Advertisement

ಇಸ್ರೋ ಮಾನವ ರಹಿತ ಗಗನಯಾನಕ್ಕೆ ಮಹಿಳಾ ರೋಬೋಟ್ ಸಿದ್ಧ ; ಯಾರೀಕೆ ‘ವ್ಯೋಮ ಮಿತ್ರ’

09:27 AM Jan 23, 2020 | Hari Prasad |

ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿರುವ ಭಾರತೀಯರ ಹೆಮ್ಮೆಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಇದೀಗ ಇನ್ನೊಂದು ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಮಂಗಳನ ಅಂಗಳಕ್ಕೆ ನೌಕೆಯನ್ನು ಯಶಸ್ವಿಯಾಗಿ ಹಾರಿಬಿಟ್ಟಿರುವ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯೊಂದನ್ನು ಇಳಿಸುವ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯಾಗಿರುವ ಇಸ್ರೋ ಸಂಸ್ಥೆಯ ಮುಂದಿನ ಗುರಿ ಮಾನವ ರಹಿತ ಗಗನಯಾನ.

Advertisement

2022ರಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಸಂದರ್ಭದಲ್ಲಿ ಮಾನವ ಸಹಿತ ಗಗನಯಾನ ಕೈಗೊಳ್ಳುವುದು ಇಸ್ರೋ ಗುರಿಯಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾನವ ರಹಿತ ಗಗನ ಯಾನದಲ್ಲಿ ಮಹಿಳಾ ರೋಬೋಟನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

ತನ್ನ ಮಹತ್ವಾಕಾಂಕ್ಷೆಯ ಈ ಯೋಜನೆಯ ಪೂರ್ವತಯಾರಿಯಲ್ಲಿ ಇಸ್ರೋ ವಿಜ್ಞಾನಿಗಳ ತಂಡ ಕಾರ್ಯನಿರ್ವಹಿಸುತ್ತಿದ್ದು ಇದರ ಒಂದು ಭಾಗವಾಗಿ ಮಾನವ ರಹಿತ ಗಗನಯಾನ ನೌಕೆಯಲ್ಲಿ ಪ್ರಯಾಣಿಸಲಿರುವ ಮಾನವ ಪ್ರತಿರೂಪದ ರೋಬೋಟ್ ಚಿತ್ರವನ್ನು ಇಸ್ರೋ ಇಂದು ಬಿಡುಗಡೆಗೊಳಿಸಿದೆ. ಈ ರೀತಿ ಮಾನವ ರಹಿತ ಗಗನ ಯಾನ ಕೈಗೊಳ್ಳಲಿರುವ ಅದೃಷ್ಟ ಮಹಿಳಾ ರೋಬೋಟ್ ಗೆ ಸಿಕ್ಕಿರುವುದು ಇನ್ನೊಂದು ವಿಶೇಷ. ಮಾನವ ರೂಪವನ್ನು ಹೋಲುವ ಈ ರೋಬೋಟ್ ಗೆ ಇಸ್ರೋ ವಿಜ್ಞಾನಿಗಳು ಇಟ್ಟಿರುವ ಹೆಸರು ‘ವ್ಯೋಮ್ ಮಿತ್ರ’.

ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಗೂ ಮೊದಲು ಈ ಮಹಿಳಾ ರೋಬೋಟ್ ಪ್ರಾಯೋಗಿಕವಾಗಿ ಗಗನಕ್ಕೆ ಹಾರಲಿದೆ. ಮನುಷ್ಯರ ದೇಹದ ಹಲವಾರು ಕಾರ್ಯಗಳನ್ನು ಈ ರೋಬೋಟ್ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ವ್ಯೋಮಯಾನದ ವೇಳೆಯಲ್ಲಿ ಅವುಗಳನ್ನೆಲ್ಲಾ ಇಸ್ರೋಗೆ ವರದಿ ಮಾಡುತ್ತಲೇ ಇರಲಿದೆ.


ತನ್ನ ಐತಿಹಾಸಿಕ ಮಾನವ ಸಹಿತ ಗಗನಯಾನಕ್ಕೆ ಈಗಾಗಲೇ ನಾಲ್ಕು ಜನರನ್ನು ಆಯ್ಕೆ ಮಾಡಿರುವುದಾಗಿ ಇಸ್ರೋ ಈ ಮೊದಲೇ ಘೋಷಣೆ ಮಾಡಿತ್ತು. ಮತ್ತು ಈ ನಾಲ್ಕೂ ಜನರು ಪುರುಷರಾಗಿದ್ದು ಅವರ ಗುರುತನ್ನು ಬಹಿರಂಗಪಡಿಸಲು ಇಸ್ರೋ ನಿರಾಕರಿಸಿದೆ.

Advertisement

ಈ ವ್ಯೋಮಯಾನಕ್ಕೆ ಆಯ್ಕೆಯಾಗಿರುವ ನಾಲ್ಕು ಜನರು ರಷ್ಯಾದಲ್ಲಿ 11 ತಿಂಗಳ ತರಬೇತಿಗೆ ಒಳಪಡಲಿದ್ದಾರೆ. ಬಳಿಕ ಅವರೆಲ್ಲರೂ ಭಾರತದಲ್ಲಿ ಗಗನ ನೌಕೆಯ ಚಾಲನೆ ಮತ್ತು ಅದರಲ್ಲಿರುವ ವ್ಯವಸ್ಥೆಗಳ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳುವ ತರಬೇತಿಯನ್ನು ಹೊಂದಲಿದ್ದಾರೆ.

ಭಾರತದ ತೂಕಭರಿತ ಉಡ್ಡಯನ ನೌಕೆ ‘ಬಾಹುಬಲಿ’ ಈ ಗಗನಯಾನಿಗಳನ್ನು ಹೊತ್ತು ಆಕಾಶಕ್ಕೆ ಜಿಗಿಯಲಿದೆ. ಮಾನವ ಸಹಿತ ಗಗನಯಾನ ಇಸ್ರೋದ ಮೊದಲ ಆದ್ಯತೆಯ ಪಟ್ಟಿಯಲ್ಲಿದೆ ಎಂದು ಈ ವರ್ಷದ ಪ್ರಾರಂಭದಲ್ಲಿ ಇಸ್ರೋ ಅಧ್ಯಕ್ಷರು ಹೇಳಿಕೆ ನೀಡಿದ್ದರು. ಈ ಯೋಜನೆಗಾಗಿ ಕೇಂದ್ರ ಸರಕಾರ 10 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ.

1984ರಲ್ಲಿ ಬಾಹ್ಯಾಕಾಶ ಯಾನ ಮಾಡಿದ ಪ್ರಪ್ರಥಮ ಭಾರತೀಯ ರಾಕೇಶ್ ಶರ್ಮಾ ಅವರಾಗಿದ್ದರೂ ಅಂದು ಅವರು ಯಾನ ಮಾಡಿದ್ದ ವ್ಯೋಮ ನೌಕೆ ಭಾರತದ್ದಾಗಿರಲಿಲ್ಲ. ಹಾಗಾಗಿ ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಇಸ್ರೋ ಖುದ್ದು ಕೈಗೆತ್ತಿಕೊಂಡಿರುವ ಯೋಜನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next