ಟೆಲ್‌ಅವೀವ್: ಜಗತ್ತಿನಲ್ಲಿ ದಾಖಲೆ ಮಾಡಲು ಏನೇನೋ ಚಿಂತನೆಗಳನ್ನು ಮಾಡಿ, ಅದನ್ನು ಕಾರ್ಯಗತ ಗೊಳಿಸುತ್ತಾರೆ. ತರಕಾರಿಗಳಲ್ಲಿ ಮನೆ ನಿರ್ಮಾಣ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ಬೆಳೆಯುವುದು ಇತ್ಯಾದಿ.
ಇಸ್ರೇಲ್‌ನ ಏರಿಯಲ್ ಚಾಹಿ ಎಂಬುವರು ಜಗತ್ತಿನ ಅತಿದೊಡ್ಡ ಸ್ಟ್ರಾಬೆರಿ ಬೆಳೆದು ಗಿನ್ನೆಸ್ ದಾಖಲೆಗೆ ಭಾಜನರಾಗಿದ್ದಾರೆ.
ಗಿನ್ನೆಸ್ ದಾಖಲೆಗಳ ಕಾಪಿಡುವ ಸಂಸ್ಥೆಯ ಅಧಿಕಾರಿಗಳೂ ಕೂಡ ಸ್ಥಳಕ್ಕೆ ಭೇಟಿ ನೀಡಿ. ಅವರು ಬೆಳೆದ ಸ್ಟ್ರಾಬೆರಿ ಜಗತ್ತಿನ ಅತ್ಯಂತ ದೊಡ್ಡ ಮತ್ತು ಅತ್ಯಂತ ತೂಕದ್ದಾಗಿದೆ ಎಂದು ಪರಿಶೀಲಿಸಿ, ಪ್ರಮಾಣ ಪತ್ರ ನೀಡಿದ್ದಾರೆ. ಅವರು ಬೆಳೆದ ಸ್ಟ್ರಾಬೆರಿ ಇಲಾನ್ ಎಂಬ ತಳಿಗೆ ಸೇರಿದ್ದಾಗಿದೆ.
ಗಿನ್ನೆಸ್ ದಾಖಲೆಗಳ ಸಂಸ್ಥೆಯೇ ಇನ್‌ಸ್ಟಾಗ್ರಾಂನಲ್ಲಿ ಅದನ್ನು ಚಿತ್ರೀಕರಿಸಿ, ವಿಡಿಯೋ ಅಪ್‌ಲೋಡ್ ಮಾಡಿದೆ. ಆರಂಭದಲ್ಲಿ ಏರಿಯಲ್ ಅವರು ತಮ್ಮ ಐಫೋನ್ ಮತ್ತು ಸ್ಟ್ರಾಬೆರಿಯನ್ನು ತೂಕ ಮಾಡಿದಾಗ ಭಾರೀ ವ್ಯತ್ಯಾಸ ಕಂಡುಬಂತು. ಅವರು ಹೊಂದಿದ್ದ ಐಫೋನ್ 194 ಗ್ರಾಂ ಆಗಿತ್ತು. ತಾವು ಬೆಳೆದ ಸ್ಟ್ರಾಬೆರಿ 289 ಗ್ರಾಂ ಆಗಿದ್ದ ಕಾರಣ, ಈ ಅಂಶವನ್ನು ಗಿನ್ನಿಸ್ ದಾಖಲೆಗಳ ಗಮನಕ್ಕೆ ತಂದಿದ್ದರು.
ದೈತ್ಯ ಗಾತ್ರದ ಹಣ್ಣು!
ಚಾಹಿ ಬೆಳೆದ ಸ್ಟ್ರಾಬೆರಿ 289 ಗ್ರಾಂ, 18 ಸೆಂ.ಮೀ. ಉದ್ದ, 34 ಸೆಂ.ಮೀ ಸುತ್ತಳತೆಯನ್ನು ಹೊಂದಿದೆ ಮತ್ತು 4 ಸೆಂ.ಮೀ. ದಪ್ಪ ಇದೆ. ಇಸ್ರೇಲ್‌ನ ಕಡಿಮಾ-ಝೊರೇನ್ ಎಂಬ ಸ್ಥಳದ ನಿವಾಸಿಯಾಗಿರುವ ಅವರು, ಈ ಸಾಧನೆ ಮಾಡಿದ್ದಾರೆ.