Advertisement

Isreal: ಸೈರನ್‌ನದ್ದೇ ಸದ್ದು…ಜೀವ ಕೈಯಲ್ಲಿ ಹಿಡಿದುಕೊಂಡೇ ಬದುಕುವ ಸ್ಥಿತಿ

11:40 PM Oct 10, 2023 | Team Udayavani |

ಟೆಲ್‌ ಅವಿವ್‌: ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಸಂಘರ್ಷವು 4ನೇ ದಿನ ಪೂರೈಸಿದ್ದು, ಅಪಾರ ಸಾವು ನೋವು, ಹಾನಿ ಮುಂದುವರಿದಿದೆ. ಯುದ್ಧಕ್ಕೆ ಅಂತ್ಯ ಹಾಡುವ ಯಾವ ಪ್ರಯತ್ನವೂ ನಡೆಯದ ಕಾರಣ, ಎರಡೂ ಕಡೆಯು ಸೈರನ್‌ಗಳ ಸದ್ದು ಮುಗಿಲುಮುಟ್ಟಿದ್ದು, ಇಸ್ರೇಲ್‌ ಮತ್ತು ಗಾಜಾ ಪಟ್ಟಿಯಲ್ಲಿನ ಜನರು ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡೇ ಪ್ರತೀ ಕ್ಷಣ ಕಳೆಯುವಂತಾಗಿದೆ.

Advertisement

ಸೋಮವಾರ ರಾತ್ರಿಯಿಂದೀಚೆಗೆ ಗಾಜಾ ಪಟ್ಟಿ ಮೇಲೆ ಇಸ್ರೇಲ್‌ನಿಂದ ನಿರಂತರ ವೈಮಾನಿಕ ದಾಳಿ ನಡೆದಿದೆ. ಮಂಗಳವಾರ ಹಗಲು ಹೊತ್ತು ಇಸ್ರೇಲ್‌ ಮೇಲೆ ಹಮಾಸ್‌ನಿಂದ ದಾಳಿಯಾಗಿರಲಿಲ್ಲ. ಆದರೆ ಸಂಜೆಯಾಗುತ್ತಲೇ ಇಸ್ರೇಲ್‌ನಾದ್ಯಂತ ರಾಕೆಟ್‌ ಸೈರನ್‌ಗಳ ಸದ್ದು ಅನುರಣಿಸಿದೆ. “ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನ ಕರಾವಳಿ ಪ್ರದೇಶದ ಆಶೆRಲಾನ್‌ ನಗರಕ್ಕೆ ರಾಕೆಟ್‌ಗಳ ಸುನಾಮಿಯೇ ಅಪ್ಪಳಿಸಲಿದ್ದು, ಜೀವ ಉಳಿಸಿಕೊಳ್ಳ ಬೇಕೆಂದರೆ 5 ಗಂಟೆಯೊಳಗೆ ಜಾಗ ಖಾಲಿ ಮಾಡಿ’ ಎಂದು ಟೆಲಿಗ್ರಾಂ ಚಾನೆಲ್‌ ಮೂಲಕ ಹಮಾಸ್‌ ಉಗ್ರರು ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೇ ಆಶೆನಾಲ್‌ ನಗರದತ್ತ ರಾಕೆಟ್‌ಗಳ ಸುರಿಮಳೆಯಾಗಿದೆ.

ಇನ್ನೊಂದೆಡೆ ಇಸ್ರೇಲ್‌ ಕೂಡ ಗಾಜಾದ ಬಂದರಿನ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಬಂದರಿನಲ್ಲಿ ನಿಂತಿದ್ದ ಮೀನುಗಾರಿಕ ದೋಣಿಗಳು ಮತ್ತು ನೌಕೆಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಗಾಜಾದ ಸಂಸತ್‌ ಮತ್ತು ಸಚಿವಾಲಯಗಳೇ ನಮ್ಮ ಪ್ರಮುಖ ಟಾರ್ಗೆಟ್‌ ಎಂದು ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ಈ ನಡುವೆ, ಹಮಾಸ್‌ ಹಣಕಾಸು ಸಚಿವ ಜವಾದ್‌ ಅಬು ಶ್ಮಾಲಾರನ್ನು ಹತ್ಯೆಗೈದಿರುವುದಾಗಿ ಸೇನೆ ಘೋಷಿಸಿದೆ.

50 ಕುಟುಂಬಗಳಿಗೆ ಮಾಹಿತಿ: ಯುದ್ಧದಲ್ಲಿ 123 ಮಂದಿ ಸೈನಿಕರು ಅಸುನೀಗಿದ್ದಾಗಿ ಇಸ್ರೇಲ್‌ ರಕ್ಷಣ ಪಡೆ ಮಂಗಳವಾರ ತಿಳಿಸಿದೆ. ಜತೆಗೆ 50 ಕುಟುಂಬಗಳಿಗೆ “ನಿಮ್ಮ ಪ್ರೀತಿಪಾತ್ರರನ್ನು ಉಗ್ರರು ಅಪಹರಿಸಿದ್ದಾರೆ’ ಎಂಬ ಸಂದೇಶವನ್ನು ಕಳುಹಿಸಲಾಗಿದೆ.

ಭದ್ರತೆ ಹೆಚ್ಚಳ: ಹೊಸದಿಲ್ಲಿಯಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಮತ್ತು ಛಾಬಾದ್‌ ಹೌಸ್‌ನಲ್ಲಿ ಪೊಲೀಸ್‌ ಭದ್ರತೆ ಬಿಗಿಗೊಳಿಸಲಾಗಿದೆ.

Advertisement

ಯುದ್ಧ ಆರಂಭಿಸಿದ್ದು ನಾವಲ್ಲ; ಆದರೆ ಮುಗಿಸುವುದು ನಾವೇ!
ಇಸ್ರೇಲ್‌-ಹಮಾಸ್‌ ಯುದ್ಧ ತೀವ್ರಗೊಂಡಿರುವಂತೆಯೇ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರು ಹಮಾಸ್‌ಗೆ ಎಚ್ಚರಿಕೆಭರಿತ ಸಂದೇಶ ರವಾನಿಸಿದ್ದಾರೆ. “ನಮಗೆ ಯುದ್ಧ ಬೇಕಿರ ಲಿಲ್ಲ. ಅತ್ಯಂತ ಭೀಕರ ಹಾಗೂ ಕ್ರೂರವಾಗಿ ನಮ್ಮ ಮೇಲೆ ಒತ್ತಡ ತರಲಾಯಿತು. ಈ ಯುದ್ಧವನ್ನು ಆರಂಭಿಸಿರುವುದು ನಾವಲ್ಲ, ಆದರೆ ಮುಗಿಸುವವರು ನಾವೇ’ ಎಂದು ನೆತನ್ಯಾಹು ಆಕ್ರೋಶಭರಿತರಾಗಿ ನುಡಿದಿದ್ದಾರೆ. ಈ ಮೂಲಕ ಗಾಜಾವನ್ನು ಹೇಳಹೆಸರಿಲ್ಲದಂತೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಜತೆಗೆ “ಹಮಾಸ್‌ ಎಂದರೆ ಐಸಿಸ್‌. ಐಸಿಸ್‌ ಅನ್ನು ಸೋಲಿಸಲು ಎಲ್ಲರೂ ಹೇಗೆ ಒಂದಾದರೋ ಅದೇ ರೀತಿ ಹಮಾಸ್‌ ಅನ್ನು ಸೋಲಿಸಲು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು’ ಎಂದೂ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಮಕ್ಕಳನ್ನು ಕಾಪಾಡಲು 7 ಉಗ್ರರ ಸದೆಬಡಿದು ಮಡಿದ ದಂಪತಿ
ಮಕ್ಕಳ ರಕ್ಷಣೆಗಾಗಿ ಪೋಷಕರು ಎಂಥ ಸಾಹಸವನ್ನೂ ಮಾಡಬಲ್ಲರು. ಹಮಾಸ್‌ ಉಗ್ರರ ಗುಂಡೇಟಿನಿಂದ ಹೆತ್ತ ಮಕ್ಕಳನ್ನು ಕಾಪಾಡಲು ಇಸ್ರೇಲ್‌ ದಂಪತಿ ಉಗ್ರರೊಟ್ಟಿಗೇ ಸೆಣಸಾಡಿ, 7 ಉಗ್ರರನ್ನು ಸದೆಬಡಿದು ಕಡೆಗೆ ತಾವೂ ಹೋರಾಡುತ್ತಲೇ ಮಡಿದಿರುವ ಘಟನೆ ಇದಕ್ಕೊಂದು ನಿದರ್ಶನ. ಕ#ರ್‌ ಅಜಾ ನಿವಾಸಿಗಳಾಗಿರುವ ಅದಾರ್‌ ಮತ್ತು ಇಟಾಯ್‌ ದಂಪತಿ ಇಬ್ಬರೂ ಇಸ್ರೇಲ್‌ ಸೇನಾ ಕಮಾಂಡರ್‌ಗಳಾಗಿದ್ದು, ಅವರ ಮನೆಗೆ ಹಮಾಸ್‌ ಉಗ್ರರು ಲಗ್ಗೆ ಇಟ್ಟು ಕೊಲ್ಲಲು ಯತ್ನಿಸಿದ್ದಾರೆ. ಈ ವೇಳೆ ದಂಪತಿ ವೀರಾವೇಶದಿಂದ ಹೋರಾಡಿ 7 ಉಗ್ರರನ್ನು ಕೊಂದು, ಮಕ್ಕಳನ್ನು ರಕ್ಷಿಸಿ ಬಳಿಕ ಸಾವನ್ನಪ್ಪಿದ್ದಾರೆ.

ಜೀವದ ಉಳಿವಿಗಾಗಿ ಪ್ರತೀಕ್ಷಣ ಪ್ರಾರ್ಥಿಸಿದ್ದೆ: ನಟಿ ನುಶ್ರತ್‌
“ಸಿನೆಮಾ ಸಮಾರಂಭದಲ್ಲಿ ಸಂಭ್ರಮಿಸಿ, ಒಬ್ಬರನ್ನೊಬ್ಬರು ಆಲಿಂಗಿಸಿ, ಮುಂದಿನ ಬಾರಿ ಸಿಗೋಣವೆಂದುಕೊಂಡು ಮುಗಿದ ರಾತ್ರಿಯ ಚಿತ್ರಣ ಬೆಳಗಾಗುವಷ್ಟರಲ್ಲಿ ರಣರಂಗವಾಗಿತ್ತು. ಗುಂಡಿನ ಮೊರೆತ ಕಿವಿಗಪ್ಪಳಿಸಿತ್ತು. ಅಲ್ಲಿ ಇದ್ದದ್ದು ಪ್ರಾರ್ಥನೆ ಮತ್ತು ಅಳು ಮಾತ್ರ.’ ಇದು ಇಸ್ರೇಲ್‌ನಿಂದ ಭಾರತಕ್ಕೆ ವಾಪಸಾದ ನಟಿ ನುಶ್ರುತ್‌ ಭರುಚಾ ಅವರ ಭಾವಪೂರ್ಣ ಮಾತು.
ಹೈಫಾ ಚಲನಚಿತ್ರೋತ್ಸವಕ್ಕೆಂದು ತೆರಳಿ, ಇಸ್ರೇಲ್‌ನಲ್ಲಿ ಸಿಲುಕಿದ್ದ ಅವರು ತಮ್ಮ ಅನುಭವವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾವು ದೇಶಕ್ಕೆ ಮರಳಬೇಕು ಎಂದುಕೊಂಡ ದಿನವೇ ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ನಡೆದಿತ್ತು. ಎಲ್ಲೆಡೆಯೂ ಗುಂಡಿನ ಮೊರೆತ. ರಸ್ತೆಯಲ್ಲಿ ವಾಹನಗಳ ಮೇಲೆ ತೆರೆದ ಜೀಪಿನಲ್ಲಿ ಉಗ್ರರು ದಾಳಿ ನಡೆಸುತ್ತಿದ್ದರು. ಬೆದರಿದ್ದ ನಾವು ಹೊಟೇಲ್‌ನ ನೆಲಮಾಳಿಗೆಯಲ್ಲಿ ಅವಿತೆವು. ಪ್ರತೀ ದೃಶ್ಯವೂ ನರಕಸದೃಶ. ಕಡೆಗೆ ರಾಯಭಾರ ಕಚೇರಿಯ ಸಹಾಯದಿಂದ ಸುರಕ್ಷಿತವಾಗಿ ನನ್ನ ದೇಶ ತಲುಪಿ, ಕುಟುಂಬ ಸೇರಿಕೊಂಡಿದ್ದೇನೆ. ಇದಕ್ಕೆ ಸರಕಾರಕ್ಕೆ, ರಾಯಭಾರ ಕಚೇರಿಗೆ ನಾನು ಋಣಿ. ಇಸ್ರೇಲ್‌ನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಇಸ್ರೇಲ್‌ನಲ್ಲಿ ಕಳೆದ ಕಡೆಯ 36 ಗಂಟೆಯ ದುಃಸ್ವಪ್ನದಂಥ ಅನುಭವ ನನ್ನ ಜೀವನದಿಂದ ಎಂದಿಗೂ ಮಾಸುವುದಿಲ್ಲ ಎಂದಿದ್ದಾರೆ.

ನಿರೂಪಕಿಯ ಸಹೋದರಿಯ ಭೀಕರ ಹತ್ಯೆ
ಇಸ್ರೇಲ್‌ನ ಪ್ರಖ್ಯಾತ ನಿರೂಪಕಿ ಮಾಯನ್‌ ಆ್ಯಡಂ ಅವರ ಸಹೋ ದರಿ ಮಾಪಲ್‌ ಆ್ಯಡಂ ಅವರನ್ನೂ ಹಮಾಸ್‌ ಉಗ್ರರು ಗುಂಡಿಕ್ಕಿ ಹತ್ಯೆಗೈದಿ ದ್ದಾರೆ. ತಂಗಿಯ ದುರಂತ ಸಾವಿನ ಬಗ್ಗೆ ಮಾಯನ್‌ ಜಾಲ ತಾಣದಲ್ಲಿ ಮಾಹಿತಿ ನೀಡಿದ್ದು, ಈ ಹೃದಯವಿದ್ರಾವಕ ಘಟನೆಗೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಮಾಪಲ್‌ ಅವರ ಕಡೆಯ ಫೋಟೋ ಹಂಚಿಕೊಂಡಿರುವ ಮಾಯನ್‌ “ನನ್ನ ಸಹೋದರಿ ಮತ್ತವಳ ಪ್ರಿಯಕರ ರಾಯ್‌ ಗಾಜಾದ ಬಳಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಹಮಾಸ್‌ ಉಗ್ರರು ದಾಳಿ ನಡೆಸಿದ್ದಾರೆ. ಅವ ರಿಂದ ತಪ್ಪಿಸಿಕೊಳ್ಳಲು ಮಾಪಲ್‌ ಟ್ರಕ್‌ ಒಂದರ ಕೆಳಗೆ ಅಡಗಿ, ಸತ್ತವ ರಂತೆ ನಟಿಸಿದ್ದಳು. ಆದರೂ ಅವ ಳನ್ನು ಹುಡುಕಿ ಗುಂಡಿಟ್ಟು ಹತ್ಯೆಗೈದಿ ದ್ದಾರೆ. ಆಕೆ ತನ್ನ ಪ್ರಿಯಕರನ ತೋಳಿನಲ್ಲಿ ಪ್ರಾಣ ಬಿಟ್ಟಿದ್ದಾಳೆ. ರಾಯ್‌ ಗುಂಡೇಟು ತಾಗಿಯೂ ಬದುಕುಳಿದಿದ್ದಾನೆ’ ಎಂದಿದ್ದಾರೆ.

ಈಜಿಪ್ಟ್ ಟ್ರಕ್‌ಗಳು ಯೂಟರ್ನ್
ಗಾಜಾ ಪಟ್ಟಿಗೆ ಆಹಾರ, ಇಂಧನ, ನೀರು ಸೇರಿದಂತೆ ಯಾವ ಅಗತ್ಯ ವಸ್ತುಗಳೂ ಸಿಗದಂತೆ ಇಸ್ರೇಲ್‌ ತಡೆದಿದ್ದರೂ, ಗಾಜಾದ ಜನರಿಗೆ ಆಹಾರ ಮತ್ತು ಇಂಧನ ಪೂರೈಸಲು ಈಜಿಪ್ಟ್ ಮುಂದಾಗಿತ್ತು. ಇದು ತಿಳಿಯುತ್ತಿದ್ದಂತೆಯೇ, “ನಿಮ್ಮ ಟ್ರಕ್‌ಗಳೇನಾದರೂ ಗಾಜಾದತ್ತ ಸುಳಿದರೆ ಅವುಗಳನ್ನು ಬಾಂಬ್‌ ಹಾಕಿ ನಾಶಮಾಡುತ್ತೇವೆ’ ಎಂದು ಇಸ್ರೇಲ್‌ ಎಚ್ಚರಿಕೆ ನೀಡಿದೆ. ಜತೆಗೆ ಗಾಜಾ ಸಮೀಪದ ರಫಾಹ್‌ ಕ್ರಾಸಿಂಗ್‌ನಲ್ಲಿ ಇಸ್ರೇಲ್‌ ಬಾಂಬ್‌ ದಾಳಿ ಮಾಡಿದೆ. ಹೀಗಾಗಿ ಈಜಿಪ್ಟ್ನ ಟ್ರಕ್‌ಗಳು ಯೂಟರ್ನ್ ಪಡೆದು ಹಿಂದಿರುಗಿವೆ.

Advertisement

Udayavani is now on Telegram. Click here to join our channel and stay updated with the latest news.

Next