ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಗುತ್ತಿಗೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸುವಂತೆ ಇನ್ನೆರಡು ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರಸುದ್ದಿಗಾರರೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ್ ಸಾಮಾಜಿಕ ಕಳಕಳಿಯ ಯೋಜನೆ.ಹೀಗಾಗಿ ಜನರಿಗೆ ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಸ್ಕಾನ್ ಸಂಸ್ಥೆಯು ಅಕ್ಷಯಪಾತ್ರೆ, ಅಕ್ಷಯ ನಿಧಿ ಸೇರಿ 3 ಸಂಸ್ಥೆಗಳಿಂದ ವಿವಿಧೆಡೆ ಆಹಾರ ಪೂರೈಸುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗಳಿಗೂ ಆಹಾರ ಪೂರೈಸಲು ಗುತ್ತಿಗೆ ನೀಡುವಂತೆ ಪ್ರಸ್ತಾವನೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ
ಕಳುಹಿಸಲಾಗುವುದು ಎಂದು ಹೇಳಿದರು.
ಇಸ್ಕಾನ್ ಊಟದಲ್ಲಿ ಬೆಳ್ಳುಳ್ಳಿ ಹಾಕುವುದಿಲ್ಲ ಎಂಬ ಮಾತಿದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಇಸ್ಕಾನ್‌ಗೆ ಯಾವುದೇ ಸೂಚನೆ ನೀಡುವುದಿಲ್ಲ. ಆದರೆ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದಂತೆ ಪೂರೈಸಲು ಸೂಚಿಸಲಾಗುವುದು ಎಂದರು.
ಅದಮ್ಯ ಚೇತನದಿಂದಲೂ ಮನವಿ: ಪಾಲಿಕೆ ವ್ಯಾಪ್ತಿಯಲ್ಲಿ 178 ಇಂದಿರಾ ಕ್ಯಾಂಟೀನ್ ಹಾಗೂ ಉಳಿದವು ಮೊಬೈಲ್ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಶೆಫ್‌ಟಾಕ್, ರಿವಾರ್ಡ್ಸ್ ಮತ್ತು ಅದಮ್ಯ ಚೇತನ ಸಂಸ್ಥೆಗಳು ಊಟ ಸರಬರಾಜು ಮಾಡುತ್ತಿವೆ. ಇದೀಗ ಸಾಮಾಜಿಕ ಹೊಣೆಗಾರಿಗೆ ಆಧಾರದಲ್ಲಿ ಆಹಾರ ಪೂರೈಕೆ ಅವಧಿಯನ್ನು ವಿಸ್ತರಿಸುವಂತೆ ಅದಮ್ಯ ಚೇತನ ಸಂಸ್ಥೆ ಕೋರಿದೆ. ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಹಿಂದಿನ ಸಂಸ್ಥೆಗಳ ಬಿಲ್ ಪಾವತಿ: ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುತ್ತಿದ್ದ ಶೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗೆ ಹಲವು ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿತ್ತು. ಕಳೆದ ಮೇ 20ರ ಒಳಗಿನ ಎಲ್ಲ ಬಾಕಿ ಬಿಲ್ ಗಳನ್ನು ಪಾವತಿಸಲಾಗಿದೆ. ನಿತ್ಯ ಊಟ ಸರಬರಾಜು ಮಾಡುತ್ತಿದ್ದ ಮಾಹಿತಿಯನ್ನು ಪಾಲಿಕೆಯ ಮಾರ್ಷಲ್‌ಗಳು ವರದಿ ನೀಡಿದ್ದಾರೆ. ಈ ಆಧಾರದಲ್ಲಿ ಗುತ್ತಿಗೆ ಸಂಸ್ಥೆಗಳಿಗೆ ಬಿಲ್ ಪಾವತಿಸಲಾಗಿದೆ. ಕೆಲವೆಡೆ ಗುತ್ತಿಗೆ ಸಂಸ್ಥೆಗಳು ನೀಡಿದ ಊಟ ಸರಬರಾಜು ಲೆಕ್ಕ ಮತ್ತು ಮಾರ್ಷಲ್‌ಗಳು ನೀಡಿದ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅದನ್ನು ಪರಿಶೀಲಿಸಿ ಬಿಲ್ ಪಾವತಿ ಮಾಡುವುದಾಗಿ ಆದೇಶಿಸಲಾಗಿದೆ ಎಂದು ತುಳಸಿ ಮದ್ದಿನೇನಿ ತಿಳಿಸಿದರು.
ದಿನಕ್ಕೆ 78 ರೂ. ಬೇಡಿಕೆ
ಪ್ರಸ್ತುತ 2017ರಲ್ಲಿ ನಿಗದಿಯಾದ ದರದಂತೆ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡಲಾಗುತ್ತಿದೆ. ಅದರಂತೆ ಒಂದು ದಿನದ ಊಟಕ್ಕೆ (2 ಊಟ, 1 ಉಪಹಾರ) 55.30 ರೂ. ದರವಿದ್ದು, ಅದರಲ್ಲಿ ಫಲಾನುಭವಿಗಳು 25 ರೂ. (ಬೆಳಗ್ಗೆ ತಿಂಡಿಗೆ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ.) ಪಾವತಿಸುತ್ತಿದ್ದಾರೆ. ಇದೀಗ ಇಸ್ಕಾನ್ ಸಂಸ್ಥೆ 78 ರೂ.ಗೆ ಬೇಡಿಕೆ ಇಟ್ಟಿದೆ. ಆ ಕುರಿತು ಮಾತುಕತೆ ನಡೆಸಿ ದರ ನಿಗದಿ ಮಾಡಲಾಗುವುದು ಎಂದರು.