Advertisement

ಇಸ್ಲಾಂ ಶಾಂತಿ-ಮಾನವೀಯ ಮೌಲ್ಯ ಸಾರುವ ಧರ್ಮ: ಸಚಿವ ರಾಯರಡ್ಡಿ

02:27 PM Jun 24, 2017 | |

ಹುಬ್ಬಳ್ಳಿ: ಜಗತ್ತಿನಲ್ಲಿ ಶಾಂತಿ-ಮಾನವೀಯ ಮೌಲ್ಯಗಳನ್ನು ಸಾರುವ ಧರ್ಮ ಇಸ್ಲಾಂ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಇಲ್ಲಿನ ಆನಂದನಗರ ಹೂ-ಬಳ್ಳಿ ಶಾದಿ ಮಹಲ್‌ನಲ್ಲಿ ಶುಕ್ರವಾರ ರಂಜಾನ್‌ ನಿಮಿತ್ತ ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಹಮ್ಮಿಕೊಂಡಿದ್ದ ಇಫ್ತಾರ್‌ ಕೂಟದಲ್ಲಿ ಅವರು ಮಾತನಾಡಿದರು. 

Advertisement

ಇಸ್ಲಾಂ ಬಗ್ಗೆ ತಿಳಿಯದವರು ಏನೇನೋ ಮಾತನಾಡುತ್ತಾರೆ. ಅವರೆಲ್ಲರು ಒಂದು ಬಾರಿ ಕುರಾನ್‌ ಓದಿದರೆ ಇಸ್ಲಾಂ ಧರ್ಮದ ಸಂಪೂರ್ಣ ಮಾಹಿತಿ ಸಿಗಲಿದೆ. ಮನುಷ್ಯ ಹೇಗೆ ಬದುಕುಬೇಕು, ಯಾವ ಜಾಗದಲ್ಲಿ ಹೇಗಿರಬೇಕು ಎಂಬುದೆಲ್ಲವನ್ನು ಕುರಾನ್‌ನಲ್ಲಿ ಹೇಳಲಾಗಿದೆ. ಕುರಾನ್‌ ಕೇವಲ ಇಸ್ಲಾಂ ಧರ್ಮಕ್ಕೆ  ಮಾತ್ರ ಸೀಮಿತವಾಗಿಲ್ಲ.

ಅದು ಇಡೀ ಮಾನವ ಕುಲಕ್ಕೆ ಬೇಕಾದ ಗ್ರಂಥ ಎಂದರು. ರಂಜಾನ್‌ ಹಬ್ಬದ ವಿಶೇಷ ಎಂದರೆ ವರ್ಷ ಪೂರ್ತಿ ಹೇಗಿದ್ದೀರಿ ಎನ್ನುವುದಕ್ಕಿಂತ ಸತತ  ಒಂದು ತಿಂಗಳ ಕಾಲ ಮಾಡುವ ಉಪವಾಸ ವ್ರತ, ಪ್ರಾರ್ಥನೆ ಮಾಡುವುದು. ಇದೆಲ್ಲವೂ ಯೋಗಕ್ಕೆ ಸಮಾನವಾಗಿದೆ. ಎಲ್ಲರು ಯೋಗ ಮಾಡಿ ಎಂದು ಹೇಳುತ್ತಾರೆ. 

ನಮಾಜು ಮಾಡುವುದು ಯೋಗಕ್ಕಿಂತ ಶ್ರೇಷ್ಠವಾಗಿದೆ. ಈ ಹಬ್ಬದ ಮೂಲಕ ಎಲ್ಲರು ಸಮಾನರು ಎಂಬುದನ್ನು ಕೂಡಾ ತೋರಿಸಲಾಗುತ್ತದೆ. ಸಮಾಜದಲ್ಲಿರುವ ಶ್ರೀಮಂತರು ಬಡವರಿಗೆ ಧನಸಹಾಯ ಮಾಡುವ ಮೂಲಕ ಅವರಿಗೆ ಸಹಾಯ ನೀಡುವುದು ಇದರ ಇನ್ನೊಂದು ವಿಶೇಷವಾಗಿದೆ ಎಂದರು. 

ಕಾಂಗ್ರೆಸ್‌  ಮಹಾನಗರ ಜಿಲ್ಲಾಧ್ಯಕ್ಷ ಎ.ಎಂ. ಹಿಂಡಸಗೇರಿ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಸಾಹಿತಿ ರಂಜಾನ್‌ ದರ್ಗಾ, ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ,  ಬಸೀರ ಗುಡಮಾಲ್‌, ವಾಹಬ್‌ ಮುಲ್ಲಾ, ನಜೀರ ಹೊನ್ಯಾಳ, ದಶರಥ ವಾಲಿ, ಮುಖಂಡರಾದ ಅನಿಲಕುಮಾರ ಪಾಟೀಲ, ಶಾಕೀರ್‌ ಸನದಿ, ಮುತವಲಿ ಸುಂಡಕೆ, ಸಲೀಂ ಬ್ಯಾಹಟ್ಟಿ, ರಾಬರ್ಟ್‌ ದದ್ದಾಪುರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next