Advertisement
ಇಸ್ರೋ ಸಂಸ್ಥೆ ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಿ ವಿಶ್ವ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪೀಪಲ್ಸ್ ಫೌಂಡೇಷನ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇಸ್ರೋದ ಇಂಡಿಯನ್ ರೀಜಿನಲ್ ಸೆಟಲೈಟ್ ನ್ಯಾವಿಗೇಷನ್ ಸಿಸ್ಟಮ್‌ನಡಿ (ನಾವಿಕ್) ಕರ್ನಾಟಕ ಸೇರಿದಂತೆ ದೇಶದ ಕರಾವಳಿ ಪ್ರದೇಶದಲ್ಲಿ ಮೀನುಗಾರರು ಸುರಕ್ಷಿತವಾಗಿ ಆಳ ಸಮುದ್ರಕ್ಕೆ ಹೋಗಿ ಮೀನು ಹಿಡಿಯುವುದಕ್ಕೆ ಅನುಕೂಲವಾಗುವ ಸಮೂಹ ಉಪಗ್ರಹ ಅಧಾರಿತ ಮಾಹಿತಿ ವ್ಯವಸ್ಥೆ ಅಳವಡಿಸಲಾಗಿದೆ.
Related Articles
Advertisement
ಇನ್ನು “ಚಂದ್ರಯಾನ-1′ ಯೋಜನೆ ಕೂಡ ಚಂದ್ರನ ಮೇಲೆ ನೀರಿನ ಕಣಗಳಿರುವುದನ್ನು ಪತ್ತೆ ಮಾಡಿದೆ. ವಾತಾವರಣದಿಂದಲೇ ಆಮ್ಲಜನಕ ಬಳಸಿಕೊಂಡು ಮರು ಬಳಕೆಯಾಗುವ ಲಾಂಚ್ ವೆಹಿಕಲ್ ಅನ್ನು ಕಂಡುಹಿಡಿಯುವಲ್ಲಿಯೂ ಇಸ್ರೋ ಯಶಸ್ವಿಯಾಗಿದೆ ಎಂದು ಕಿರಣ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಅಮೆರಿಕದಂಥಹ ದೇಶಗಳು ಬಾಹ್ಯಾಕಾಶ ಸಂಶೋಧನೆಗೆ ಒಂದು ವರ್ಷದಲ್ಲಿ ಖರ್ಚು ಮಾಡುವ ಹಣವನ್ನು ಇಸ್ರೋ ಸಂಸ್ಥೆ ಇಲ್ಲಿತನಕ ಖರ್ಚು ಮಾಡಿರಬಹುದು.
ಅಷ್ಟೇಅಲ್ಲ, ನಮ್ಮ ಬಾಹ್ಯಾಕಾಶ ಸಂಶೋಧನೆಗಳ ಆದ್ಯತೆ ಕೂಡ ಜನಸಾಮಾನ್ಯರಿಗೆ ಹೆಚ್ಚು ಉಪಯುಕ್ತವಾಗುವ ಅಂಶಗಳೇ ಹೊರತು ಮಿಲಿಟರಿ ಉದ್ದೇಶಗಳನ್ನು ಹೊಂದಿಲ್ಲ. ಕೇಂದ್ರ ಸರಕಾರದಿಂದ ಹೆಚ್ಚಿನ ಆರ್ಥಿಕ ಸಂಪನ್ಮೂಲ ದೊರೆತರೆ, ಇಸ್ರೋ ವಿಜ್ಞಾನಿಗಳು ಅಂತರಿಕ್ಷದಲ್ಲಿ ಸ್ಪೇಸ್ ಸ್ಟೇಷನ್ ನಿರ್ಮಿಸುವ ಹಾಗೂ ಚಂದ್ರನತ್ತ ಮಾನವ ಸಹಿತ ನೌಕೆ ಕಳುಹಿಸುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ.
ಹೀಗಾಗಿ, ಬೇರೆ ದೇಶಗಳಿಗೆ ಹೋಲಿಸಿದರೆ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈಗ ಮುಂಚೂಣಿಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಶಿವಣ್ಣ, ಪೀಪಲ್ಸ್ ಫೌಂಡೇಷನ್ ಸ್ಥಾಪಕ ಡಾ.ಎಚ್.ಎಂ. ಬಸವರಾಜು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪಗ್ರಹದಿಂದ ಉಗ್ರರ ನುಸುಳುವಿಕೆ ಪತ್ತೆ ಅಸಾಧ್ಯಗಡಿಯಾಚೆಯಿಂದ ಒಳ ನುಸುಳುತ್ತಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ನಮ್ಮ ಉಪಗ್ರಹಗಳಿಂದ ನಿರೀಕ್ಷಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಹೇಳಿದ್ದಾರೆ. ಉಪಗ್ರಹಗಳಿಂದ ಸಮುದ್ರದಲ್ಲಿ ಮೀನು ಇರುವ ಜಾಗ, ಅಂತರ್ಜಲ ಮಟ್ಟದ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗುವುದಾದರೆ ಭಯೋತ್ಪಾದಕರ ಬಗ್ಗೆ ಸುಳಿವು ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರಬಹುದು. ಅದರೆ, ಉಪಗ್ರಹಗಳು ಭೂಮಿಯ ಸುತ್ತ ತಿರುತ್ತಿರಬೇಕಾದರೆ, ದೇಶದ ಆಗು-ಹೋಗುಗಳನ್ನು ದಿನದಲ್ಲಿ ಒಮ್ಮೆಗಷ್ಟೇ ಸೆರೆ ಹಿಡಿಯಲು ಸಾಧ್ಯ. ಅಷ್ಟೊಂದು ಸೂಕ್ಷ್ಮವಾದ ಟೆಲಿಸ್ಕೋಪಿಕ್ ತಂತ್ರಜ್ಞಾನ ಸದ್ಯ ನಮ್ಮಲ್ಲಿ ಇಲ್ಲ. ಅಷ್ಟೊಂದು ದೊಡ್ಡ ಮಟ್ಟದ ಹಣ ಖರ್ಚು ಮಾಡಿ ಹೆಚ್ಚಿನ ಸಂಖ್ಯೆಯ ಸಮೂಹ ಉಪಗ್ರಹ ವ್ಯವಸ್ಥೆಯನ್ನು ಮಾಡಿದರೆ ಭಯೋತ್ಪಾದಕರ ಒಳ ನುಸುಳುವಿಕೆಯನ್ನು ಕೂಡ ಪತ್ತೆ ಹಚ್ಚಲು ವಿಜ್ಞಾನದಿಂದ ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.