ಹೊಸದಿಲ್ಲಿ: ಸ್ವಾತ್ರಂತ್ರ್ಯ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ದೆಹಲಿ ಪೊಲೀಸರ ವಿಶೇಷ ತಂಡವು ಐಸಿಸ್ (ISIS) ಉಗ್ರನೊಬ್ಬನನ್ನು ಬಂಧಿಸಿದೆ. ರಿಜ್ವಾನ್ ಅಲಿ ಬಂಧಿತ ಐಸಿಸ್ ಉಗ್ರ.
ದೆಹಲಿಯ ದರ್ಯಾಗಂಜ್ ನಿವಾಸಿಯಾಗಿದ್ದ ರಿಜ್ವಾನ್ ಅಲಿ ಉಗ್ರಗಾಮಿ ಚಟುವಟಿಕೆಗಳ ಕಾರಣದಿಂದ ರಾಷ್ಟ್ರೀಯ ತನಿಖಾ ದಳ (NIA) ರಾಡಾರ್ ನಲ್ಲಿದ್ದ.
ಗುಪ್ತಚರ ವರದಿಯ ಆಧಾರದ ಮೇಲೆ ಗುರುವಾರ (ಆ.08) ರಾತ್ರಿ ರಿಜ್ವಾನ್ ಅಲಿ ಬಂಧನವಾಗಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ತುಘಲಕಾಬಾದ್ ಪ್ರದೇಶದ ಜೀವವೈವಿಧ್ಯ ಉದ್ಯಾನವನಕ್ಕೆ ರಾತ್ರಿ 11 ಗಂಟೆ ಸುಮಾರಿಗೆ ರಿಜ್ವಾನ್ ಅಲಿ ಆಗಮಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ಲಭಿಸಿದೆತ್ತು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ವಿಶೇಷ ದಳವು ಬಲೆ ಬೀಸಿ ವಾಂಟೆಡ್ ಭಯೋತ್ಪಾದಕನನ್ನು ಯಶಸ್ವಿಯಾಗಿ ಸೆರೆಹಿಡಿಯಿತು.
ಕಾರ್ಯಾಚರಣೆಯ ವೇಳೆ ರಿಜ್ವಾನ್ ಅಲಿಯವರ ವಶದಿಂದ .30 ಬೋರ್ ಸ್ಟಾರ್ ಪಿಸ್ತೂಲ್ ಮತ್ತು ಜೀವಂತ ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಬಂಧನದ ಸಮಯದಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಪ್ರಸ್ತುತ ಆತನ ಚಟುವಟಿಕೆಗಳು ಮತ್ತು ಸಂಭಾವ್ಯ ಸಹವರ್ತಿಗಳ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಈ ಸಾಧನಗಳಲ್ಲಿನ ಡೇಟಾವನ್ನು ವಿಶ್ಲೇಷಿಸುತ್ತಿದ್ದಾರೆ.
ಆತನನ್ನು ಸೆರೆಹಿಡಿಯುವ ಬಗ್ಗೆ ಮಾಹಿತಿ ನೀಡಿದವರಿಗೆ ₹ 3 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಈ ಹಿಂದೆ ಘೋಷಿಸಿತ್ತು. ರಿಜ್ವಾನ್ ಅಲಿ ಪುಣೆ ಮಾಡ್ಯೂಲ್ ನಿಂದ ಐಸಿಸ್ ಜೊತೆಗೆ ಸಂಬಂಧವಿರಿಸಿದ್ದ. ಸ್ವಾತಂತ್ರ್ಯ ದಿನಕ್ಕೆ ಕೆಲವೆ ದಿನಗಳ ಮೊದಲು ರಾಷ್ಟ್ರ ರಾಜಧಾನಿಯಲ್ಲಿ ಆತನ ಉಪಸ್ಥಿತಿಯು ಆತಂಕಕಾರಿಯಾಗಿತ್ತು.
ಪೊಲೀಸರ ಪ್ರಕಾರ, ರಿಜ್ವಾನ್ ಅಲಿ ಮತ್ತು ಅವರ ಸಹಚರರು ದೆಹಲಿಯ ಹಲವಾರು ವಿಐಪಿ ಪ್ರದೇಶಗಳ ವಿಚಕ್ಷಣವನ್ನು ನಡೆಸಿದ್ದರು.