Advertisement

Israel War: ಇಸ್ರೇಲ್‌ ಮೇಲೆ ಹಮಾಸ್‌ 5 ಸಾವಿರ ರಾಕೆಟ್‌ ದಾಳಿ; ಸಿಡಿದೆದ್ದ ಇಸ್ರೇಲ್

06:09 PM Oct 07, 2023 | Team Udayavani |

ಪ್ಯಾಲೆಸ್ತೇನ್:‌ ಪ್ಯಾಲೆಸ್ತೇನ್‌ ನ ಹಮಾಸ್‌ ಉಗ್ರರು ಇಸ್ರೇಲ್‌ ನಗರದೊಳಕ್ಕೆ ನುಗ್ಗುವ ಮೂಲಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಗಾಜಾಪಟ್ಟಿಯಿಂದ ಸಾವಿರಾರು ರಾಕೆಟ್‌ ದಾಳಿ ನಡೆಸಿದ್ದು, ಇದರ ಪರಿಣಾಮ 22 ಮಂದಿ ಇಸ್ರೇಲಿಗರು ಸಾವನ್ನಪ್ಪಿದ್ದಾರೆ. ಇದರಿಂದ ಕೆರಳಿರುವ ಇಸ್ರೇಲ್‌ ಪ್ರತೀಕಾರ ತೆಗೆದುಕೊಳ್ಳುವುದಾಗಿ ಶಪಥಗೈದಿದ್ದು ಯುದ್ಧ ಘೋಷಿಸಿದೆ.‌

Advertisement

ಇದನ್ನೂ ಓದಿ:Israel ಕಷ್ಟದ ಸಮಯದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ : ಪ್ರಧಾನಿ ಮೋದಿ

ʼ ಇಸ್ರೇಲ್‌ ನಿವಾಸಿಗಳೇ, ನಾವು ಯುದ್ಧವನ್ನು ಘೋಷಿಸಿದ್ದೇವೆ. ಹಮಾಸ್‌ ಉಗ್ರರು ರಾಕೆಟ್‌ ದಾಳಿ ನಡೆಸಿದ್ದು, ಇದಕ್ಕೆ ತಕ್ಕ ಬೆಲೆ ತೆರಲಿದ್ದಾರೆ. ಇದೊಂದು ಕಾರ್ಯಾಚರಣೆಯಲ್ಲ, ಇದು ಯುದ್ಧವಾಗಿದೆ. ನಾವು ಈ ಯುದ್ಧದಲ್ಲಿ ಜಯಗಳಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಹಮಾಸ್‌ ಬಂಡುಕೋರರು 5,000ಕ್ಕೂ ಅಧಿಕ ರಾಕೆಟ್‌ ದಾಳಿ ನಡೆಸಿದ್ದು, ಇಸ್ರೇಲ್‌ ರಕ್ಷಣಾ ಪಡೆ ಒಳನುಸುಳಿರುವ ಹಮಾಸ್‌ ಉಗ್ರರ ಹೆಡೆಮುರಿ ಕಟ್ಟಲು ಸಿದ್ಧವಾಗಿದೆ. ಹಮಾಸ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಮೂಲಕ ಬಹುದೊಡ್ಡ ಪ್ರಮಾದ ಎಸಗಿದೆ. ದೇಶದ ಪ್ರತಿಯೊಂದು ಭಾಗದಲ್ಲಿಯೂ ಇಸ್ರೇಲ್‌ ಸೇನೆ ನಮ್ಮ ಶತ್ರುಗಳ ವಿರುದ್ಧ ಹೋರಾಡಲಿದೆ ಎಂದು ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ತಿಳಿಸಿದ್ದಾರೆ.

Advertisement

ನಾವು ದೇವರ ನೆರವಿನೊಂದಿಗೆ ಈ ಎಲ್ಲಾ ಸಂಘರ್ಷವನ್ನು ಕೊನೆಗೊಳಿಸಲು ಮುಂದಾಗಿದ್ದೇವೆ. 20 ನಿಮಿಷಗಳ ಅವಧಿಯಲ್ಲಿ 5,000 ಸಾವಿರಕ್ಕೂ ಅಧಿಕ ರಾಕೆಟ್‌ ದಾಳಿ ನಡೆಸಿದ್ದು, ಇದೊಂದು ಅಲ್‌ ಅಕ್ಸಾ ಪ್ರವಾಹ ಕಾರ್ಯಾಚರಣೆಯಾಗಿದೆ ಎಂದು ಹಮಾಸ್‌ ಘೋಷಿಸಿದೆ.

ಇಸ್ರೇಲ್‌ ಗಡಿಯ ಗಾಜಾಪಟ್ಟಿಯಲ್ಲಿ ವಾಸವಾಗಿರುವ ನೂರಾರು ನಿವಾಸಿಗಳು ಬ್ಲ್ಯಾಂಕೆಟ್‌ ಹಾಗೂ ಆಹಾರ ಪೊಟ್ಟಣಗಳೊಂದಿಗೆ ಮನೆಯನ್ನು ತೊರೆಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭಾರತೀಯ ನಿವಾಸಿಗಳಿಗೆ ಮನವಿ:

ಇಸ್ರೇಲ್‌ ನಲ್ಲಿ ವಾಸವಾಗಿರುವ ಭಾರತೀಯ ನಾಗರಿಕರು ಜಾಗರೂಕರಾಗಿದ್ದು, ಸೇನೆಯ ಸಲಹೆಯನ್ನು ಗಮನಿಸುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಅನಾವಶ್ಯಕ ತಿರುಗಾಟ ನಡೆಸದಂತೆ ಸುರಕ್ಷಿತಾ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಭಾರತ ಮನವಿ ಮಾಡಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next