Advertisement
ಹಮಾಸ್ ಉಗ್ರರು ಕಳೆದ ವರ್ಷದ ಅಕ್ಟೋಬರ್ 7ರಂದು ಏಕಾಏಕಿ ಇಸ್ರೇಲ್ ಮೇಲೆ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸಿದ ಬಳಿಕ ಇತ್ತಂಡಗಳ ನಡುವೆ ಕಳೆದ 115 ದಿನಗಳಿಂದ ಯುದ್ಧ ನಡೆಯುತ್ತಿದೆ. ಯುದ್ಧವನ್ನು ಸ್ಥಗಿತಗೊಳಿಸುವ ದಿಸೆಯಲ್ಲಿ ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆ ವಹಿಸಿದ್ದು, ಈ ಎರಡು ದೇಶಗಳ ಸಂಧಾನ ಪ್ರಯತ್ನಗಳಿಗೆ ಅಮೆರಿಕ ಬೆಂಬಲ ನೀಡುತ್ತಲೇ ಬಂದಿದೆ. ಕದನವಿರಾಮ ಘೋಷಣೆ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ತೆರನಾದ ಆಗ್ರಹ, ಒತ್ತಡಗಳ ಹಿನ್ನೆಲೆಯಲ್ಲಿ ಇಸ್ರೇಲ್ ಈಗ ಕದನವಿರಾಮದ ಪ್ರಸ್ತಾವವೊಂದನ್ನು ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳಾದ ಈಜಿಪ್ಟ್ ಮತ್ತು ಕತಾರ್‌ನ ಮುಂದಿಟ್ಟಿದ್ದು ಈ ಪ್ರಸ್ತಾವದ ಬಗೆಗೆ ಅಮೆರಿಕಕ್ಕೂ ಮಾಹಿತಿ ನೀಡಲಾಗಿದೆ. ಈ ಸಂಬಂಧ ಮಾತು ಕತೆಗಾಗಿ ಅಮೆರಿಕ ತನ್ನ ರಾಜತಾಂತ್ರಿಕ ಪ್ರತಿನಿಧಿಯನ್ನು ಈಜಿಪ್ಟ್ ಮತ್ತು ಕತಾರ್‌ಗೆ ಕಳುಹಿಸಿಕೊಟ್ಟಿದೆ.
Related Articles
Advertisement
ಇತ್ತಂಡಗಳ ಬೇಡಿಕೆ ಏನು?ಹಮಾಸ್ ಉಗ್ರರು ಇನ್ನೂ 110 ಮಂದಿ ತನ್ನ ನಾಗರಿಕರನ್ನು ಒತ್ತೆಸೆರೆಯಲ್ಲಿರಿಸಿಕೊಂಡಿದ್ದಾರಲ್ಲದೆ, ಅ.7ರಂದು ನಡೆಸಿದ ಕ್ಷಿಪಣಿ ದಾಳಿ ವೇಳೆ ಸಾವನ್ನಪ್ಪಿದ್ದ ಸುಮಾರು 25ರಷ್ಟು ಮಂದಿಯ ಶವಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಎಲ್ಲ ಒತ್ತೆಯಾಳುಗಳ ಬಿಡುಗಡೆ ಮತ್ತು ತನ್ನ ನಾಗರಿಕರ ಶವಗಳನ್ನು ತನಗೆ ಮರಳಿಸುವ ಅಂಶ ಕದನವಿರಾಮ ಒಪ್ಪಂದದಲ್ಲಿ ಸೇರ್ಪಡೆಯಾಗಿರಬೇಕು. ಅಷ್ಟು ಮಾತ್ರವಲ್ಲದೆ ತಾತ್ಕಾಲಿಕ ಕದನವಿರಾಮ ಘೋಷಣೆಗೆ ತಾನು ಸಿದ್ಧನಿರುವೆನಾದರೂ ಹಮಾಸ್ ಉಗ್ರರ ನಿರ್ನಾಮದ ತನ್ನ ಗುರಿ ಈಡೇರುವವರೆಗೆ ಯುದ್ಧ ಮುಂದುವರಿಸುವುದಾಗಿ ಇಸ್ರೇಲ್ ಬಿಗಿ ಪಟ್ಟು ಹಿಡಿದಿದೆ. ಇದೇ ವೇಳೆ ಹಮಾಸ್ ಉಗ್ರರು, ಇಸ್ರೇಲ್‌ನ ಕಾರಾಗೃಹಗಳಲ್ಲಿರುವ ಅ. 7ರ ದಾಳಿ ಸಂಬಂಧ ಶಿಕ್ಷೆಗೊಳಗಾಗಿರುವ ಅಪರಾಧಿಗಳು ಮತ್ತು ನೂರಾರು ಹಮಾಸ್ ಉಗ್ರರ ಸಹಿತ ಸಹಸ್ರಾರು ಮಂದಿ ಪ್ಯಾಲೆಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು. ಅಲ್ಲದೆ, ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸುತ್ತಲೇ ಬಂದಿರುವ ಆಕ್ರಮಣವನ್ನು ಸ್ಥಗಿತಗೊಳಿಸಬೇಕು ಮತ್ತು ಗಾಜಾದಿಂದ ಎಲ್ಲ ಇಸ್ರೇಲಿ ಪಡೆಗಳನ್ನು ಶಾಶ್ವತವಾಗಿ ವಾಪಸು ಕರೆಸಿಕೊಳ್ಳಬೇಕೆಂಬ ಬೇಡಿಕೆಗಳನ್ನು ಇರಿಸಿದ್ದಾರೆ. ಪ್ರಸ್ತಾವಿತ ಕದನವಿರಾಮದಲ್ಲಿರುವ ಅಂಶಗಳು ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕದನವಿರಾಮ ಘೋಷಣೆ ಸಂಬಂಧ ಹಲವಾರು ಪ್ರಸ್ತಾವಗಳು ಚಾಲ್ತಿಯಲ್ಲಿವೆಯಾದರೂ ಕದನವಿರಾಮದ ಅವಧಿ, ತ್ವರಿತಗತಿಯಲ್ಲಿ ಒತ್ತೆಯಾಳುಗಳು ಮತ್ತು ಕೈದಿಗಳ ಬಿಡುಗಡೆ ವಿಚಾರದಲ್ಲಿ ಇತ್ತಂಡಗಳು ತಮ್ಮತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ ಯಾವ ತೆರನಾದ ಕದನವಿರಾಮ ಒಪ್ಪಂದ ಏರ್ಪಡಲಿದೆ ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇಸ್ರೇಲ್ ಮುಂದಿಟ್ಟಿರುವ ಕದನವಿರಾಮ ಪ್ರಸ್ತಾವದ ಪ್ರಕಾರ ಎರಡು ತಿಂಗಳ ಕದನವಿರಾಮದ ಅವಧಿಯಲ್ಲಿ ಇತ್ತಂಡಗಳು ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡುವುದು ಹಾಗೂ ಗಾಜಾದಲ್ಲಿ ನೆಲೆಸಿರುವ ಹಮಾಸ್ ಉಗ್ರ ಸಂಘಟನೆಯ ನಾಯಕರು ಬೇರೆ ದೇಶಗಳಲ್ಲಿ ನೆಲೆಯಾಗಬೇಕು ಎಂಬ ಅಂಶಗಳು ಸೇರಿವೆ. ಆದರೆ ಇಸ್ರೇಲ್‌ನ ಈ ಪ್ರಸ್ತಾವನೆಯನ್ನು ಹಮಾಸ್ ಉಗ್ರರು ತಿರಸ್ಕರಿಸಿದ್ದು, ಗಾಜಾ ಮೇಲಣ ಆಕ್ರಮಣವನ್ನು ಇಸ್ರೇಲ್ ನಿಲ್ಲಿಸುವವರೆಗೆ ಮತ್ತು ತನ್ನ ಪಡೆಗಳನ್ನು ಗಾಜಾದಿಂದ ಹಿಂದಕ್ಕೆ ಕರೆಸಿಕೊಳ್ಳುವವರೆಗೆ ಯಾವುದೇ ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ. ಅಲ್ಲದೆ ತನ್ನ ನಾಯಕರು ಗಾಜಾವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ಮತ್ತು ಕತಾರ್, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಣ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಬಹುಹಂತದ ಪ್ರಸ್ತಾವನೆಯನ್ನು ಇತ್ತಂಡಗಳ ಮುಂದಿರಿಸಿ, ಮಾತುಕತೆಗಳನ್ನು ಮುಂದುವರಿಸಿವೆ. ದ್ವಂದ್ವದಲ್ಲಿ ಸಿಲುಕಿದ ಇಸ್ರೇಲ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದು, ಈ ವರ್ಷದುದ್ದಕ್ಕೂ ಯುದ್ಧ ಮುಂದುವರಿಯುವ ಸುಳಿವು ನೀಡಿದ್ದಾರೆ. ಇನ್ನು ದೀರ್ಘಕಾಲಿಕ ಯುದ್ಧವಿರಾಮ ಘೋಷಿಸಿದ್ದೇ ಆದಲ್ಲಿ ಯುದ್ಧವನ್ನು ಪುನರಾರಂಭಿಸಲು ಕಷ್ಟಸಾಧ್ಯವಾಗುತ್ತದೆ. ಅಲ್ಲದೆ ಗಾಜಾದಲ್ಲಾಗಿರುವ ಯುದ್ಧಹಾನಿಯ ಬಗೆಗೆ ಸ್ಪಷ್ಟ ಮಾಹಿತಿ ಜಗತ್ತಿಗೆ ಲಭ್ಯವಾಗುತ್ತದೆ. ಇದು ಶತ್ರು ಪಾಳಯದ ಬಗೆಗೆ ಅನುಕಂಪ ಮೂಡಲು ಕಾರಣವಾಗಿ ಇಸ್ರೇಲ್ ವಿರುದ್ಧ ಜಾಗತಿಕ ಸಮುದಾಯ ಒಗ್ಗೂಡುವ ಸಾಧ್ಯತೆ ಇದೆ ಎಂಬ ಆತಂಕ ಇಸ್ರೇಲ್‌ನದ್ದಾಗಿದೆ. ಹೀಗಾಗಿ ಇಸ್ರೇಲ್ ಕೇವಲ ತಾತ್ಕಾಲಿಕ ಕದನವಿರಾಮಕ್ಕೆ ಒಲವು ವ್ಯಕ್ತಪಡಿಸುತ್ತ ಬಂದಿದೆ. ಇದೇ ವೇಳೆ ಇಸ್ರೇಲ್ ನಾಗರಿಕರು ಆರಂಭದಿಂದಲೂ ಹಮಾಸ್ ಉಗ್ರರ ವಿರುದ್ಧ ಯುದ್ಧವನ್ನು ಬೆಂಬಲಿಸುತ್ತಲೇ ಬಂದಿರುವರಾದರೂ ಯುದ್ಧ ನಿಧಾನಗತಿಯಲ್ಲಿ ಸಾಗಿರುವುದು ಮತ್ತು ಸುದೀರ್ಘ ಸಮಯ ಮುಂದುವರಿದಿರುವುದರ ಬಗೆಗೆ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಇಸ್ರೇಲ್‌ನ ಈ ಧೋರಣೆಯಿಂದ ಯುದ್ಧದಲ್ಲಿ ಸಾವನ್ನಪ್ಪುತ್ತಿರುವ ದೇಶದ ಯೋಧರ ಸಂಖ್ಯೆ ಹೆಚ್ಚುತ್ತಿರುವುದು ಇಸ್ರೇಲಿಯನ್ನರ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆ ಇಸ್ರೇಲ್-ಹಮಾಸ್ ಉಗ್ರರ ನಡುವಣ ಯುದ್ಧ ಸದ್ಯಕ್ಕಂತೂ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮಧ್ಯಸ್ಥಿಕೆದಾರ ರಾಷ್ಟ್ರಗಳ ಪ್ರಯತ್ನದ ಫಲವಾಗಿ ಒಂದು ವೇಳೆ ಕದನವಿರಾಮ ಏರ್ಪಟ್ಟರೂ ಅದು ತಾತ್ಕಾಲಿಕವಾಗಿರಲಿದೆಯೇ ವಿನಾ ಯುದ್ಧ ಸಂಪೂರ್ಣ ಸ್ಥಗಿತಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಮರೀಚಿಕೆಯೇ ಸರಿ. ಯುದ್ಧ ಮುಂದುವರಿದಿರುವಂತೆಯೇ ಜಾಗತಿಕವಾಗಿಯೂ ಪ್ರತಿಕೂಲ ಪರಿಣಾಮಗಳು ಹೆಚ್ಚತೊಡಗಿದ್ದು ಅಂತಾರಾಷ್ಟ್ರೀಯ ಸಮುದಾಯವನ್ನು ಕಂಗೆಡುವಂತೆ ಮಾಡಿವೆ. ಹರೀಶ್ ಕೆ.