ಟ್ರೆಸ್ ಯುನಿಡೋಸ್: ಬ್ರೆಜಿಲ್‌ನ ಅಮೆಜಾನ್ ಮಳೆಕಾಡಿನಲ್ಲಿ ದೇಶೀ ಹಳ್ಳಿ ಎನಿಸಿರುವ ಟ್ರೆಸ್ ಯುನಿಡೋಸ್‌ಗೆ ಈಗ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಐಸೊಲೇಶನ್ ಮೂಲಕ ಈ ಹಳ್ಳಿಯನ್ನು ರಕ್ಷಿಸುವ ನಿರೀಕ್ಷೆ ಇತ್ತಾದರೂ ಅಲ್ಲಿಗೆ ವೈರಸ್ ಪ್ರವೇಶಿಸಿದೆ.
ಟ್ರೆಸ್ ಯುನಿಡೋಸ್ ಗ್ರಾಮವನ್ನು ಅಮೆಜಾನ್‌ನ ಅತಿದೊಡ್ಡ ನಗರ ಮಿನೌಸ್‌ಗೆ ರಿಯೋ ನಿಗ್ರೋ ನದಿಯ ಮೂಲಕ ಸಂಪರ್ಕಿಸಬಹುದಾಗಿದೆ. ದೋಣಿಯಲ್ಲಿ ಸಂಚರಿಸಿದರೆ ಐದು ತಾಸಿನ ದಾರಿ. ಈ ಹಳ್ಳಿಯ ಜನರ ಜೀವನದಿಯಾದ ರಿಯೋ ನಿಗ್ರೋ ಈಗ ರೋಗ ವಾಹಕವಾಗಿಯೂ ಪರಿಣಮಿಸಿದೆ.
ರಿಯೋ ನಿಗ್ರೋ ನದಿಪಾತ್ರದ ಹಲವು ಹಳ್ಳಿಗಳಲ್ಲಿ ಕೋವಿಡ್ ಸಾವು-ನೋವುಗಳು ವರದಿಯಾಗಿವೆ. ಕಂಬೆಬಾ ಗ್ರಾಮದ ಮುಖಂಡ ವಾಲೆಮಿರ್ ಡ ಸಿಲ್ವ ಅವರ ಪ್ರಕಾರ, ವೈರಾಣು ಸದ್ದಿಲ್ಲದೆ ಬಂದಿದೆ. ಗಾಳಿಯಲ್ಲೇ ತೇಲಿ ಬಂದಂತೆ ಭಾಸವಾಗುತ್ತಿದೆ. ಈ ವೈರಾಣು ವಿಶ್ವಾಸಘಾತಕವಾಗಿದೆ! ಜನರು ಕಾಯಿಲೆ ಬೀಳಲಾರಂಭಿಸಿದರು. ತೀವ್ರ ಚಳಿಯಿಂದ ಹೀಗಾಗುತ್ತಿದೆ ಎಂದು ಭಾವಿಸಿದ್ದೆವು. ಆದರೆ, ಹಲವರ ಸ್ಥಿತಿ ಚಿಂತಾಜನಕಗೊಂಡಿತು. ದೇವರ ದಯ, ಮಕ್ಕಳಿಗೆ ಅಪಾಯವಾಗಿಲ್ಲ ಎಂದು ನಿಟ್ಟುಸಿರುಬಿಟ್ಟರು.
ಕಂಬೆಬಾ ಹಳ್ಳಿಯಲ್ಲಿ ಸುಮಾರು 35 ಕುಟುಂಬಗಳು ಕೋವಿಡ್ ಬಾಧೆಗೊಳಪಟ್ಟಿವೆ. ಅಮೆಜಾನ್ ಮಳೆಕಾಡಿನ ಹಲವು ಹಳ್ಳಿಗಳಲ್ಲಿ ಬುಡಕಟ್ಟು ಜನಾಂಗದ ಹಲವು ಕುಟುಂಬಗಳನ್ನೂ ಕಾಡುತ್ತಿದೆ. ಬ್ರೆಜಿಲ್ ದೇಶದಲ್ಲಿ ಮಿನೌಸ್ ನಗರ ಕೋವಿಡ್‌ಪೀಡಿತವಾಗಿದೆ. ಇಲ್ಲಿನ ಆಸ್ಪತ್ರೆಗಳ ಐಸಿಯುಗಳು ಭರ್ತಿಯಾಗಿವೆ. ಶ್ಮಶಾನಗಳಲ್ಲಿ ಸ್ಥಳವಿಲ್ಲದೆ ಶವಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಈಗ ನಗರದ ಆಸುಪಾಸಿನ ಗ್ರಾಮಗಳಿಗೂ ಸೋಂಕು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ.
ಸೋಂಕಿನೊಂದಿಗೆ ಭಯವೂ ವ್ಯಾಪಿಸುತ್ತಿದೆ. ಯಾರಲ್ಲಿ ಸೋಂಕು ಇದೆ ಎನ್ನುವುದು ತಿಳಿಯುತ್ತಿಲ್ಲ. ಆರೋಗ್ಯ ಸೇವೆಯೂ ಉತ್ಕೃಷ್ಟ ಮಟ್ಟದ್ದಾಗಿಲ್ಲ. ಹೀಗಾಗಿ, ಈ ಹಳ್ಳಿಗಳ ಜನರಲ್ಲಿ ಭವಿಷ್ಯದ ಕುರಿತು ಆತಂಕ ಮನೆಮಾಡಿದೆ. ಮಿನೌಸ್‌ನಲ್ಲಿರುವ ಫಂಡಕಾವೋ ಅಮೇಜಾನಿಯಾ ಸಸ್ಟೆನಾrವೆಲ್ ಎಂಬ ಎನ್‌ಜಿಒ ಈಗ ಇವರ ನೆರವಿಗೆ ನಿಂತಿದೆ. ಕಂಬೆಬಾ ಗ್ರಾಮಕ್ಕೆ ಗುರುವಾರ 80 ಕೋವಿಡ್ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿದೆ. 106 ಜನಸಂಖ್ಯೆಯ ಈ ಹಳ್ಳಿಯಲ್ಲಿ ಈ ಮೊದಲು 13 ಕೋವಿಡ್ ಪ್ರಕರಣಗಳಿದ್ದವು. ಈ ಸಲದ ಪರೀಕ್ಷೆಯಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಹಲವರಿಗೆ ಸೋಂಕಿನ ಲಕ್ಷಣಗಳಿರುವ ಕಾರಣ, ಇಡೀ ಊರಿಗೇ ಹಬ್ಬಿದೆಯೋ ಎನಿಸುತ್ತಿದೆ ಎಂದು ಗ್ರಾಮಸ್ಥರನ್ನು ಪರೀಕ್ಷಿಸಿದ ದಾದಿ ಆತಂಕ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಬಲಿ ಪಡೆಯದೆ ಸೋಂಕು ನಿವಾರಣೆಯಾಗಬೇಕು ಎಂದು ಶ್ರಮಿಸುತ್ತಿದ್ದೇವೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದೂರದ ಮಿನೌಸ್ ನಗರಕ್ಕೆ ಕರೆದೊಯ್ಯಲು ಸಮಯವಾದರೂ ಸಿಗುತ್ತದೋ ಇಲ್ಲವೋ ಎಂದು ಅನ್ನಿಸುತ್ತಿದೆ ಎಂದರು.
ಬಿಲ್ಗಾರಿಕೆಗೆ ಪ್ರಸಿದ್ಧ
ಕಂಬೆಬಾ ಗ್ರಾಮವು ಬಿಲ್ಗಾರಿಕೆಗೆ ಪ್ರಸಿದ್ಧವಾಗಿದೆ. ಪೆರುವಿನ ಅಮೆಜಾನ್ ಕಾಡಿಗೆ ಅಂಟಿಕೊಂಡಂತಿರುವ ಈ ಗ್ರಾಮದ ಇಬ್ಬರು ಬಿಲ್ಗಾರರು ಬ್ರೆಜಿಲ್ ರಾಷ್ಟ್ರೀಯ ತಂಡದಲ್ಲಿ ಪಾಲ್ಗೊಂಡು ಪದಕಗಳನ್ನು ಗಳಿಸಿದ್ದಾರೆ.
ಈ ಗ್ರಾಮದಲ್ಲಿ ಕೋವಿಡ್ ಸೋಂಕಿತರನ್ನು ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ಕುಡಿಸಿ ಉಪಚರಿಸಲಾಗುತ್ತಿದೆ. ಕಫ, ಕೆಮ್ಮು ನಿವಾರಣೆಗಾಗಿ ಶುಂಠಿ ಹಾಗೂ ಲಿಂಬೆಹಣ್ಣು ಬಳಸುತ್ತಿದ್ದಾರೆ.
ಮಿನೌಸ್ ನಗರಕ್ಕೆ ಸಮೀಪದಲ್ಲಿರುವ ಹಳ್ಳಿಗಳಲ್ಲಿ ಕೋವಿಡ್ ವೈರಸ್ ಹರಡುವ ಸಾಧ್ಯತೆ ದಟ್ಟವಾಗಿದೆ. ಕೋವಿಡ್ ಪರೀಕ್ಷೆಯಲ್ಲಿ ಬ್ರೆಜಿಲ್ ಸಾಕಷ್ಟು ಹಿಂದಿದೆ. ಅಮೆಜಾನ್ ಮಳೆಕಾಡಿನ ಹಳ್ಳಿಗಳಲ್ಲಿ ಸವಾಲು ಇನ್ನೂ ಹೆಚ್ಚು. ಕೋವಿಡ್ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದರೂ ವಹಿವಾಟನ್ನು ಪುನರಾರಂಭಿಸುವ ಸಿದ್ಧತೆಯಲ್ಲಿರುವ ಬ್ರೆಜಿಲ್ ಈಗ ಸೋಂಕು ತಪಾಸಣೆಯನ್ನು ತೀವ್ರಗೊಳಿಸಿದೆ. ಪ್ರಕರಣಗಳು ದೃಢಪಟ್ಟರೆ ಸಾಮಾಜಿಕ ಅಂತರ ಸಹಿತ ಎಲ್ಲ ಕ್ರಮಗಳನ್ನು ಕೈಗೊಂಡು ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಫಂಡಕಾವೋ ಅಮೇಜಾನಿಯಾ ಸಸ್ಟೆನಾrವೆಲ್ ಸಂಸ್ಥೆಯ ಮುಖ್ಯಸ್ಥ ವರ್ಜಿಲಿಯೋ ವಿಯಾನಾ ವಿವರಿಸಿದ್ದಾರೆ.