Advertisement

ಭಾರತಕ್ಕೆ ಐಸಿಸ್‌ ಕೇಡು : ಐಸಿಸ್‌-ಕೆ ದಾಳಿಕೋರ ಉಗ್ರರ ಮುಂದಿನ ಗುರಿ ಭಾರತ ?

02:04 AM Aug 28, 2021 | Team Udayavani |

ಹೊಸದಿಲ್ಲಿ/ಕಾಬೂಲ್‌ : ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್‌ ನಲ್ಲಿ ರಕ್ತಪಾತ ಹರಿಸಿರುವ ಐಸಿಸ್‌-ಕೆ ಉಗ್ರರು, ಭಾರತದಲ್ಲೂ ಹಿಂಸಾಚಾರ ನಡೆಸಲು ಸಂಚು ರೂಪಿಸಿದ್ದು, “ಖಲೀಫ‌ತ್‌’ ಆಡಳಿತ ತರುವ ಕನಸು ಕಾಣುತ್ತಿದ್ದಾರೆ.

Advertisement

ಸದ್ಯ ಅಫ್ಘಾನ್‌ ನಲ್ಲಿರುವ ಅಮೆರಿಕ ಪಡೆಗಳನ್ನು ಗುರಿ ಮಾಡಿಕೊಂಡಿರುವ ಐಎಸ್‌-ಕೆ ಅಥವಾ ಐಸಿಸ್‌-ಕೆ ಗುಂಪಿನ ಉಗ್ರರು, ತಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸಲು ಮುಂದಾಗಿದ್ದಾರೆ. ಗುಪ್ತಚರ ಮೂಲಗಳ ಪ್ರಕಾರ, ಈ ಉಗ್ರರು ಕೇಂದ್ರ ಏಷ್ಯಾ ಮತ್ತು ಭಾರತಕ್ಕೆ ಜೆಹಾದ್‌ ಹರಡಿಸಲು ಮುಂದಾಗಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇವರ ಪ್ರಮುಖ ಧ್ಯೇಯ ಯುವಕರನ್ನು ತಮ್ಮ ಸಂಘಟನೆಗಳಿಗೆ ಸೆಳೆದು, ಅವರ ಮೂಲಕ ದೇಶದಲ್ಲಿ ಉಗ್ರ ಕೃತ್ಯ ನಡೆಸುವುದು. ಬಳಿಕ ಭಾರತದಲ್ಲೂ “ಖಲೀಫ‌ತ್‌’ ಆಡಳಿತವನ್ನು ಜಾರಿಗೆ ತರಬೇಕು ಎಂಬ ದುರಾಲೋಚನೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮುಂಬಯಿ ಮತ್ತು ಕೇರಳದ ಕೆಲವು ಯುವಕರು ಈ ಉಗ್ರ ಸಂಘಟನೆಗೆ ಸೇರಿದ್ದಾರೆ. ಇವರ ಮೂಲಕ ಯುವಕರನ್ನು ಮತಾಂಧರನ್ನಾಗಿ ಮಾಡಿ ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಇಂಥ ಪ್ರಕ್ರಿಯೆಗಳು ಹೆಚ್ಚಾದರೆ, ಭಾರತದಲ್ಲೂ ಸ್ಲಿಪರ್‌ ಸೆಲ್‌ ಗಳ ಚಟುವಟಿಕೆ ಹೆಚ್ಚಾಗಲಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಈ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೈಶ್‌ ಎ ಮೊಹಮ್ಮದ್‌ ಮತ್ತು ಲಷ್ಕರ್‌ ಎ ತಯ್ಯಬಾ ಉಗ್ರ ಸಂಘಟನೆಗಳ ನಾಯಕರು ಈಗಾಗಲೇ ಅಫ್ಘಾನಿಸ್ಥಾನಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಕಾಬೂಲ್‌ ದಾಳಿ: 170 ಸಾವು
ಅಫ್ಘಾನಿಸ್ಥಾನ ದ ರಾಜಧಾನಿಯಲ್ಲಿ ಗುರುವಾರ ರಾತ್ರಿ ನಡೆದ ಅವಳಿ ಸ್ಫೋಟಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೆ
ಏರಿದೆ. ಇವರಲ್ಲಿ ಅಮೆರಿಕದ 13 ಯೋಧರು, 60 ಅಫ್ಘನ್ನರು ಸೇರಿದ್ದಾರೆ. ಒಬ್ಬ ಆತ್ಮಹತ್ಯಾ ದಾಳಿಕೋರ ಈ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

Advertisement

ಐಎಸ್‌-ಕೆ ಉಗ್ರ ಸಂಘಟನೆ ಈ ದಾಳಿ ನಡೆಸಿದ್ದು, ಇನ್ನಷ್ಟು ದಾಳಿಗಳಿಗೆ ಸಂಚು ಹೂಡಿದೆ. ಹೀಗಾಗಿ ಅಮೆರಿಕ ನೆಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಒಗ್ಗಟ್ಟಾಗಲು ಭಾರತ ಕರೆ
ಕಾಬೂಲ್‌ ದಾಳಿ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಮಾತನಾಡಿರುವ ಭಾರತ, ಭಯೋತ್ಪಾದನೆಯ ವಿರುದ್ಧ ಇಡೀ ಜಗತ್ತು ಒಂದಾಗಬೇಕಿದೆ ಎಂದು ಕರೆ ನೀಡಿದೆ. ಸದ್ಯ ವಿಶ್ವಸಂಸ್ಥೆಯ ಭದ್ರತ ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿರುವ ಭಾರತ, ಕಾಬೂಲ್‌ ದಾಳಿಯನ್ನು ಖಂಡಿಸಿದೆ.

550 ಮಂದಿ ಸ್ಥಳಾಂತರ
ಅಫ್ಘಾನ್‌ನಿಂದ 550 ಮಂದಿಯನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಸೇಡು ತೀರಿಸಿಕೊಳ್ಳುತ್ತೇವೆ
ಅಮೆರಿಕದ ವೈಟ್‌ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಧ್ಯಕ್ಷ ಜೋ ಬೈಡೆನ್‌, ದಾಳಿ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದಿದ್ದಾರೆ. ಐಎಸ್‌ -ಕೆಯ ನೆಲೆಗಳನ್ನು ಗುರುತಿಸುವಂತೆ ಅಮೆರಿಕದ ಯೋಧರಿಗೆ ಸೂಚನೆ ನೀಡಿರುವ ಬೈಡೆನ್‌, ಯಾವ ರೀತಿ ದಾಳಿ ಮಾಡಬಹುದು ಎಂಬ ಯೋಜನೆ ರೂಪಿಸುವಂತೆಯೂ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಅಮೆರಿಕದವರನ್ನು ವಾಪಸ್‌ ಕರೆತರುವ ಕಾರ್ಯ ಸ್ಥಗಿತಗೊಳಿಸುವುದಿಲ್ಲ ಎಂದಿದ್ದಾರೆ.

ಕಾಶ್ಮೀ ರದ ಮೇಲೆ ಕಣ್ಣು
ಅಫ್ಘಾನ್‌ನಲ್ಲಿ ತಾಲಿಬಾನ್‌ ಹಿಡಿತ ಸಾಧಿಸಿದ ಮೇಲೆ ಪಾಕಿಸ್ಥಾನಿ ಉಗ್ರರಿಗೆ ಶಕ್ತಿ ಬಂದಂತಾಗಿದೆ. ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮಸೂದ್‌ ಅಜರ್‌ ತಾಲಿಬಾನಿಗಳ ಜತೆ ಮಾತುಕತೆ ನಡೆಸಿದ್ದಾನೆ. ಆತ ಕಂದಹಾರ್‌ಗೆ ತೆರಳಿ ತಾಲಿಬಾನ್‌ ನಾಯಕ ಬರಾದರ್‌ನನ್ನು ಭೇಟಿಯಾಗಿದ್ದಾನೆ. ಅಮೆರಿಕ ಬೆಂಬಲಿತ ಅಫ್ಘಾನ್‌ ಸರಕಾರವನ್ನು ಉರುಳಿಸಿದ್ದಕ್ಕಾಗಿ ತಾಲಿಬಾನನ್ನು ಹೊಗಳಿದ್ದಾನೆ. ಕಾಶ್ಮೀರ ವಿಚಾರದಲ್ಲಿ ಸಹಕಾರ ನೀಡುವಂತೆ ಕೇಳಿ ಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಇದಕ್ಕೆ ತಾಲಿಬಾನ್‌ ಯಾವ ಪ್ರತಿಕ್ರಿಯೆ ನೀಡಿದೆ ಎಂಬ ಮಾಹಿತಿ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next