ಶ್ರೀನಗರ: ಸಿರಿಯಾ ಮತ್ತು ಇರಾಕ್‌ನಲ್ಲಿ ತನ್ನ ನೆಲೆ ಅಸ್ಥಿರವಾಗುತ್ತಿರುವಂತೆಯೇ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್(ಐಸಿಸ್-ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ) ಉಗ್ರ ಸಂಘಟನೆ ತನ್ನ ಬೇರುಗಳನ್ನು ಹರಡಲು ಹೊರಟಿದೆ. ಆತಂಕಕಾರಿ ಸಂಗತಿಯೆಂದರೆ ಕಾಶ್ಮೀರದ ಒಂದು ಭಾಗದಲ್ಲಿ ಪ್ರಭುತ್ವ ಸಾಧಿಸಿದ್ದೇವೆ ಎಂದು ಸ್ವತಃ ಐಸಿಸ್ ಹೇಳಿಕೊಂಡಿದೆ. ಈ ಪ್ರಾಂತ್ಯವನ್ನು ವಿಲಾಯಾ ಆಫ್ ಹಿಂದ್ ಎಂದು ಕರೆದಿರುವುದಾಗಿ ಐಸಿಸ್‌ನ ಮುಖವಾಣಿ ಅಮಾಖ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ಪ್ರದೇಶದಲ್ಲಿ ಶುಕ್ರವಾರ ಉಗ್ರರು ಮತ್ತು ಸೇನೆಯ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ. ಇಶ್ಫಾಕ್ ಅಹಮದ್ ಸೋಫಿಯನ್ನು ಶೋಪಿಯಾನ್‌ನ ಅಮಿಪೋರಾದಲ್ಲಿ ಹತ್ಯೆಗೈಯಲಾಗಿತ್ತು.
ಐಸಿಸ್ ಹೇಳುವಂತೆ ವಶಪಡಿಸಿಕೊಂಡ ಭಾಗದಲ್ಲಿ ಭಾರತ ಸರಕಾರದ ಆಡಳಿತವೇ ಇದೆ. ಈ ಭಾಗದ ಆಡಳಿತವೇನೂ ಐಸಿಸ್ ಕೈಸೇರಿಲ್ಲ. ಆದರೆ ಐಸಿಸ್‌ನ ಈ ಹೇಳಿಕೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯಲ್ಲಿ ಸತ್ತ ಸೋಫಿ ಈ ಹಿಂದೆ ಹಲವು ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ. ಇತ್ತೀಚೆಗಷ್ಟೇ ಈತ ಇಸ್ಲಾಮಿಕ್ ಉಗ್ರ ಸಂಘಟನೆ ಸೇರಿದ್ದ. ಈ ಭಾಗದಲ್ಲಿ ಸೇನೆಯನ್ನೇ ಟಾರ್ಗೆಟ್ ಮಾಡಲಾಗಿತ್ತು ಎಂದು ಕಾಶ್ಮೀರದಲ್ಲಿ ಐಸಿಸ್ ಪರ ಒಲವು ಹೊಂದಿರುವ ನಿಯತಕಾಲಿಕೆಯೊಂದು ಸೋಫಿಯನ್ನು ಸಂದರ್ಶನ ಮಾಡಿದ್ದಾಗ ಬಾಯಿಬಿಟ್ಟಿದ್ದ. ಸೇನೆಯ ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ಸೋಫಿ ಮಾತ್ರ ಐಸಿಸ್ ಜತೆ ಗುರುತಿಸಿಕೊಂಡಿದ್ದ.
ಮೊದಲ ಬಾರಿಗೆ ಭಾರತದಲ್ಲೂ ಅಧಿಪತ್ಯ ಸಾಧಿಸಿದ್ದೇವೆ ಎಂಬ ಐಸಿಸ್ ಹೇಳಿಕೆ ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿದಿಲ್ಲವಾದರೂ ಈ ಬಗ್ಗೆ ಎಚ್ಚರ ವಹಿಸಬೇಕಿರುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.