ಗುವಾಹಟಿ: ಬಾಂಗ್ಲಾದೇಶದಿಂದ ಗಡಿ ದಾಟಿದ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಮತ್ತು ಆತನ ಸಹಚರನೊಬ್ಬನನ್ನು ಬುಧವಾರ ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಅಸ್ಸಾಂ ಪೊಲೀಸ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಣಬ್ಜ್ಯೋತಿ ಗೋಸ್ವಾಮಿ ಅವರು ಹೇಳಿಕೆ ನೀಡಿದ್ದು, ಸುಳಿವಿನ ಮೇರೆಗೆ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಧರ್ಮಶಾಲಾ ಪ್ರದೇಶದಿಂದ ಇಬ್ಬರನ್ನು ಬಂಧಿಸಿ ಗುವಾಹಟಿಯಲ್ಲಿರುವ ಎಸ್‌ಟಿಎಫ್ ಕಚೇರಿಗೆ ಕರೆತರಲಾಯಿತು’ ಎಂದು ತಿಳಿಸಿದ್ದಾರೆ.
ಬಂಧಿತರು ಡೆಹ್ರಾಡೂನ್‌ನ ಚಕ್ರತಾ ಮೂಲದ ಹ್ಯಾರಿಸ್ ಫಾರೂಕಿ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ ಎಂಬಾತನಾಗಿದ್ದು ಈತ ಭಾರತದಲ್ಲಿ ಐಸಿಸ್ ಮುಖ್ಯಸ್ಥನಾಗಿದ್ದಾನೆ. ಇನ್ನೊಬ್ಬ ಸಹಚರ ಪಾಣಿಪತ್‌ನ ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಎಂಬಾತನಾಗಿದ್ದು ಈತ ಇಸ್ಲಾಂಗೆ ಮತಾಂತರಗೊಂಡಿದ್ದು ಆತನ ಪತ್ನಿ ಬಾಂಗ್ಲಾದೇಶಿ ಪ್ರಜೆ ಎಂದು ಸಿಪಿಆರ್‌ಒ ಹೇಳಿಕೆ ತಿಳಿಸಿದೆ.
“ಇಬ್ಬರೂ ಭಾರತದಲ್ಲಿ ಐಸಿಸ್‌ನ ತೀವ್ರ ಬೋಧನೆ ಮತ್ತು ಪ್ರೇರಿತ ನಾಯಕ/ ಸದಸ್ಯರು. ಭಾರತದಾದ್ಯಂತ ಹಲವಾರು ಸ್ಥಳಗಳಲ್ಲಿ ನೇಮಕಾತಿ, ಭಯೋತ್ಪಾದಕ ನಿಧಿ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಪಿತೂರಿಗಳನ್ನು ನಡೆಸಿದ್ದರು ಎನ್ನುವುದು ತಿಳಿದು ಬಂದಿದೆ.
ಎನ್‌ಐಎ, ದೆಹಲಿ ಎಟಿಎಸ್, ಲಕ್ನೋ ಇತರ ಸ್ಥಳಗಳಲ್ಲಿ ಇಬ್ಬರ ವಿರುದ್ಧ ಹಲವಾರು ಪ್ರಕರಣಗಳಿವೆ. ಅಸ್ಸಾಂ ಎಸ್‌ಟಿಎಫ್ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಇಬ್ಬರನ್ನು ಎನ್‌ಐಎಗೆ ಹಸ್ತಾಂತರಿಸಲಿದೆ ಎಂದು ತಿಳಿಸಿದೆ.