ಕಾಸರಗೋಡು: ಹೊಸದಿಲ್ಲಿ ಮತ್ತು ಉತ್ತರ ಪ್ರದೇಶದಿಂದ ಬಂಧಿತರಾದ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸದಸ್ಯರಾದ ಝಾರ್ಖಂಡ್‌ನ ಮೊಹಮ್ಮದ್ ಶಹನಾಸ್ ಅಲಂ ಯಾನೆ ಶಾಫಿ ಉಸಾಮ (31), ಮೊಹಮ್ಮದ್ ವಾರ್ಸಿ(28) ಮತ್ತು ಉತ್ತರ ಪ್ರದೇಶ ಲಕ್ನೋದ ಮೊಹಮ್ಮದ್ ರಿಸ್ವಾನ್ ಅಶ್ರಫ್ (30) ಕಾಸರಗೋಡನ್ನು ಕೇಂದ್ರೀಕರಿಸಿ ಇಸ್ಲಾಮಿಕ್ ಸ್ಟೇಟ್ ಮೋಡ್ಯೂಲ್ ರೂಪೀಕರಿಸುವ ಯೋಜನೆಯನ್ನು ಸಿದ್ಧಪಡಿಸಿದ್ದರೆಂದು ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ.
ಇದೇ ರೀತಿ ಈ ಹಿಂದೆ ತೃಶ್ಶೂರ್‌ನಲ್ಲೂ ಇಂತಹ ಮೋಡ್ಯೂಲ್ ತಯಾರಿಸಿದ್ದ ಸೈಯ್ಯಿದ್ ನಬೀಲ್ ಅಹಮ್ಮದ್‌ನನ್ನು ಎನ್‌ಐಎ ಈ ಹಿಂದೆಯೇ ಬಂಧಿಸಿತ್ತು.
ನವರಾತ್ರಿ ಉತ್ಸವ ಆರಂಭ ಗೊಳ್ಳಲಿರುವಂತೆಯೇ ಕೇರಳ ಸಹಿತ ದೇಶದ ಹಲವೆಡೆ ಅತ್ಯುಗ್ರ ಬಾಂಬ್ ಸ್ಫೋಟ ನಡೆಸುವ ಸ್ಕೆಚ್ ಹಾಕಿದ್ದರು. ಈ ವಿಧ್ವಂಸಕ ಕೃತ್ಯ ನಡೆಸಲು ಅಂತಿಮ ಸಿದ್ಧತೆಯಲ್ಲಿ ನಿರತರಾಗಿದ್ದರು. ಹೀಗಿರುವಂತೆ ಈ ಮೂವರನ್ನು ಬಂಧಿಸಲಾಗಿದೆ. ಸ್ಫೋಟಕ ತಯಾರಿ ಸಲು ಇವರು ಅಗತ್ಯದ ರಾಸಾಯನಿಕ ಸಾಮಗ್ರಿಗಳನ್ನು, ಮದ್ದು ಗುಂಡುಗಳು, ಟೈಮರ್‌ಗಳು, ರಿಮೋಟ್ ಕಂಟ್ರೋಲ್‌ಗಳನ್ನು ಸಂಗ್ರಹಿಸಿದ್ದರು. ಅದನ್ನು ಎನ್‌ಐಎ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಈ ಮೂವರು ಪಾಕಿಸ್ಥಾನವನ್ನು ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಐಸಿಸ್ ಭಯೋತ್ಪಾದಕ ಸಂಘಟನೆಯ ಸದಸ್ಯರೂ ಆಗಿದ್ದಾರೆ. ಅವರು ಪಾಕಿಸ್ಥಾನದ ಹ್ಯಾಂಡ್ಲರ್‌ಗಳನ್ನು ಚಾಟ್ ಅಪ್ಲಿಕೇಶನ್ ಮೂಲಕ ಪದೇ ಪದೆ ಸಂಪರ್ಕಿಸುತ್ತಿದ್ದ ಸ್ಪಷ್ಟ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.
ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಅವರನ್ನು ದಿಲ್ಲಿ ಸ್ಪೆಷಲ್ ಸೆಲ್ ಪೊಲೀಸರು ಏಳು ದಿನಗಳ ತನಕ ಮತ್ತೆ ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಾಂಬ್ ಸ್ಫೋಟ ನಡೆಸಲು ಈ ಮೂವರು ಕರ್ನಾಟಕ, ಗೋವಾ ಮತ್ತು ಆಂಧ್ರ ಪ್ರದೇಶದ ಅರಣ್ಯ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಿ ಬಾಂಬ್ ಸ್ಫೋಟ ಪರೀಕ್ಷೆಗಳನ್ನು ನಡೆಸಿದ್ದರೆಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಮಲೆನಾಡ ಪ್ರದೇಶಗಳಿಗೂ ಬಂದಿದ್ದು ಅಲ್ಲಿ ಐಸಿಸ್ ಪತಾಕೆಗಳನ್ನು ನೆಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಐಎ ತಂಡ ಕಾಸರಗೋಡಿಗೂ ತನಿಖೆಯನ್ನು ವಿಸ್ತರಿಸುವ ಸಾಧ್ಯತೆಯಿದೆ.