ಡಮಾಸ್ಕಸ್: ಭೂಕಂಪದಿಂದ ತತ್ತರಿಸಿ ಹೋಗಿರುವ ಸಿರಿಯಾದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ( ಫೆ.19 ರಂದು) ಡಮಾಸ್ಕಸ್ ಪ್ರದೇಶದ ವಸತಿ ಕಟ್ಟಡವೊಂದರ ಮೇಲೆ ಕ್ಷಿಪಣಿ ದಾಳಿಯಾಗಿದ್ದು,ಪರಿಣಾಮ ನಾಗರಿಕರು ಸೇರಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ಹಿರಿಯ ಭದ್ರತಾ ಅಧಿಕಾರಿಗಳು, ಭದ್ರತಾ ಶಾಖೆಗಳು ಮತ್ತು ಗುಪ್ತಚರ ಪ್ರಧಾನ ಕಚೇರಿಗಳು ನೆಲೆಯಾಗಿರುವ ಸಿರಿಯಾದ ರಾಜಧಾನಿಯ ಪ್ರದೇಶವಾದ ಕಾಫ್ರ್ ಸೌಸಾದಲ್ಲಿ ದಾಳಿ ಸಂಭವಿಸಿದೆ. ಕ್ಷಿಪಣಿ ದಾಳಿಯಿಂದ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
“ಭಾನುವಾರ ಇಸ್ರೇಲ್ ಸಿರಿಯಾದ ರಾಜಧಾನಿಯಲ್ಲಿ ನಡೆಸಿದ ದಾಳಿ ಅತ್ಯಂತ ಭೀಕರವಾದ ಇಸ್ರೇಲಿ ದಾಳಿಯಾಗಿದೆ”ರಾಮಿ ಅಬ್ದೆಲ್ ರಹಮಾನ್ ಎನ್ನುವ ಅಧಿಕಾರಿ ಹೇಳಿದ್ದಾರೆ.
ಇದಕ್ಕೂ ಮುನ್ನ ಜ.2 ರಂದು ಇಸ್ರೇಲ್ ಡಮಾಸ್ಕಸ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. 2011 ರಿಂದ ಇಸ್ರೇಲ್ ಸಿರಿಯಾದ ಮೇಲೆ ಅನೇಕ ಬಾರಿ ದಾಳಿ ನಡೆಸಿದೆ.