– 8 ಮಂದಿಯ ಫೈನಲ್‌ನಲ್ಲಿ 3ನೇ ಸ್ಥಾನ
– ಜಪಾನಿಗೆ ಚಿನ್ನ, ವಿಯೆಟ್ನಾಮ್‌ಗೆ ಬೆಳ್ಳಿ
ಹೊಸದಿಲ್ಲಿ: ಸೋಮವಾರವಷ್ಟೇ ಐಎಸ್‌ಎಸ್‌ಎಫ್ ವಿಶ್ವ ಕಪ್ ಶೂಟಿಂಗ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಹೀನಾ ಸಿಧು ಜತೆಗೂಡಿ ಬಂಗಾರದ ಬೇಟೆಯಾಡಿದ್ದ ಜಿತು ರಾಯ್, ಮಂಗಳವಾರ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದಾರೆ.
8 ಮಂದಿಯ ಫೈನಲ್‌ನಲ್ಲಿ ಒಟ್ಟು 216.7 ಅಂಕಗಳನ್ನು ಕಲೆಹಾಕಿದ ಜಿತು ರಾಯ್ ಮೂರನೆಯವರಾಗಿ ಸ್ಪರ್ಧೆ ಮುಗಿಸಿದರು. ಜಪಾನಿನ ಟೊಮೊಯುಕಿ ಮತ್ಸುಡ ವಿಶ್ವದಾಖಲೆಯ 240.1 ಅಂಕದೊಂದಿಗೆ ಬಂಗಾರದ ಪದಕ ಗೆದ್ದರೆ, ವಿಯೆಟ್ನಾಮ್‌ನ ಕ್ಸುವಾನ್ ವಿನ್ ಹಾಂಗ್ ಬೆಳ್ಳಿ ಪದಕ ಜಯಿಸಿದರು (236.6 ಅಂಕ).
ಭಾರತದ ಉಳಿದಿಬ್ಬರು ಸ್ಪರ್ಧಿಗಳಾದ ಓಂಕಾರ್ ಸಿಂಗ್ ಮತ್ತು ಅಮನ್‌ಪ್ರೀತ್ ಸಿಂಗ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು.
ಅಂತಿಮ ಹಣಾಹಣಿಯ ಮೊದಲ ಸುತ್ತಿನಲ್ಲಿ ಜಿತು ರಾಯ್ ಏಳರಷ್ಟು ಕೆಳ ಸ್ಥಾನದಲ್ಲಿದ್ದರು. ಆದರೆ ದ್ವಿತೀಯ ಸುತ್ತಿನಲ್ಲಿ 98.7 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾದರು. ಬಳಿಕ ಗುರಿಯಲ್ಲಿ ಪ್ರಗತಿ ಕಾಣುತ್ತ ಹೋದರು. ಚೀನದ ಝಾನ್ಯಿ ಕ್ಸು (197.9) ಅವರನ್ನು ಹಿಂದಿಕ್ಕಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
ಜಿತು ರಾಯ್ ಸಾಧನೆಯೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.