ಹೊಸದಿಲ್ಲಿ: “ಗಡಿಯಲ್ಲಿ ಪಾಕಿಸ್ಥಾನವು ಭಯೋತ್ಪಾದನೆ ನಿಲ್ಲಿಸುವವರೆಗೂ ಆ ರಾಷ್ಟ್ರದೊಂದಿಗೆ ಯಾವುದೇ ರಾಜ ತಾಂತ್ರಿಕ ಮಾತುಕತೆ ಸಾಧ್ಯವಿಲ್ಲ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೂಮ್ಮೆ ಸ್ಪಷ್ಟ ಪಡಿಸಿದ್ದಾರೆ.
ಮೋದಿ ಸರಕಾರದ ನಾಲ್ಕನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಮಹಾಚುನಾವಣೆ ನಂತರ, ಪಾಕಿಸ್ಥಾನದೊದಿಗೆ ಭಾರತ ಮಾತುಕತೆ ನಡೆಸುತ್ತದೆಯೇ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಆದರೆ, ಎರಡೂ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಯೋತ್ಪಾದನೆ ಸಮಸ್ಯೆ ಕುರಿತಂತೆ ಚರ್ಚಿಸಲಿದ್ದಾರೆ ಎಂದಿದ್ದಾರೆ.
ಖಂಡನೆ: ಇದೇ ವೇಳೆ, ವಿವಾದಿತ ಗಿಲ್ಬಿಟ್-ಬಾಲ್ಟಿ ಸ್ಥಾನ್ ಪ್ರಾಂತ್ಯವನ್ನು ಬಲವಂತವಾಗಿ ತನ್ನ ಹತೋಟಿಗೆ ತಂದುಕೊಳ್ಳುವ ಸಲುವಾಗಿ ಸಿದ್ಧಪಡಿಸಲಾಗಿದ್ದ “2018ರ ಗಿಲ್ಬಿಟ್ ಬಾಲ್ಟಿ ಸ್ಥಾನ್ ಆದೇಶ’ಕ್ಕೆ ಮೇ 21ರಂದು ಪಾಕಿಸ್ಥಾನ ಸಂಪುಟ ಒಪ್ಪಿಗೆ ನೀಡಿರುವುದನ್ನು ಸುಷ್ಮಾ ಖಂಡಿಸಿದ್ದಾರೆ. ಈ ಮೂಲಕ, ಇತಿಹಾಸವನ್ನು ತಿರುಚಲು ಪಾಕಿಸ್ತಾನ ಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ. ಏತನ್ಮಧ್ಯೆ, ಎಚ್-4 ವೀಸಾ ರದ್ದು ನಿರ್ಧಾರದಿಂದ ಹಿಂದೆ ಸರಿಯುವಂತೆ ಅಮೆರಿಕ ಸರಕಾರದ ಮನವೊಲಿಸಲು ಭಾರತ ಸರ್ವ ವಿಧದಲ್ಲಿ ಪ್ರಯತ್ನಿಸಲಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಅಮೆರಿಕಕ್ಕೆ ಖಡಕ್ ಸಂದೇಶ: ಇರಾನ್ ಅಣು ಒಪ್ಪಂದಕ್ಕೆ ಸಂಬಂಧಿಸಿದ ಅಮೆರಿಕದ ಎಚ್ಚರಿಕೆಗೂ ಪ್ರತಿಕ್ರಿಯಿಸಿದ ಸುಷ್ಮಾ, “ಇರಾನ್ ವಿಚಾರದಲ್ಲಿ ಭಾರತದ ನಿಲುವು ಸ್ವತಂತ್ರವಾದದ್ದು. ಭಾರತವು ವಿಶ್ವಸಂಸ್ಥೆಯ ನಿರ್ಬಂಧವನ್ನು ಅನುಸರಿಸು ತ್ತದೆಯೇ ವಿನಾ ಬೇರೆ ದೇಶಗಳ ನಿರ್ಬಂಧಕ್ಕೆಲ್ಲ ತಲೆಕೆಡಿಸುವುದಿಲ್ಲ’ ಎಂದು ಖಡಕ್ಕಾಗಿ ನುಡಿದಿದ್ದಾರೆ.
ಗಾಂಧಿಯನ್ನಿಟ್ಟಿದ್ದೂ ಇದೇ ಜೈಲಲ್ಲಿ ತಾನೇ?
ಬ್ಯಾಂಕ್ ವಂಚನೆ ಆರೋಪ ಹೊತ್ತಿರುವ ವಿಜಯ ಮಲ್ಯ ಹಸ್ತಾಂತರದ ವಿಚಾರಣೆ ವೇಳೆ ಲಂಡನ್‌ನ ಕೋರ್ಟ್ ಭಾರತದ ಜೈಲುಗಳ ಸ್ಥಿತಿಗತಿ ಬಗ್ಗೆ ವಿವರ ಕೇಳಿರುವುದಕ್ಕೆ ಪ್ರಧಾನಿ ಮೋದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಅಲ್ಲಿನ ಪ್ರಧಾನಿ ಥೆರೇಸಾ ಮೇ ಅವರಲ್ಲೂ ಪ್ರಸ್ತಾವಿಸಿದ್ದಾರೆ ಎಂದು ಸುಷ್ಮಾ ತಿಳಿಸಿದ್ದಾರೆ. “ಅಂದು ಬ್ರಿಟಿಷರು ಮಹಾತ್ಮಾ ಗಾಂಧಿ, ನೆಹರೂ ಮತ್ತಿತರ ಭಾರತದ ನಾಯಕರನ್ನು ಬಂಧಿಸಿಟ್ಟಿದ್ದು ಇದೇ ಜೈಲುಗಳಲ್ಲಿ. ಹೀಗಿರುವಾಗ ಈಗ ಈ ಜೈಲುಗಳ ಪರಿಸ್ಥಿತಿ ಬಗ್ಗೆ ಕೋರ್ಟ್ ಮಾಹಿತಿ ಕೇಳುತ್ತಿರುವುದು ಸರಿಯಲ್ಲ’ ಎಂದು ಮೋದಿ ಅವರು ಥೆರೇಸಾಗೆ ತಿಳಿಸಿದ್ದಾಗಿ ಸುಷ್ಮಾ ಹೇಳಿದ್ದಾರೆ.