ಬೈರೂತ್(ಇಸ್ರೇಲ್): ಇಸ್ರೇಲ್, ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಸೋಮವಾರ (ಸೆ.23) ಇಸ್ರೇಲ್ ಪಡೆ ಹೆಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿರಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ 500ಕ್ಕೂ ಅಧಿಕ ಜನರು ಲೆಬನಾನ್ ನಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
2006ರಿಂದ ನಡೆದ Cross Border ಯುದ್ಧದಲ್ಲಿ ಅತೀ ಭೀಕರ ದಾಳಿ ಇದಾಗಿದೆ ಎಂದು ವರದಿ ವಿವರಿಸಿದೆ. ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಲೆಬನಾನ್ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ ಸುಮಾರು 200 ರಾಕೆಟ್ ಗಳ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ಉತ್ತರ ಇಸ್ರೇಲ್ ನ ಹೈಫಾ, ಅಫುಲಾ, ನಜರೇತ್ ಸೇರಿದಂತೆ ಇತರ ನಗರಗಳ ಮೇಲೆ ಹೆಜ್ಬುಲ್ಲಾ ರಾತ್ರಿಯಿಡೀ ನಿರಂತರವಾಗಿ ರಾಕೆಟ್ ದಾಳಿ ನಡೆಸಿದೆ. ಇಸ್ರೆಲ್ ಮಿಲಿಟರಿ ಶಿಬಿರ, ವೈಮಾನಿಕ ನೆಲೆಯನ್ನು ಗುರಿಯಾಗಿರಿಸಿಕೊಂಡು ಹೆಜ್ಜುಲ್ಲಾ ಬಂಡುಕೋರರು ರಾಕೆಟ್ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮತ್ತು ಗಾಜಾ ನಡುವೆ ಸಂಘರ್ಷ ಆರಂಭಗೊಂಡಿದ್ದು, ಈವರೆಗೂ ಇಸ್ರೇಲ್, ಗಾಜಾ ನಡುವಿನ ಯುದ್ಧ ಮುಂದುವರಿದಿದ್ದು, ಅದು ಲೆಬನಾನ್ ಗೆ ವಿಸ್ತರಿಸಿದೆ.
ಹೆಜ್ಬುಲ್ಲಾ ರಾಕೆಟ್ ದಾಳಿಯನ್ನು Iron Dome ರಕ್ಷಣಾ ವ್ಯವಸ್ಥೆ ಮೂಲಕ ಹೊಡೆದುರುಳಿಸಿದ್ದು, ದಾಳಿಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ ಎಂದು ಐಡಿಎಫ್ (ಇಸ್ರೇಲ್ ಡಿಫೆನ್ಸ್ ಫೋರ್ಸ್) ವರಿಷ್ಠ ಲೆಫ್ಟಿನೆಂಟ್ ಜನರಲ್ ಹೆರ್ಝಿ ಹಲ್ವಿ ತಿಳಿಸಿದ್ದಾರೆ.