ಲಂಡನ್: ಇಲ್ಲಿನ ಪಾರ್ಸನ್ಸ್ ಗ್ರೀನ್ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದ ಬಕೆಟ್ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ಯು.ಕೆ ಪೊಲೀಸರು, 18 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದು, ಬಾಂಬ್ ಸ್ಫೋಟಕ್ಕೂ ಬಂಧಿತನಿಗೂ ಸಂಬಂಧವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೆಂಟ್ ಪೊಲೀಸರು, ಶನಿವಾರ ಬೆಳಗ್ಗೆ ಡೋವರ್ ಟನ್ ಪೋರ್ಟ್ ಪ್ರದೇಶದಲ್ಲಿ ಗ್ರಗಾಮಿ ಕಾಯಿದೆ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆರೋಪಿ ಯನ್ನು ಕಸ್ಟಡಿಗೆ ಪಡೆದು ನಂತರ ದಕ್ಷಿಣ ಲಂಡನ್‌ನ ಪೊಲೀಸ್ ಠಾಣೆಗೆ ಆತನನ್ನು ವರ್ಗಾಯಿಸಲಾಗಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಐಸಿಸ್) ದಾಳಿಯ ಹೊಣೆ ಹೊತ್ತುಕೊಂಡ ಬೆನ್ನಲ್ಲೇ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಸಹಕಾಯಕ ಪೊಲೀಸ್ ಆಯುಕ್ತ ನೀಲ್ ಬಸು, “ಶನಿವಾರ ಮುಂಜಾನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಆರೋಪಿ ಯನ್ನು ಬಂಧಿಸಿದ್ದೇವೆ. ಘಟನೆ ಕುರಿತಂತೆ ಹೆಚ್ಚಿನ ತನಿಖೆಗೆ ಈ ಬಂಧನ ನೆರವಾಗಲಿದೆ. ಆದರೆ ಮತ್ತಷ್ಟು ದಾಳಿ ನಡೆಯುವ ಸುಳಿವಿರುವ ಹಿನ್ನೆಲೆಯಲ್ಲಿ ಈಗಲೇ ಈ ಬಗ್ಗೆ ಹೆಚ್ಚು ವಿವರ ನೀಡಲಾಗದು,’ ಎಂದು ಹೇಳಿದ್ದಾರೆ.
ವಿಷಮ ಪರಿಸ್ಥಿತಿ: ಉಗ್ರರು ಹೆಚ್ಚು ಜನಸಂಧಣಿ ಇರುವ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ದಾಳಿ ಸಂಘಟಿಸ ುತ್ತಿದ್ದು, ದೇಶದಲ್ಲಿ ವಿಷಮ ಪರಿಸ್ಥಿತಿ ಎದುರಾಗಿದೆ ಎಂದಿರುವ ಬ್ರಿಟನ್ ಸರ್ಕಾರ, ಶೀಘ್ರದಲ್ಲೇ ಮತ್ತೆ ದಾಳಿ ನಡೆಯುವ ಸಾಧ್ಯತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
ಟ್ರಂಪ್‌ಗೆ ಮೇ ತಿರುಗೇಟು: ಈ ನಡುವೆ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಗ್ರವಾದ ನಿಗ್ರಹಿಸುವ ನಿಟ್ಟಿನಲ್ಲಿ “ಬ್ರಿಟನ್ ಇನ್ನಷ್ಟು ಕ್ರಿಯಾಶೀಲವಾಗಬೇಕು’ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬ್ರಿಟನ್ ಪ್ರಧಾನಿ ತೆರೇಸಾ ಮೇ, “ಇಂಥ ಟೀಕೆಗಳಿಂಧ ಎಳ್ಳಷ್ಟೂ ನೆರವಾಗುವುದಿಲ್ಲ,’ ಎಂದು ಖಾರವಾಗೇ ತಿರುಗೇಟು ನೀಡಿದ್ದಾರೆ.