Advertisement

ಜನರ ಆಕ್ರೋಶಕ್ಕೆ ಉತ್ತರಿಸುವ ಬದ್ಧತೆ ಆಡಳಿತಕ್ಕಿಲ್ಲವೇ?

10:53 PM Dec 02, 2019 | mahesh |

ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲ್ಪಡುತ್ತಿರುವ ಹಾಗೂ ಅತೀ ಹೆಚ್ಚು ಟೀಕೆಗೆ ಒಳಗಾಗುತ್ತಿರುವ ವಿಷಯಗಳಲ್ಲಿ ರಸ್ತೆಗಳ ಸ್ಥಿತಿಗತಿ, ಅಸಮರ್ಪಕ ಟೋಲ್‌ಗೇಟ್‌ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಆಗುತ್ತಿರುವ ಅಸಹನೀಯ ವಿಳಂಬ ಮುಖ್ಯವಾಗಿವೆ.

Advertisement

ಹೊಸದಾಗಿ ನಿರ್ಮಾಣವಾದ ರಸ್ತೆಯೇ ಇರಲಿ, ಹಳೆಯ ರಸ್ತೆಯೇ ಇರಲಿ, ಪ್ರತೀ ವರ್ಷದ ಮಳೆಗಾಲದಲ್ಲಿ ತೀರಾ ಹದಗೆಟ್ಟು ಸಂಚಾರವು ಸುತರಾಂ ಅಸಾಧ್ಯವೆಂಬ ಹಂತಕ್ಕೆ ತಲುಪುತ್ತದೆ. ಆ ಹಂತದಲ್ಲಿ ದುರಸ್ಥಿಯ ವಿಷಯಕ್ಕೆ ಬಂದರೆ ಮಳೆಗಾಲದ ನೆಪವೊಡ್ಡಿ ಮುಂದೂಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಸಿಗೆಯಲ್ಲಿ ಅಲ್ಲಲ್ಲಿ ಒಂದಿಷ್ಟು ತೇಪೆ ಹಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಾರೆ. ರಸ್ತೆಯಲ್ಲಿ ಹೊಂಡ ಕಡಿಮೆಯಾದರೆ ಸಾಕು, ಜನರು ಗೊಣಗುವುದನ್ನು ಮರೆತು ಸುಮ್ಮನಾಗುತ್ತಾರೆ.

ಉತ್ತಮ ರಸ್ತೆ, ಪೂರಕ ಸೌಲಭ್ಯಗಳು ದೊರೆಕಿಸಿಕೊಟ್ಟ ಬಳಿಕವಷ್ಟೇ ಅಂತಹ ರಸ್ತೆಯ ಉಪಯೋಗ ಪಡೆಯುವುದಕ್ಕೆ ಪ್ರತಿಯಾಗಿ ಸುಂಕ ಅಥವಾ ಟೋಲ್‌ ಸಂಗ್ರಹಿಸುವುದು ನಿಯಮ. ಮಾತ್ರವಲ್ಲ ಒಂದು ಸುಂಕ ವಸೂಲಾತಿ ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಕನಿಷ್ಟ 60 ಕಿ.ಮೀ ದೂರವಿರಬೇಕೆಂಬ ನಿಯಮವೂ ಇದೆ. ಆದರೆ ರಾಷ್ಟ್ರೀಯ ಹೆ¨ªಾರಿ 66ರಲ್ಲಿ ತಲಪಾಡಿಯಿಂದ ಕೇವಲ 34 ಕಿ.ಮೀ ದೂರದಲ್ಲಿ ಸುರತ್ಕಲ್‌ ಸುಂಕ ವಸೂಲಿ ಕೇಂದ್ರವಿದ್ದರೆ ಅಲ್ಲಿಂದ ಕೇವಲ 13 ಕಿ.ಮೀ. ದೂರದ ಹೆಜಮಾಡಿಯಲ್ಲಿ ಇನ್ನೊಂದು ಕೇಂದ್ರವಿದೆ. ಅಂದರೆ 47 ಕಿ.ಮೀ. ಅಂತರದಲ್ಲಿ ಮೂರು ಸುಂಕ ವಸೂಲಿ ಕೇಂದ್ರಗಳು. ಜತೆಗೆ ಮನೆಯ ಅಂಗಳದಿಂದ ಪೇಟೆಗೆ ಏನನ್ನಾದರೂ ತರಲು ಸುಂಕ ವಸೂಲಿ ಕೇಂದ್ರ ದಾಟಿ ಹೋಗಬೇಕಾದರೆ ಸುಂಕ ಪಾವತಿಸಬೇಕಾದ ವಿಲಕ್ಷಣ ಪರಿಸ್ಥಿತಿ.

ಇನ್ನೇನು ಫಾಸ್ಟಾಗ್‌ ಪದ್ಧತಿ ಬಂದೇ ಬಿಟ್ಟಿದೆ. ಫಾಸ್ಟಾಗ್‌ ಇಲ್ಲದಿದ್ದರೆ ದುಪ್ಪಟ್ಟು ಸುಂಕವಂತೆ. ಅಲ್ಲಿಗೆ ಮುಗಿದೇ ಹೋಯ್ತು. ಮೊನ್ನೆಯಷ್ಟೇ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್‌ ಮೂಲಕ ಖರೀದಿಸಿದ ಫಾಸ್ಟಾಗ್‌ ಕೆಲಸ ಮಾಡುತ್ತಿಲ್ಲ ಎಂದು ಬರೆದಿದ್ದರು. ಇಂತಹ ಅಧ್ವಾನಗಳಿಗೆ ಹೊಣೆ ಯಾರು? ಕುಂದಾಪುರದ ಶಾಸ್ತ್ರಿ ವೃತ್ತದ ಮೇಲ್ಸೇತುವೆ, ಮಂಗಳೂರಿನ ಪಂಪ್‌ವೆಲ್‌ ಅಥವಾ ಮಹಾವೀರ ವೃತ್ತದ ಮೇಲ್ಸೇತುವೆ ಇವೆರಡರ ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಎಲ್ಲಾಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಇಷ್ಟೆಲ್ಲಾ ಗಲಭೆ, ಪ್ರತಿಭಟನೆ ನಡೆಯುತ್ತಿದ್ದರೂ ಇದನ್ನು ಸರಿಪಡಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಸಮಜಾಯಿಷಿ ನೀಡುವ ಬದ್ಧತೆ ಜನಪ್ರತಿನಿಧಿಗಳಿಗೆ ಅಥವಾ ಅಧಿಕಾರಿಗಳಿಗೆ ಇಲ್ಲವೇ?

ಮೋಹನದಾಸ ಕಿಣಿ, ಕಾಪು

Advertisement
Advertisement

Udayavani is now on Telegram. Click here to join our channel and stay updated with the latest news.

Next