Advertisement

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!

01:38 AM Sep 29, 2024 | Team Udayavani |

ಬೈರುತ್‌/ಜೆರುಸಲೇಂ: ಹೆಜ್ಬುಲ್ಲಾ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ ಸೇನೆಗೆ ಅತಿದೊಡ್ಡ ಯಶಸ್ಸು ಸಿಕ್ಕಿದೆ. ಶುಕ್ರವಾರ ರಾತ್ರಿ ದಕ್ಷಿಣ ಲೆಬನಾನ್‌ನ ಉಗ್ರ ಸಂಘಟನೆಯ ಪ್ರಧಾನ ಕಚೇರಿ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ (64)ನನ್ನು ಹೊಡೆದುರುಳಿಸಿದೆ.

Advertisement

ಇತ್ತೀಚೆಗಷ್ಟೇ ಪೇಜರ್‌, ವಾಕಿಟಾಕಿ ಸ್ಫೋಟದ ಮೂಲಕ ಹೆಜ್ಬುಲ್ಲಾಗೆ ಬಿಸಿ ಮುಟ್ಟಿಸಿದ್ದ ಇಸ್ರೇಲ್‌ ಈಗ ಉಗ್ರರ ಪ್ರಧಾನ ಕಚೇರಿಗೇ ನುಗ್ಗಿ ಬಂಕರ್‌ನಲ್ಲಿ ಅಡಗಿದ್ದ ಮುಖ್ಯಸ್ಥನನ್ನೇ ಸದೆಬಡಿದಿದೆ. ಬರೋಬ್ಬರಿ 80 ಬಾಂಬ್‌ಗಳ ಮೂಲಕ ಆತನಿದ್ದ ಬಂಕರ್‌ ಸೇರಿದಂತೆ ಇಡೀ ಕಟ್ಟಡವನ್ನೇ ಧ್ವಂಸಗೊಳಿಸಲಾಗಿದೆ. ಇದು ಮಧ್ಯಪ್ರಾಚ್ಯದಲ್ಲಿ ಆರಂಭವಾಗಿರುವ ಸಂಘರ್ಷವನ್ನು ಮತ್ತೊಂದು ಮಜಲಿಗೆ ಒಯ್ಯುವ ಸ್ಪಷ್ಟ ಸುಳಿವನ್ನು ನೀಡಿದೆ.
ಶನಿವಾರ ಸಂಜೆ ವೇಳೆಗೆ ನಸ್ರಲ್ಲಾ ಸಾವನ್ನು ಹೆಜ್ಬುಲ್ಲಾ ಕೂಡ ಒಪ್ಪಿಕೊಂಡಿದೆ. ಮತ್ತೂಂದೆಡೆ ಆಕ್ರಮಣ ಮುಂದುವರಿಸುವುದಾಗಿ ಇಸ್ರೇಲ್‌ ಘೋಷಿಸಿದ್ದು, ಲೆಬನಾನ್‌ನಾದ್ಯಂತ ಆತಂಕ ಮನೆಮಾಡಿದೆ. ಲೆಬನಾನ್‌ ಕಡೆಗೆ ಬರುವ ಇರಾನ್‌ನ ಎಲ್ಲ ವಿಮಾನಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಇನ್ನೊಂದೆಡೆ ನಸ್ರಲ್ಲಾ ಬಳಿಕ ಇಸ್ರೇಲ್‌ ಗಮನ ಇರಾನ್‌ನ ಪರಮೋಚ್ಚ ನಾಯಕ ಆಯತೋಲ್ಲಾ ಅಲ್‌ ಖಮೇನಿ ಕಡೆಗೆ ಹೋಗುವ ಸಾಧ್ಯತೆ ಹಿನ್ನೆಲೆ ಯಲ್ಲಿ ಖಮೇನಿಯನ್ನು ಇರಾನ್‌ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್‌ “ನ್ಯೂ ಆರ್ಡರ್‌’
ಶುಕ್ರವಾರ ರಾತ್ರಿ “ಆಪರೇಷನ್‌ ನ್ಯೂ ಆರ್ಡರ್‌’ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬರೋಬ್ಬರಿ 80 ಟನ್‌ ಬಾಂಬ್‌ಗಳನ್ನು ಉಗ್ರರ ಕೇಂದ್ರ ತಾಣದ ಮೇಲೆ ಸುರಿದವು. ಸತತ 32 ವರ್ಷಗಳಿಂದ ಹೆಜ್ಬುಲ್ಲಾ ನೇತೃತ್ವ ವಹಿಸಿದ್ದ ಹಸನ್‌ ನಸ್ರಲ್ಲಾ ಮೃತಪಟ್ಟಿದ್ದಾನೆ.

ಅದೇ ಕಟ್ಟಡದಲ್ಲಿದ್ದ ಮತ್ತೂಬ್ಬ ಉಗ್ರ ಕಮಾಂಡರ್‌ ಅಲಿ ಕರ್ಕಿ, ಹೆಜ್ಬುಲ್ಲಾದ ದಕ್ಷಿಣ ಲೆಬನಾನ್‌ನ ಕ್ಷಿಪಣಿ ಘಟಕದ ಕಮಾಂಡರ್‌ ಮುಹಮ್ಮಲ್‌ ಅಲಿ ಇಸ್ಮಾಯಿಲ್‌ ಸೇರಿದಂತೆ ಹಲವು ಪ್ರಮುಖರು, ಇರಾನ್‌ ಸೇನೆಯ ಉಪ ಕಮಾಂಡರ್‌ ಕೂಡ ಹತರಾಗಿದ್ದಾರೆ ಎಂದು ಶನಿವಾರ ಇಸ್ರೇಲ್‌ ಸೇನೆ ಟ್ವೀಟ್‌ ಮಾಡಿದೆ. ಅಲ್ಲದೆ “ಹಸನ್‌ ನಸ್ರಲ್ಲಾ ಇನ್ನು ಜಗತ್ತನ್ನು ಭಯಭೀತಗೊಳಿಸುವುದಿಲ್ಲ’ ಎಂದೂ ಹೇಳಿದೆ.

Advertisement

ಲೆಬನಾನ್‌ನಲ್ಲಿ ದೊಡ್ಡಮಟ್ಟದ ಪ್ರಭಾವ ಹೊಂದಿದ್ದ ನಸ್ರಲ್ಲಾನನ್ನು ಯಾವುದೇ ದೇಶ
ದೊಂದಿಗೆ ಶಾಂತಿಯ ದೂತನಾಗಬಲ್ಲ ಏಕೈಕ ನಾಯಕ ಎಂದೇ ಅಲ್ಲಿನ ಶಿಯಾಗಳು ಪರಿಗಣಿಸಿದ್ದರು. 3 ದಶಕಗಳಿಂದ ಹೆಜ್ಬುಲ್ಲಾ ಸಾರಥ್ಯ ವಹಿಸಿದ್ದ ಆತ 1982ರಿಂದಲೂ ಇಸ್ರೇಲನ್ನು ಕೆಣಕುತ್ತಲೇ ಬಂದಿದ್ದ.

ಇಸ್ರೇಲ್‌ ಹೆಜ್ಬುಲ್ಲಾದ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೂ ಬಾಂಬ್‌ ದಾಳಿ ನಡೆಸಿದೆ. 6 ಕಟ್ಟಡಗಳು ನೆಲಸಮಗೊಂಡಿದ್ದು, 91 ಮಂದಿ ಗಾಯಗೊಂಡಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ಹೇಳಿದೆ. ಆದರೆ ಇದನ್ನು ಹೆಜ್ಬುಲ್ಲಾ ಅಲ್ಲಗಳೆದಿದೆ. ಈ ದಾಳಿಗೆ ಪ್ರತಿಯಾಗಿ ಹೆಜ್ಬುಲ್ಲಾ ರಾಕೆಟ್‌ಗಳ ಮಳೆಯನ್ನೇ ಸುರಿಸಿದೆ.

ಯಾರು ಈ ನಸ್ರಲ್ಲಾ?
ಲೆಬನಾನ್‌ನ ತರಕಾರಿ ವ್ಯಾಪಾರಿಯ ಮಗ
1992ರಲ್ಲಿ 31ನೇ ವಯಸ್ಸಿನಲ್ಲೇ ಹೆಜ್ಬುಲ್ಲಾ ನೇತೃತ್ವ
ಹಮಾಸ್‌, ಇರಾನ್‌, ಇರಾಕ್‌ ಉಗ್ರರಿಗೆ ತರಬೇತಿ
ಇರಾನ್‌ನಿಂದ ಕ್ಷಿಪಣಿಗಳನ್ನು ಪಡೆದು ಇಸ್ರೇಲ್‌ ವಿರುದ್ಧ ಪ್ರಯೋ ಗಿಸುವಲ್ಲಿ ಪ್ರಮುಖ ಪಾತ್ರ

ಆಪರೇಷನ್‌ ನ್ಯೂ ಆರ್ಡರ್‌
ಹೆಜ್ಬುಲ್ಲಾ ಪ್ರಧಾನ ಕಚೇರಿಯಲ್ಲಿ ಕಮಾಂಡರ್‌ಗಳ ಸಭೆ ಬಗ್ಗೆ ಮಾಹಿತಿ ಸಂಗ್ರಹ
ಇಲ್ಲಿನ ವಸತಿ ಕಟ್ಟಡವೊಂದರ ಕೆಳಗೆ ಬಂಕರ್‌ನಲ್ಲಿ ತಂಗಿದ್ದ ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ
ಕಾಂಕ್ರೀಟ್‌ ಕಟ್ಟಡಗಳನ್ನೇ ಭೇದಿ ಸುವ ಲೇಸರ್‌ ನಿರ್ದೇಶಿತ 80 ಟನ್‌ ಬಾಂಬ್‌ ಹಾಕಿದ ಇಸ್ರೇಲ್‌
ನಸ್ರಲ್ಲಾ ಸೇರಿ ಹಲವು ಉಗ್ರ ಕಮಾಂಡರ್‌ಗಳ ಸಾವು

ಹಶಾಂ ಸಫಿಯದೀನ್‌ ಮುಂದಿನ ನಾಯಕ?
ಹೆಜ್ಬುಲ್ಲಾದ ಮುಂದಿನ ನಾಯಕನಾಗಿ ಅಸುನೀಗಿದ ಉಗ್ರ ನಸ್ರಲ್ಲಾನ ಸಂಬಂಧಿ ಹಶಾಂ ಸಫಿಯದೀನ್‌ ಆಯ್ಕೆಯಾಗುವ ಸಾಧ್ಯತೆಗಳಿವೆ. ಸದ್ಯ ಸಫಿಯದೀನ್‌ ಸಂಘಟನೆಯ ರಾಜಕೀಯ ಮತ್ತು ಹಣಕಾಸು ವಿಭಾಗದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ. 2017ರಲ್ಲಿ ಆತನನ್ನು ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿತ್ತು. ನಸ್ರಲ್ಲಾ ಕೂಡ ಈತನನ್ನೇ ಮುಂದಿನ ನಾಯಕ ಎಂಬಂತೆ ಬೆಳೆಸುತ್ತಿದ್ದ.

ಇಸ್ರೇಲ್‌ನ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆ
ಗಾಜಾ ಮೇಲೆ ವಾಯು ದಾಳಿ
2011ರಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ಸತತ ವಾಯುದಾಳಿ
ರಿಟರ್ನಿಂಗ್‌ ಎಕೋ -ಪಿಆರ್‌ಸಿ ನಾಯಕನ ಗುರಿಯಾಗಿಸಿ 2012ರಲ್ಲಿ ದಾಳಿ. ಇಸ್ರೇಲ್‌ಗೆ ಯಶಸ್ಸು
ಪಿಲ್ಲರ್‌ ಆಫ್ ಡಿಫೆನ್ಸ್‌- ಹಮಾಸ್‌ ನಾಯಕ ಅಹ್ಮದ್‌ ಜಬೇರಿ ಗುರಿಯಾಗಿಸಿ 2012ರಲ್ಲಿ ದಾಳಿ
ವಾಲ್‌ ಗಾರ್ಡಿಯನ್‌- ಹಮಾಸ್‌ ಉಗ್ರರ ನಾಶಕ್ಕಾಗಿ 2021ರಲ್ಲಿ ಕೈಕೊಂಡ ಸೇನಾದಾಳಿ
ಬ್ರೇಕಿಂಗ್‌ ಡಾನ್‌-2021ರಲ್ಲಿ ಗಾಜಾ ಪಟ್ಟಿಯ ಮೇಲೆ 147 ಕ್ಷಿಪಣಿಗಳಿಂದ ದಾಳಿ

ದಾಳಿ ವೇಳೆ ಇರಾನ್‌ ಅಧಿಕಾರಿ ಸಾವು
ದುಬಾೖ: ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲ ಹತ್ಯೆಗಾಗಿ ಬೈರುತ್‌ನಲ್ಲಿ ಇಸ್ರೇಲ್‌ ಸೇನೆ ನಡೆಸಿದ ದಾಳಿ ವೇಳೆ ಇರಾನ್‌ನ ಅರೆಸೇನೆಯ ಪ್ರಮುಖ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಇರಾನಿನ ಸುದ್ಧಿ ಸಂಸ್ಥೆಗಳು ವರದಿ ಮಾಡಿವೆ. ಜನರಲ್‌ ಅಬ್ಟಾಸ್‌ ನಿಲೊ#ರುಶಾನ್‌(58) ಅವರ ಸಾವಿನ ಬಗ್ಗೆ ಇರಾನ್‌ ಸರಕಾರ ದೃಢಪಡಿಸಿದೆ. ಈ ಅಧಿಕಾರಿಯು “ಲೆಬನಾನ್‌ ಜನರ ಅತಿಥಿ’ ಎಂದು ಬಣ್ಣಿಸಿದ್ದಾರೆ. ಅಂತಾ­ರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕು ಇರಾನ್‌ಗೆ ಇದೆ ಎಂದು ಖಘನ್‌ ಹೇಳಿರುವುದಾಗಿ ವರದಿಯಾಗಿದೆ.

ಸುರಕ್ಷಿತ ಪ್ರದೇಶಕ್ಕೆ ಖಮೇನಿ ಶಿಫ್ಟ್!
ನಸ್ರಲ್ಲಾ ಹತ್ಯೆ ಸುದ್ದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಇರಾನ್‌, ತನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಖಮೇನಿ ಅವರಿಗೆ
ಅತ್ಯುನ್ನತ ಭದ್ರತೆಯನ್ನೂ ಕಲ್ಪಿಸಲಾಗಿದೆ.

ಗಾಜಾ ಯುದ್ಧದಿಂದ ಇಸ್ರೇಲ್‌ ಇನ್ನೂ ಪಾಠ ಕಲಿತಿಲ್ಲ: ಖಮೇನಿ
ಟೆಹರಾನ್‌: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಸ್ರೇಲ್‌ ಪಾಠ ಕಲಿತಂತಿಲ್ಲ ಎಂದು ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಹತ್ಯೆ ಹಿನ್ನೆಲೆಯಲ್ಲಿ ಇರಾನ್‌ನ ಪರಮೋತ್ಛ ನಾಯಕ ಅಯತೋಲ್ಲಾ ಅಲಿ ಖಮೇನಿ ತಿಳಿಸಿದ್ದಾರೆ. ಲೆಬನಾನ್‌ನಲ್ಲಿ ಸಾಮೂಹಿಕ ಹತ್ಯೆಯನ್ನು ನಡೆಸುತ್ತಿರುವ ಇಸ್ರೇಲ್‌ ತನ್ನ ಅನಾಗರಿಕತೆ ಯನ್ನು ಮತ್ತೂಮ್ಮೆ ಪ್ರದರ್ಶಿಸಿದೆ. ದೂರದೃಷ್ಟಿ ಇಲ್ಲದ ಮತ್ತು ಮೂರ್ಖ ನೀತಿಗಳನ್ನು ಹೊಂದಿರುವುದನ್ನು ಇಸ್ರೇಲ್‌ ಸಾಬೀತುಪಡಿಸಿದೆ. ಸಾಮೂಹಿಕ ಹತ್ಯೆ ಕೈಗೊಳ್ಳುವುದರಿಂದ ಸಂಘಟನೆಯನ್ನು ದುರ್ಬಲ ಗೊಳಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next