Advertisement
ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸ್ ಓದಿಸುವುದಕ್ಕೆ ಕಡಿಮೆಯೆಂದರೂ ಆರು ಲಕ್ಷ ಬೇಕು. ಎಂಬಿಎಗೆ ವರ್ಷಕ್ಕೆ ನಾಲ್ಕು ಲಕ್ಷ, ಎಂಸಿಎಗೆ ವರ್ಷಕ್ಕೆ ಎರಡು ಲಕ್ಷ, ಎಂಟೆಕ್‌ಗೆ ಮೂರು ಲಕ್ಷ, ಇನ್ನು ಮೆಡಿಕಲ್ ಗೆ ಏನಿಲ್ಲವೆಂದರೂ 35 ಲಕ್ಷ … ಅದೆಲ್ಲಾ ಬಿಡಿ, ಪ್ರೀನರ್ಸರಿಗೇ ಹೆಚ್ಚಾ ಕಡಿಮೆ ಒಂದು ಲಕ್ಷದವರೆಗೂ ಡೊನೇಷನ್ನು. ಆ ನಂತರ ವರ್ಷಕ್ಕೆ ಏನಿಲ್ಲವೆಂದರೂ ಅರವತ್ತು ಸಾವಿರ … ಇದು ಇವತ್ತಿನ ಶಿಕ್ಷಣದ ಒಟ್ಟಾರೆ ಚಿತ್ರಣ ಎಂದರೆ ತಪ್ಪಿಲ್ಲ. ಒಂದು ಕುಟುಂಬದ ಪ್ರತಿ ವರ್ಷದ ಆದಾಯದಲ್ಲಿ ಕಾಲು ಭಾಗದ ಖರ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ಹೋಗುತ್ತದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ದುಪ್ಪಟ್ಟಾದರೆ ಆಶ್ಚರ್ಯವಿಲ್ಲ. ಏಕೆಂದರೆ, ಭವಿಷ್ಯದಲ್ಲಿ ಶಿಕ್ಷಣ ಹೈಟೆಕ್ ಆಗುವುದಷ್ಟೇ ಅಲ್ಲ, ಜಗತ್ತಿನ ಜನಪ್ರಿಯ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿಗೆ ಬಂದು, ಸ್ಪರ್ಧೆ ಹೆಚ್ಚಾಗಿ, ಶಿಕ್ಷಣ ಇನ್ನಷ್ಟು ದುಬಾರಿಯಾದರೆ ಅದರಲ್ಲಿ ಆಶ್ಚರ್ಯವೇ ಇಲ್ಲ.
ಹಾಗಾದರೆ, ಇದಕ್ಕೆ ಉಪಾಯವೇನು ಎಂದು ಎಲ್ಲರೂ ತಲೆ ಕೆರೆದುಕೊಳ್ಳುವುದು ಸಹಜ. ಇದಕ್ಕೆ ಒಂದು ಉಪಾಯವೆಂದರೆ, ಕೂಸು ಹುಟ್ಟುವುದಕ್ಕೆ ಮುನ್ನವೇ ಕುಲಾವಿ ಹೊಲಿಸುವುದು. ಅಂದರೆ, ಮಕ್ಕಳು ದೊಡ್ಡವರಾಗಿ ಏನು ಓದುತ್ತಾರೆ ಅಥವಾ ಓದಬಹುದು ಎಂದು ಕಾಯದೆಯೇ, ಈಗಿನಿಂದಲೇ ತಿಂಗಳಿಗಿಷ್ಟೆಂದು ಮಕ್ಕಳ ಹೆಸರಿನಲ್ಲಿ ನಿಯಮಿತವಾಗಿ ಹಣವನ್ನು ಉಳಿಸಿ, ಆ ನಂತರ ಅದು ಮೆಚ್ಯೂರ್ ಆದಮೇಲೆ, ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆಂದು ಬಳಸಿಕೊಳ್ಳುವುದು. ಮುಂಚೆಲ್ಲಾ ಮನೆ ಕಟ್ಟುವುದಕ್ಕೆ, ರಿಟೈರ್‌ವೆುಂಟ್ ನಂತರಕ್ಕೆಂದು ಪ್ರತಿ ತಿಂಗಳು ಒಂದಿಷ್ಟು ಉಳಿಸಿ, ದೊಡ್ಡ ಮೊತ್ತ ಮಾಡುವ ಪರಿಪಾಠವಿತ್ತಲ್ಲ, ಅದನ್ನು ಈಗ ಮಕ್ಕಳ ವಿದ್ಯಾಭ್ಯಾಸಕ್ಕೂ ಅಳವಡಿಸುವಂತಾಗಿದೆ. ಹಿಂದೆ ಒಬ್ಬ ವ್ಯಕ್ತಿ ರಿಟೈರ್ ಆಗುವ ಹಂತಕ್ಕೆ ಬಂದಾಗ ಮಕ್ಕಳು ಬೆಳೆದು ನಿಲ್ಲುತ್ತಿದ್ದರು. ರಿಟೈರ್‌ವೆುಂಟಿನಿಂದ ಬಂದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳಲಾಗುತಿತ್ತು. ಇಲ್ಲವಾದರೆ, ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸಲಾಗುತಿತ್ತು. ಈಗ ಹಾಗಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಆರಂಭದಿಂದಲೇ ಯೋಚಿಸಿ ಹಣ ಉಳಿಸಲಾಗುತ್ತಿದೆ.
Related Articles
Advertisement
ಮಕ್ಕಳಿಗೆ ಹೀಗೆ!ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಪಾಲನೆ-ಪೋಷಣೆಗೆಂದೇ ಹಲವು ತರಹದ ಫಂಡ್‌ಗಳು, ಪ್ಲಾನ್‌ಗಳು ಶುರುವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಪ್ರಮುಖವಾಗಿ ಮಗು ಹುಟ್ಟಿದಾಗಿನಿಂದ ಶುರುವಾಗುವ ಆ ಸ್ಕೀಮ್‌ಗಳು, ಆ ಮಕ್ಕಳು ಬೆಳೆದು 18 ವರ್ಷ ತುಂಬುವವರೆಗೂ ಚಾಲ್ತಿಯಲ್ಲಿರುತ್ತವೆ. ಶೇರ್ ಮಾರ್ಕೆಟ್ ತಿಂಗಳಿಗಿಷ್ಟು ಎಂದು ತುಂಬುತ್ತಾ ಹೋದರೆ, ಕೊನೆಗೆ ಒಂದಿಷ್ಟು ದೊಡ್ಡ ಮೊತ್ತ ಕೈಸೇರುತ್ತದೆ. ಆ ಸಂದರ್ಭದಲ್ಲಿ ಅದು ಸ್ವಲ್ಪ ಕಡಿಮೆ ಎಂದೇ ಎನಿಸಬಹುದು. ಆದರೆ, ಅಷ್ಟಲ್ಲದಿದ್ದರೂ, ಇಷ್ಟಾದರೂ ನಿಮ್ಮ ಕೈಯಲ್ಲಿ ಇರುತ್ತದೆ. ಪರಿಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಎಷ್ಟೋ ಜನ ಮಕ್ಕಳಾಗುವುದಕ್ಕಿಂತ ಮುಂಚಿನಿಂದಲೇ ಮಕ್ಕಳ ಶಿಕ್ಷಣಕ್ಕೆಂದು ತಮ್ಮ ಸಂಬಳದಲ್ಲಿ ಒಂದು ಪಾಲು ಎತ್ತಿಡುವಂತಹ ಸಂಪ್ರದಾಯ ಶುರುವಾಗಿದೆ. ಇದಕ್ಕೆ ಚಿಲ್ಡ್ರನ್ಸ್ ಫಂಡ್‌ನ ಅವಶ್ಯಕತೆ ಇಲ್ಲ. ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಅಥವಾ ಆರ್‌ಡಿಗಳಲ್ಲಿ ಹಣ ಹೂಡಿ ಅದನ್ನು ದೀರ್ಘಕಾಲದವರೆಗೂ ಕಾದಿಟ್ಟರೆ ಅಷ್ಟೇ ಸಾಕು. ಪ್ರಮುಖವಾಗಿ ಈ ಕುರಿತು ಮೊದಲೇ ಯೋಚಿಸಿ ಹೆಜ್ಜೆ ಇಡಬೇಕು. ಮಕ್ಕಳು ದೊಡ್ಡವರಾಗುತ್ತಾ ಬಂದ ಮೇಲೆ ಯೋಚಿಸಿದರೆ ಅದರಲ್ಲಿ ಫಲವಿಲ್ಲ. ಹಾಗೆ ಪ್ರಾರಂಭಿಸಿದರೂ, ನೀವು ಹೂಡುವ ಮತ್ತು ವಾಪಸ್ಸು ಬರುವ ಮೊತ್ತ ಅಷ್ಟೇನೂ ದೊಡ್ಡದಾಗಿರುವುದಿಲ್ಲ. ಹಾಗಾಗಿ ಮದುವೆಯಾಗಿ ಮಕ್ಕಳಾದ ಮೇಲೆ, ಈ ಕುರಿತು ಯೋಚಿಸುವುದಕ್ಕಿಂತ ಹೆಚ್ಚಾಗಿ, ಅದಕ್ಕಿಂತ ಬಹಳ ಮುನ್ನವೇ ಮಕ್ಕಳ ವಿದ್ಯಾಭ್ಯಾಸಕ್ಕಲ್ಲದಿದ್ದರೂ, ಆದಾಯದ ಒಂದು ಪಾಲಿನ್ನು ಧೀರ್ಘಕಾಲಕ್ಕೆಂದು ಕೂಡಿಟ್ಟುಕೊಂಡರೆ, ಅದನ್ನು ವಿದ್ಯಾಭ್ಯಾಸಕ್ಕಾದರೂ ಬಳಸಬಹುದು ಅಥವಾ ಬೇರೆ ಇನ್ಯಾವ ಕೆಲಸಗಳಿಗಾದರೂ ಬಳಸಿಕೊಳ್ಳಬಹುದು. ಎಲ್ಲಾ ಸರಿ, ಯಾವ ತರಹದ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಮತ್ತು ಯಾವ ತರಹದ ಫಂಡ್‌ಗಳಿಂದ ಅಧಿಕ ಲಾಭ ಬರಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇರತ್ತದೆ. ಪ್ರಮುಖವಾಗಿ 12ರಿಂದ 15 ವಷಗಳ ಸುಧೀರ್ಘ ಬಾಳುವುದಷ್ಟೇ ಅಲ್ಲ, ಒಳ್ಳೆಯ ರಿಟರ್ನ್ಸ್ ಕೊಡುವ ಫಂಡ್‌ಗಳು ಅಥವಾ ಹೂಡಿಕೆ ಮುಖ್ಯವಾಗುತ್ತದೆ. ಉದಾಹರಣೆಗೆ, ರಿಕರಿಂಗ್ ಡೆಪಾಸಿಟ್‌ನಲ್ಲಿ ಇಂತಿಷ್ಟು ಎಂದು ಹೂಡುತ್ತಾ ಹೋದರೆ, ವರ್ಷಕ್ಕೆ ಶೇ 9ರಷ್ಟು ಬಡ್ಡಿ ಬರುತ್ತದೆ. ಆದರೆ, ಮ್ಯೂಚ್ಯುಯಲ್ ಫಂಡ್‌ಗಳಲ್ಲಿ, ಅದರಲ್ಲೂ ಈಕ್ವಿಟಿ ಫಂಡುಗಳಲ್ಲಿ ಈ ಬಡ್ಡಿ ಇನ್ನಷ್ಟು ಹೆಚ್ಚಿರುತ್ತದೆ. ಹಾಗಾಗಿ ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹಲವರು ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳ ಮೂಲಕ ಪ್ರತಿ ತಿಂಗಳು ಇಷ್ಟಿಷ್ಟು ಎಂದು ನಿಯಮಿತವಾಗಿ ಹಣ ಹೂಡುವುದು ಸೂಕ್ತ. ಮಕ್ಕಳು ಚಿಕ್ಕವರಿದ್ದಾಗಲೇ ಹೂಡುವುದನ್ನು ಶುರು ಮಾಡಿಕೊಂಡರೆ, ಸಹಜವಾಗಿ ಅವರು ಬೆಳೆದು ದೊಡ್ಡವರಾಗುವಷ್ಟರಲ್ಲಿ ದೊಡ್ಡ ಮೊತ್ತ ಕೈ ಸೇರುತ್ತದಷ್ಟೇ ಅಲ್ಲ, ಮಕ್ಕಳು ಸಣ್ಣ ಪ್ರಾಯದವರಿದ್ದಾಗಲೇ ಈ ಕೆಲಸ ಶುರು ಮಾಡಿದರೆ, ಆಗ ಪ್ರತಿ ತಿಂಗಳು ಪಾವತಿ ಮಾಡುವ ಹಣ ಸಹ ಕಡಿಮೆ ಇರುತ್ತದೆ. ಉದಾಹರಣೆಗೆ, 20 ವರ್ಷಗಳ ನಂತರ ನಿಮ್ಮ ಮಗುವಿನ ವಿದ್ಯಾಭ್ಯಾಸಕ್ಕಾಗಿ 20ರಿಂದ 25 ಲಕ್ಷ ಬೇಕು ಅಂತಾದರೆ, ಮಗು ಹುಟ್ಟಿದ ವರ್ಷದಿಂದ ಪ್ರತಿ ತಿಂಗಳು ಸುಮಾರು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅದು ಮೆಚ್ಯುರಿಟಿ ಹಂತ ತಲುಪುವಷ್ಟರಲ್ಲಿ ನಿಮ್ಮ ಹಣವೇ 24 ಲಕ್ಷದಷ್ಟಾಗಿರುತ್ತದೆ. ಇನ್ನು ಅದಕ್ಕೆ ಬಡ್ಡಿ ಎಲ್ಲವೂ ಸೇರಿ 28 ಲಕ್ಷದಷ್ಟಾದರೂ ಆಗುತ್ತದೆ. ಅದೇ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಪ್ರತಿ ತಿಂಗಳು ಹೂಡುವ ಹಣವೂ ಜಾಸ್ತಿಯಾಗುತ್ತದೆ. ಮಗುವಿಗೆ 10 ವರ್ಷ ತುಂಬಿದ ನಂತರ ನೀವು ಹೂಡಿಕೆ ಮಾಡಬೇಕೆಂದುಕೊಂಡರೆ, ಆಗ ನಿಮ್ಮ ಬಳಿ ಇರುವುದು 10 ವರ್ಷಗಳಷ್ಟೇ. ನಿಮಗೆ 20 ಲಕ್ಷದ ಮೇಲೆ ದುಡ್ಡು ಬರಬೇಕೆಂದಿಟ್ಟುಕೊಂಡರೆ, ನೀವು ತಿಂಗಳಿಗೆ 20 ಸಾವಿರದಷ್ಟು ಪ್ರೀಮಿಯಂ ಪ್ರತಿ ತಿಂಗಳು ತುಂಬಬೇಕಾಗುತ್ತದೆ. ಹಾಗಾಗಿ ಮಗು ಚಿಕ್ಕದಾಗಿಂದಲೇ ಹೂಡಿಕೆ ಮಾಡುವುದು ಒಳ್ಳೆಯ ಉಪಾಯ. ಹಾಗಾಗಿ, ಮಕ್ಕಳು ದೊಡ್ಡವರಾಗಲೀ, ಅವರೇನು ಓದಬೇಕು ಎಂಬುದನ್ನು ಅವರೇ ತೀರ್ಮಾನಿಸಿಲಿ… ಎಂಬ ವಿಷಯಗಳಿಗೆ ಕಾಯುವುದು ಬಿಟ್ಟು, ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ಅವರ ವಿದ್ಯಾಭ್ಯಾಸದ ಕಡೆಗೆ ಒಂದು ಕಣ್ಣಿರಲಿ. ಅವರು ಚಿಕ್ಕವರಿರುವಾಗಲೇ ಇಷ್ಟಿಷ್ಟು ಎಂದು ಹಣ ಉಳಿಸಿ, ಅವರ ವಿದ್ಯಾಭ್ಯಾಸಕ್ಕೆ ಈಗಿನಿಂದಲೇ ನಿಮ್ಮ ಕಾಣಿಕೆ ಇರಲಿ. – ಚೇತನ್ ನಾಡಿಗೇರ್