Advertisement

2030ಕ್ಕೆ ಇಸ್ರೋ “ಬಾಹ್ಯಾಕಾಶ ಪ್ರವಾಸೋದ್ಯಮ’: ಪ್ರತಿ ಪ್ರಯಾಣಿಕನಿಗೆ 6 ಕೋಟಿ ರೂ. ಶುಲ್ಕ?

07:34 PM Mar 16, 2023 | Team Udayavani |

ನವದೆಹಲಿ: ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಚರಿತ್ರಾರ್ಹ ಸಾಧನೆಗಳ ಹೆಗ್ಗಳಿಕೆ ಹೊಂದಿರುವ ಇಸ್ರೋ 2030ರ ವೇಳೆಗೆ ದೇಶಕ್ಕೆ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಪರಿಚಯಿಸಲಿದೆ. ಅಮೆರಿಕ ಮತ್ತು ಇತರ ದೇಶಗಳಲ್ಲಿ ಉದ್ಯಮಿ ಎಲಾನ್‌ ಮಸ್ಕ್, ಅಮೆಜಾನ್‌ ಸಿಇಒ ಜೆಫ್ ಬೆಜೋಸ್‌ ಅವರು ನಡೆಸಿದ ಪ್ರಯತ್ನಗಳು ಸದ್ದು ಮಾಡಿದ ಬೆನ್ನಲ್ಲೇ ಇಸ್ರೋ ಕೂಡ ಇಂಥ ಯೋಜನೆಗೆ ಕೈಹಾಕಿದೆ.

Advertisement

ಇದು ಬಹುಕೋಟಿ ವೆಚ್ಚದ ಯೋಜನೆಯಾಗಿದ್ದು, ಬಾಹ್ಯಾಕಾಶ ಪಯಣ ಕೈಗೊಳ್ಳಲು ಇಚ್ಛಿಸುವ ಪ್ರತಿ ವ್ಯಕ್ತಿಗೂ 6 ಕೋಟಿ ರೂ. ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ. ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ, ನಮ್ಮ ಸಂಸ್ಥೆ ನಿಗದಿ ಮಾಡುವ ದರವೇ ಅತ್ಯಂತ ಕಡಿಮೆಯಾಗಿರಲಿದೆ ಎಂದಿದ್ದಾರೆ.

ಬಾಹ್ಯಾಕಾಶ ಪ್ರವಾಸೋದ್ಯಮ ಕುರಿತ ಆರಂಭಿಕ ಕೆಲಸಗಳು ಶುರುವಾಗಿವೆ. ಸ್ವದೇಶಿ ತಂತ್ರಜ್ಞಾನ ಬಳಕೆ ಮಾಡಿ ಸಿದ್ಧಪಡಿಸಲಾಗುವ ವ್ಯವಸ್ಥೆಯನ್ನೇ ಅದರಲ್ಲಿ ಬಳಸಲಾಗುತ್ತದೆ. ಜತೆಗೆ ಗಗನನೌಕೆಯನ್ನು ಪುನರ್‌ ಬಳಕೆಗೆ ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

15 ನಿಮಿಷ:
ದೇಶ ಕೈಗೊಳ್ಳಲಿರುವ ಪ್ರಸ್ತಾವಿತ ಬಾಹ್ಯಾಕಾಶ ಪ್ರವಾಸದ ಅವಧಿ 15 ನಿಮಿಷಗಳು. ಕೆಲ ನಿಮಿಷಗಳ ಕಾಲ ಗುರುತ್ವಾಕರ್ಷಣ ಬಲ ಕಡಿಮೆ ಇರುವ ಪ್ರದೇಶದಲ್ಲಿ ಕಳೆಯುವ ಯೋಜನೆಯೂ ಇದೆ. ಭೂಮಿಯಿಂದ 100 ಕಿಮೀ ಎತ್ತರ ಅಂದರೆ ಉಪ ಕಕ್ಷೆಯ ವ್ಯಾಪ್ತಿಗೆ ಕರೆದೊಯ್ಯಲಾಗುತ್ತದೋ ಅಥವಾ ಬಾಹ್ಯಾಕಾಶದ ಅಂಚಿಗೆ (ಭೂಮಿಯಿಂದ 400 ಕಿಮೀ ಎತ್ತರ) ತೆರಳಲಾಗುತ್ತದೆಯೋ ಎಂಬ ಬಗ್ಗೆ ಸೋಮನಾಥ್‌ ಹೆಚ್ಚಿನ ಮಾಹಿತಿ ನೀಡಿಲ್ಲ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌ ಅವರು ಫೆಬ್ರವರಿಯಲ್ಲಿ ರಾಜ್ಯಸಭೆಗೆ ನೀಡಿದ್ದ ಲಿಖೀತ ಉತ್ತರದಲ್ಲಿ “ಉಪ-ಕಕ್ಷೆಯ (ಸಬ್‌ ಆರ್ಬಿಟಲ್‌) ವ್ಯಾಪ್ತಿಯಲ್ಲಿ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವ ನಿಟ್ಟಿನಲ್ಲಿ ಇಸ್ರೋ ಅಧ್ಯಯನ ನಡೆಸುತ್ತಿದೆ’ ಎಂದು ಹೇಳಿದ್ದರು.

Advertisement

ಖಾಸಗಿ ಸಹಭಾಗಿತ್ವ:
ಖಾಸಗಿ ಸಹಭಾಗಿತ್ವದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಇವೆ. ಅದಕ್ಕಾಗಿ ಇಂಡಿಯನ್‌ ನ್ಯಾಷನಲ್‌ ಸ್ಪೇಸ್‌ ಪ್ರೊಮೋಷನ್‌ ಆ್ಯಂಡ್‌ ಅಥೊರೈಸೇಷನ್‌ ಸೆಂಟರ್‌ ಕಾರ್ಯನಿರತವಾಗಿದೆ.

ಹೊಸತೇನಲ್ಲ
ಬಾಹ್ಯಾಕಾಶ ಪ್ರವಾಸೋದ್ಯಮ ಹೊಸ ವಿಚಾರವೇನೂ ಅಲ್ಲ. 2001ರಲ್ಲಿ ಹಣಕಾಸು ವಿಶ್ಲೇಷಕ ಡೆನಿಸ್‌ ಟಿಟೋ ಅವರು ತಮ್ಮ 60ನೇ ವಯಸ್ಸಿನಲ್ಲಿ 20 ಮಿಲಿಯನ್‌ ಡಾಲರ್‌ ಶುಲ್ಕ ನೀಡಿ ಸುಯೆಜ್‌ ಗಗನ ನೌಕೆಯಲ್ಲಿ ಹಾರಾಟ ನಡೆಸಿ, ಮೊದಲ ಬಾಹ್ಯಾಕಾಶ ಪ್ರವಾಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಾದ ಬಳಿಕ ಬ್ಲೂ ಒರಿಜಿನ್‌, ವರ್ಜಿಲ್‌ ಗಲಾಕ್ಟಿಕ್‌ ಮತ್ತು ಸ್ಪೇಸ್‌ ಎಕ್ಸ್‌ ಈ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಹಲವು ಆಫ‌ರ್‌ಗಳನ್ನು ನೀಡುತ್ತಿವೆ.

ಬಾಹ್ಯಾಕಾಶ ಪ್ರವಾಸೋದ್ಯಮ ಆರಂಭ? – 2030
ಬಾಹ್ಯಾಕಾಶದಲ್ಲಿ ಎಷ್ಟು ನಿಮಿಷ?– 15
ಪ್ರಯಾಣ ಶುಲ್ಕ- 6 ಕೋಟಿ ರೂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next