ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಸುವ ಯತ್ನ ಚಂದ್ರಯಾನ -2ರ ವೇಳೆ ವಿಫಲವಾಗಿದ್ದರೂ, ಇಸ್ರೋ ಇನ್ನೂ ಛಲ ಬಿಟ್ಟಿಲ್ಲ. ಚಂದ್ರನ ಮೇಲೆ ಇಳಿಯುವ ಯತ್ನವನ್ನು ಮತ್ತೆ ಮಾಡುವುದಾಗಿ ಅದು ಹೇಳಿದೆ.
ದಿಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ನಡೆದ 50ನೇ ಘಟಿಕೋತ್ಸವದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು, ನಾವು ಸಾಫ್ಟ್ ಲ್ಯಾಂಡಿಗ್ ಕುರಿತ ತಂತ್ರಜ್ಞಾನವನ್ನು ತೋರಿಸಿದ್ದೇವೆ. ಮುಂದೆ ಮತ್ತೆ ಈ ಬಗ್ಗೆ ಯೋಜನೆ ರೂಪಿಸುತ್ತೇವೆ. ಆದರೆ ಯಾವಾಗ ಎಂಬುದನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.
ಚಂದ್ರಯಾನ 2 ಉಪಗ್ರಹದಿಂದ ಚಂದ್ರನ ಮೇಲಿರುವ ಅಂಶಗಳ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ಪಡೆದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದರು.
ತಾಂತ್ರಿಕವಾಗಿ ನಾವು ಚಂದ್ರನ ಮೇಲೆ ಇಳಿಯಲು ವಿಫಲರಾದೆವು. ಆದರೆ ಚಂದ್ರನ ಮೇಲೆ 300 ಮೀ.ವರೆಗೆ ನಮ್ಮ ಎಲ್ಲ ಯೋಜನೆಗಳೂ ಕರಾರುವಕ್ಕಾಗಿ ನಡೆದಿದ್ದವು. ವೈಫಲ್ಯಗಳ ಹೊರತಾಗಿ ನಾವು ಯಶಸ್ಸನ್ನು ಎದುರು ನೋಡುತ್ತಿದ್ದೇವೆ. ಚಂದ್ರಯಾನ 2ಗೆ ಕಥೆ ಮುಗಿಯಿತು ಎಂದರ್ಥವಲ್ಲ ಎಂದರು.
ಇದರೊಂದಿಗೆ ಇಸ್ರೋ ವಿಜ್ಞಾನಿಗಳು ಅತ್ಯಾಧುನಿಕ ಉಪಗ್ರಹ ವ್ಯವಸ್ಥೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಮುಂದಿನ ವರ್ಷ ಅತಿ ಸಣ್ಣ ರಾಕೆಟ್ (ಎಸ್‌ಎಸ್‌ಎಲ್‌ವಿ) ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.