ಶ್ರೀಹರಿಕೋಟಾ: ಗೂಢಚರ-ಭೂಸರ್ವೇಕ್ಷಣ ಉಪಗ್ರಹ ರಿಸ್ಯಾಟ್ – 2ಬಿಆರ್1 ಸೇರಿದಂತೆ ವಿವಿಧ ದೇಶಗಳ ಇತರ 9 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ನಭಕ್ಕೆ ಕಳುಹಿಸಿದೆ.
ಬುಧವಾರ 3.25ಕ್ಕೆ ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ನೆಲೆಯಿಂದ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ- ಸಿ48 ರಾಕೆಟ್ ನಭಕ್ಕೆ ನೆಗೆದಿದ್ದು, ಅಂತರಿಕ್ಷದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ರಿಸ್ಯಾಟ್ – 2ಬಿಆರ್1 ರಾಡಾರ್ ಇಮೇಜಿಂಗ್ ಭೂ ಸರ್ವೇಕ್ಷಣ ಉಪಗ್ರಹವಾಗಿದ್ದು, ಇಸ್ರೋ ಇದನ್ನು ನಿರ್ಮಿಸಿದೆ. ಇದನ್ನು ನಿರ್ದಿಷ್ಟವಾಗಿ ಮಿಲಿಟರಿ ಬಳಕೆಗಾಗಿ ಬಳಸಲಾಗುತ್ತದೆ. ಇದರೊಂದಿಗೆ ಹವಾಮಾನ, ಕೃಷಿ ಸಂಬಂಧಿ ಕೆಲಸಗಳಿಗೂ ಬಳಸುವ ಅನುಕೂಲವನ್ನು ಕಲ್ಪಿಸಲಾಗಿದೆ. ಮುಂದಿನ 5 ವರ್ಷಗಳ ಕಾಲ ಇದು ಕಾರ್ಯನಿರ್ವಹಣೆ ಮಾಡಲಿದೆ. ಇದು ಒಟ್ಟು 628 ಕೆ.ಜಿ. ತೂಕ ಹೊಂದಿದ್ದು, ಭೂಮಿಯಿಂದ 576 ಕಿ.ಮೀ. ಮೇಲ್ಭಾಗದ ಕಕ್ಷೆಯಲ್ಲಿ ಇಡಲಾಗಿದೆ.
ಉಳಿದಂತೆ ಒಟ್ಟು 6 ಉಪಗ್ರಹಗಳು ಅಮೆರಿಕದ ವಿವಿಧ ಸಂಸ್ಥೆಗಳದ್ದಾದರೆ, ಜಪಾನ್, ಇಟಲಿ, ಇಸ್ರೇಲ್‌ನ ತಲಾ ಒಂದು ಉಪಗ್ರಹಗಳನ್ನು ಪಿಎಸ್‌ಎಲ್‌ವಿಯೊಂದಿಗೆ ಉಡ್ಡಯನ ಮಾಡಲಾಗಿದೆ.
ರಾಕೆಟ್ ನಭಕ್ಕೆ ನೆಗೆದ 16 ನಿಮಿಷದಲ್ಲಿ ರಿಸ್ಯಾಟ್ – 2ಬಿಆರ್1ನ್ನು ಕಕ್ಷೆಗೆ ಕೂರಿಸಲಾಗಿದೆ. ಇತರ ಉಪಗ್ರಹಗಳನ್ನು ಅನಂತರದ 5 ನಿಮಿಷಗಳಲ್ಲಿ ಕಕ್ಷೆಗೆ ಕೂರಿಸಲಾಗಿದೆ. ಪಿಎಸ್‌ಎಲ್‌ವಿ ನೌಕೆಯ 50ನೇ ಯಶಸ್ವೀ ಉಡ್ಡಯನದ ಬಗ್ಗೆ ಅತೀವ ಹರ್ಷವೆನಿಸುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಹೇಳಿದ್ದಾರೆ.