ನವದೆಹಲಿ: ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಪಶ್ಚಿಮಬಂಗಾಳದ ಐಸಿಸ್ ಉಗ್ರಗಾಮಿ ಸಂಘಟನೆಯ ಏಕೈಕ ಸದಸ್ಯ ಮೊಹಮ್ಮದ್ ಮುಸಿರುದ್ದೀನ್ ಅಲಿಯಾಸ್ ಅಬು ಮೂಸಾನನ್ನು ಮಂಗಳವಾರ ಕೋಲ್ಕತಾ ಸೆಷನ್ ಕೋರ್ಟ್ ಗೆ ವಿಚಾರಣೆಗೆ ಕರೆತಂದ ವೇಳೆ ನ್ಯಾಯಾಧೀಶರ ಮೇಲೆ ಶೂ ಎಸೆದು ಹಲ್ಲೆ ನಡೆಸಲು ಮುಂದಾಗಿದ್ದ ನಡೆದಿದೆ.
ವರದಿಯ ಪ್ರಕಾರ, ವಿಚಾರಣೆ ವೇಳೆ ಆಕ್ರೋಶಕ್ಕೊಳಗಾದ ಮೂಸಾ ಶೂ ಕಳಚಿ ನ್ಯಾಯಾಧೀಶರತ್ತ ಎಸೆದಿದ್ದು, ಅದು ವಕೀಲರ ಮೈಮೇಲೆ ಬಿದ್ದ ಪ್ರಸಂಗ ನಡೆಯಿತು. ಮೂಸಾ ಎನ್ ಐಎ ವಶದಲ್ಲಿದ್ದು, ಈತನನ್ನು ಕೋಲ್ಕತಾದ ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಘಟನೆ ಬಳಿಕ ಮೂಸಾನ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಎನ್ ಐಎ ಮನವಿ ಸಲ್ಲಿಸಿದೆ. ಮುಂಗೋಪಿ ಸ್ವಭಾದವನಾದ ಮೂಸಾ ಈಗಾಗಲೇ ಜೈಲಿನೊಳಗೆ ಹಲವು ಕೈದಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಕೋಲ್ಕತಾದ ಸೆಲ್ ನಂ 7ರಲ್ಲಿನ ಬೇಸಿನ್ ಔಟ್ ಲೆಟ್ ಗೆ ಪಿವಿಸಿ ಪೈಪ್ ಅಳವಡಿಸುವ ಕೆಲಸದ ವೇಳೆ ಮೂಸಾ ಹೆಡ್ ವಾರ್ಡನ್ ಅಮಲ್ ಕರ್ಮಾಕರ್ ಮೇಲೆ ಹಲ್ಲೆ ನಡೆಸಿದ್ದ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಹೆಡ್ ವಾರ್ಡನ್ ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ಹೇಳಿದೆ.
2017ರಲ್ಲಿ ಅಲಿಪೋರಾ ಸೆಂಟ್ರಲ್ ಜೈಲಿನಲ್ಲಿ ಮೂಸಾ ವಾರ್ಡನ್ ಮೇಲೆ ಹಲ್ಲೆ ನಡೆಸಿ, ಹರಿತವಾದ ಕಬ್ಬಿಣದ ಚೂರಿನಿಂದ ಗಂಟಲನ್ನು ಕತ್ತರಿಸಿ ಹಾಕಿದ್ದ. 2016ರಲ್ಲಿ ಬುರ್ದ್ವಾನ್ ಠಾಣೆಗೆ ಹಾಜರಾಗಿರುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಈತನನ್ನು ಬಂಧಿಸಿತ್ತು. ನಂತರ ಮೂಸಾನನ್ನು ಹೌರಾ ವಿಶ್ವಭಾರತಿ ಫಾಸ್ಟ್ ಪ್ಯಾಸೆಂಜರ್ ರೈಲಿನಲ್ಲಿ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆತನ ಬಳಿ ಇದ್ದ ಚೂರಿ ಹಾಗೂ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.