ಗಾಜಾಪಟ್ಟಿ: ಒಮ್ಮೆಲೇ ಹಮಾಸ್ ಉಗ್ರರ ಭಾರಿ ಹೊಂಚು ದಾಳಿಗೆ ನಲುಗಿದ ಇಸ್ರೇಲ್ ಗಾಯಗೊಂಡಿರುವ ಸಿಂಹದಂತಾಗಿದ್ದು, ಮೈಕೊಡವಿ ಎದ್ದಿದ್ದು ಈಗಾಗಲೇ ಉಗ್ರರ ವಿರುದ್ಧ ಹಲವು ಕಾರ್ಯಾಚರಣೆಗಳನ್ನು ನಡೆಸಿದ್ದು ಇನ್ನಷ್ಟು ಉಗ್ರ ಸ್ವರೂಪದ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಗಾಜಾ ಪ್ರದೇಶಕ್ಕೆ ಆಹಾರ ಮತ್ತು ಇಂಧನ ಸಾಗಾಟಕ್ಕೆ ನಿಷೇಧ ಸೇರಿದಂತೆ “ಸಂಪೂರ್ಣ ದಿಗ್ಬಂಧನ” ವಿಧಿಸುವುದಾಗಿ ಸೋಮವಾರ ಹೇಳಿದೆ.
ಶನಿವಾರ ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ ನಂತರ ಗಾಜಾ ಈಗಾಗಲೇ ಸಂಪೂರ್ಣ ವಿದ್ಯುತ್ ಬ್ಲಾಕೌಟ್ ಅನ್ನು ಎದುರಿಸುತ್ತಿದೆ. ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆಗೆ ಆದೇಶ ನೀಡಿದೆ. ಪ್ರದೇಶಕ್ಕೆ ಯಾವುದೇ ವಿದ್ಯುತ್, ಆಹಾರ, ಇಂಧನ ಸರಬರಾಜು ಮಾಡಲಾಗುವುದಿಲ್ಲ ಎಂದು ಹೇಳಿದೆ.
ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, “ ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆಯನ್ನು ಹಾಕಲು ಆದೇಶಿಸಿದ್ದೇನೆ. ವಿದ್ಯುತ್, ಆಹಾರವಿಲ್ಲ, ಇಂಧನವಿಲ್ಲ, ಎಲ್ಲವೂ ಮುಚ್ಚಲ್ಪಟ್ಟಿದೆ. ನಾವು ಮಾನವ ಮೃಗಗಳೊಂದಿಗೆ ಹೋರಾಡುತ್ತಿದ್ದೇವೆ ಮತ್ತು ನಾವು ಅದರಂತೆ ವರ್ತಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.
2007 ರಲ್ಲಿ ಹಮಾಸ್ ಪ್ರತಿಸ್ಪರ್ಧಿ ಪ್ಯಾಲೆಸ್ತೀನ್ ಪಡೆಗಳಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಮೇಲೆ ವಿವಿಧ ಹಂತದ ದಿಗ್ಬಂಧನವನ್ನು ವಿಧಿಸಿವೆ.
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಮೂರು ದಿನಗಳ ಸಂಘರ್ಷದ ನಂತರ ಈ ದಿಗ್ಬಂಧನ ಆದೇಶ ಹೊರಡಿಸಲಾಗಿದ್ದು ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
48 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆಯ ಬಳಿಕ ಇಸ್ರೇಲ್‌ನ ಸೇನೆಯು ಸೋಮವಾರ ಗಾಜಾದ ಸುತ್ತಲಿನ ಎಲ್ಲ ಪ್ರದೇಶಗಳ ಉಗ್ರರನ್ನು ಹಿಮ್ಮೆಟ್ಟಿಸಿ ನಿಯಂತ್ರಣವನ್ನು ಹಿಂಪಡೆದಿದೆ ಎಂದು ಹೇಳಿದೆ.