Advertisement

Israel-Hamas ಘರ್ಷಣೆ: ದ್ವಿ ರಾಷ್ಟ್ರ ನೀತಿಯೊಂದೇ ಪರಿಹಾರ?: ಏನಿದು ನೀತಿ?

11:50 PM Oct 24, 2023 | Team Udayavani |

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಸಂಘರ್ಷ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿ ಮುಂದುವರಿಸಿದ್ದು, ಪರಿಸ್ಥಿತಿ ತೀರಾ ಭಯಾನಕವಾಗುತ್ತಿದೆ. ಇದರ ನಡುವೆಯೇ, ಅರಬ್‌ ದೇಶಗಳು ಸೇರಿ ಕೆಲವೊಂದು ದೇಶಗಳು ದ್ವಿ ರಾಷ್ಟ್ರ ನಿಯಮವನ್ನು ಮತ್ತೆ ಪ್ರಸ್ತಾವಿಸಿದ್ದು, ಇದನ್ನು ಜಾರಿಗೆ ತಂದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂಬುದು ಇವರ ಆಶಯ.

Advertisement

ಏನಿದು ದ್ವಿ ರಾಷ್ಟ್ರ ನೀತಿ?
ಯಹೂದಿಗಳಿಗೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನಿಯರಿಗೆ ಪ್ಯಾಲೆಸ್ತೀನ್‌ ರಾಷ್ಟ್ರ ನಿರ್ಮಾಣ ಮಾಡುವುದು ಇದರ ಉದ್ದೇಶ. 1978ರಲ್ಲಿ ಕ್ಯಾಂಪ್‌ ಡೇವಿಡ್‌ ಒಪ್ಪಂದದಲ್ಲಿ ಇದು ಪ್ರಸ್ತಾವಿತವಾಗಿತ್ತು. ಈ ಒಪ್ಪಂದಕ್ಕೆ ಈಜಿಪ್ಟ್ ಮತ್ತು ಇಸ್ರೇಲ್‌ ಸಹಿ ಮಾಡಿದ್ದವು. ಆಗ ಪ್ಯಾಲೆಸ್ತೀನ್‌ ಲಿಬರೇಶನ್‌ ಆರ್ಗನೈಸೇಶನ್‌ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿತ್ತು. 1993ರಿಂದ 1995ರ ವರೆಗೆ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ದೇಶಗಳನ್ನು ಪ್ರತ್ಯೇಕವಾಗಿಯೇ ಗುರುತಿಸಲಾಗಿತ್ತು. ಆದರೆ ಹಮಾಸ್‌ ಉಗ್ರರು ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ಸಂದರ್ಭದಲ್ಲಿ ಇಸ್ರೇಲ್‌ನವರೇ ಪ್ಯಾಲೆಸ್ತೀನ್‌ಗೆ ಭದ್ರತೆ ನೀಡುವ ಕುರಿತಂತೆಯೂ ಪ್ರಸ್ತಾವಿತವಾಗಿತ್ತು.

ಮತ್ತೆ ಮುನ್ನೆಲೆಗೆ
ಈ ಬಾರಿ ಹಮಾಸ್‌ ಉಗ್ರರು, ಇಸ್ರೇಲ್‌ ಮೇಲೆ ದಿಢೀರ್‌ ಆಗಿ ದಾಳಿ ಮಾಡಿ ಅಪಾರ ಸಾವು ನೋವಿಗೆ ಕಾರಣವಾಗಿದ್ದರಿಂದ ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿದೆ. ಈ ಸಂಘರ್ಷವನ್ನು ಅಂತ್ಯವಾಡಲು ಅರಬ್‌ ದೇಶಗಳು ಸೇರಿದಂತೆ ನೆರೆ ಹೊರೆಯ ದೇಶಗಳು ಪ್ರಯತ್ನಿಸುತ್ತಿವೆ.

ಕೈರೋ ಶಾಂತಿ ಶೃಂಗ
ಅರಬ್‌ ದೇಶಗಳು ಮತ್ತು ಐರೋಪ್ಯ ದೇಶಗಳು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಸರ್ವ ಪ್ರಯತ್ನ ಮಾಡುತ್ತಿವೆ. ಹೀಗಾಗಿ ಈಜಿಪ್ಟ್ನ ಕೈರೋದಲ್ಲಿ ಮೊದಲ ಶಾಂತಿ ಶೃಂಗ ಸಭೆ ನಡೆದಿದೆ. ಇದರಲ್ಲಿ ಅರಬ್‌ ದೇಶಗಳ ರಾಜಮನೆತನಗಳ ನಾಯಕರು, ಮಧ್ಯ ಪ್ರಾಚ್ಯ, ಯೂರೋಪ್‌, ಏಷ್ಯಾ, ಕೆನಡಾ ಮತ್ತು ಬ್ರೆಜಿಲ್‌ನ ಪ್ರತಿನಿಧಿಗಳು ಭಾಗಿಯಾಗಿದ್ದರು. ಆದರೆ ಅಮೆರಿಕ ಮತ್ತು ಇಸ್ರೇಲ್‌ಗೆ ಆಹ್ವಾನ ಇರಲಿಲ್ಲ.

ಗಾಜಾ ಪಟ್ಟಿಯಿಂದ ಒಕ್ಕಲೆಬ್ಬಿಸುವುದಕ್ಕೆ ವಿರೋಧ

Advertisement

ಈ ಶೃಂಗಸಭೆಯಲ್ಲಿ ಪ್ರಮುಖವಾಗಿ ಯುದ್ಧ ಮತ್ತು ಗಾಜಾ ಪಟ್ಟಿಯಲ್ಲಿನ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ. ಗಾಜಾ ಪಟ್ಟಿಯಿಂದ ಜನರನ್ನು ಒಕ್ಕೆಲೆಬ್ಬಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಪ್ಯಾಲೆಸ್ತೀನ್‌ ಜನರ ಜೀವವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜೋರ್ಡಾನ್‌ ಹೇಳಿದೆ. ಇದೇ ಶೃಂಗದಲ್ಲಿ ಭಾಗಿಯಾಗಿದ್ದ ಭಾರತವೂ, ದ್ವಿರಾಷ್ಟ್ರ ನೀತಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next