ವಾನ್‌: ದಕ್ಷಿಣ ಕೊರಿಯದ ಚಾಂಗ್ವಾನ್‌ನಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ನ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಶಹಜಾರ್‌ ರಿಜ್ವಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಇದು ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕವಾಗಿದೆ.

Advertisement

ಫೈನಲ್‌ನಲ್ಲಿ 239.8 ಅಂಕ ಗಳಿಸಿದ ರಿಜ್ವಿ ಬೆಳ್ಳಿ ಗೆದ್ದರೆ 240 ಅಂಕ ಗಳಿಸಿದ ರಷ್ಯಾದ ಆರ್ಟೆಮ್‌ ಚೆನೊìಸೋವ್‌ ಚಿನ್ನ ಮತ್ತು 217.1 ಅಂಕ ಪಡೆದ ಬಲ್ಗೇರಿಯದ ಸಾಮ್ಯುಯಿಲ್‌ ಡಾನ್‌ಕೋವ್‌ ಕಂಚು ಪಡೆದರು. ರಿಜ್ವಿ ಮಾರ್ಚ್‌ನಲ್ಲಿ ಮೆಕ್ಸಿಕೋದ ಗ್ವಾಡಲಜಾರದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದು ಅವರ ಮೊದಲ ವಿಶ್ವಕಪ್‌ ಸ್ಪರ್ಧೆ ಯಾಗಿತ್ತು. 

ಈ ಸ್ಪರ್ಧೆಯ ಮೊದಲೆರಡು ದಿನ ಭಾರತೀಯ ಶೂಟರ್‌ಗಳು ಯಾವುದೇ ಪದಕ ಗೆಲ್ಲಲು ವಿಫ‌ಲರಾಗಿದ್ದರು. ಹಾಗಾಗಿ ರಿಜ್ವಿ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನ ಪದಕ ವಿಜೇತರಾದ ಜಿತು ರಾಯ್‌ ಮತ್ತು ಓಂ ಪ್ರಕಾಶ್‌ ಮಿತುರ್ವಾಲ್‌ ಮೇಲೆ ಬಹಳಷ್ಟು ಒತ್ತಡವಿತ್ತು. ಉತ್ತಮ ನಿರ್ವಹಣೆ ನೀಡುವ ಮೂಲಕ ರಿಜ್ವಿ ಫೈನಲಿಗೇರಲು ಯಶಸ್ವಿಯಾಗಿದ್ದರೆ ಮಿತುರ್ವಾಲ್‌ ಮತ್ತು ರಾಯ್‌ ಅನುಕ್ರಮವಾಗಿ 11ನೇ ಮತ್ತು 38ನೇ ಸ್ಥಾನ ಪಡೆದು ನಿರಾಶೆಗೊಳಿಸಿದರು.

582 ಅಂಕ ಗಳಿಸುವ ಮೂಲಕ 6ನೇ ಸ್ಥಾನಿಯಾಗಿ ಫೈನಲಿಗೇರಿದ್ದ ರಿಜ್ವಿ ಅವರು ಕೇವಲ 0.2 ಅಂಕದ ಅಂತರದಲ್ಲಿ ಚಿನ್ನ ಗೆಲ್ಲಲು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next