ನವದೆಹಲಿ: ಹಮಾಸ್ ಯುದ್ಧದ ಬೆನ್ನಲ್ಲೇ ಮಂಗಳವಾರ ರಾಷ್ಟ್ರ ರಾಜಧಾನಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ಪೋಟಕ್ಕೆ ಸಂಬಂಧಿಸಿ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಎನ್‌ಐಎ ಮತ್ತು ದೆಹಲಿ ಪೊಲೀಸ್ ವಿಶೇಷ ತಂಡವು ಸ್ಫೋಟ ನಡೆದ ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿತ್ತು.
ಅಲ್ಲದೆ ಘಟನಾ ಸ್ಥಳದಿಂದ ಎಲೆಗಳು, ಸಸ್ಯಗಳು ಮತ್ತು ಮಣ್ಣಿನ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಸ್ಫೋಟದ ಸ್ವರೂಪ ಮತ್ತು ಸ್ಫೋಟಕ್ಕೆ ಯಾವ ಸ್ಫೋಟಕವನ್ನು ಬಳಸಲಾಗಿದೆ ಎಂಬುದನ್ನು ನಿರ್ಧರಿಸಲು ತಂಡ ತನಿಖೆ ನಡೆಸುತ್ತಿದೆ. ಎನ್‌ಎಸ್‌ಜಿ ಶೀಘ್ರದಲ್ಲೇ ದೆಹಲಿ ಪೊಲೀಸರಿಗೆ ಸ್ಫೋಟದ ವರದಿಯನ್ನು ನೀಡಲಿದೆ ಎನ್ನಲಾಗಿದೆ.
ಮಂಗಳವಾರ ಸಂಜೆ 5:45 ರ ಸುಮಾರಿಗೆ ನಗರದ ರಾಜತಾಂತ್ರಿಕ ಆವರಣವಾದ ಚಾಣಕ್ಯಪುರಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಿಂದ ಸುಮಾರು 250 ಮೀಟರ್ ದೂರದಲ್ಲಿರುವ ನಂದಾ ಹೌಸ್ ಮುಂಭಾಗದಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಘಟನಾ ಸ್ಥಳದಲ್ಲಿ ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ಬರೆಯಲಾದ ಪತ್ರವೊಂದು ಕಂಡುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪತ್ರದಲ್ಲಿ ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಸೂಚನೆ ನೀಡಲಾಗಿತ್ತು.
ತನಿಖೆ ನಡೆಸುವ ಅಧಿಕಾರಿಗಳಿಗೆ ಸ್ಫೋಟದ ಸ್ಥಳದ ಸಮೀಪವಿರುವ ಸಿಸಿಟಿವಿಯಲ್ಲಿ ಇಬ್ಬರು ಶಂಕಿತರು ತಿರುಗಾಡುತ್ತಿರುವುದು ಕಂಡು ಬಂದಿದ್ದು ಇದೀಗ ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದ್ದು ಈ ನಿಟ್ಟಿನಲ್ಲಿ ದೆಹಲಿ ಪೊಲೀಸರು ಅಪರಿಚಿತರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ನನ್ನು ಭಾರತಕ್ಕೆ ಹಸ್ತಾಂತರಿಸುತ್ತಾ ಪಾಕ್ ?