Advertisement

ಇಮ್ರಾನ್‌ ಮೇಲೆ ಐಎಸ್‌ಐ ಕೆಂಗಣ್ಣು

10:55 PM Nov 03, 2022 | Team Udayavani |

ಪಾಕಿಸ್ಥಾನದ ರಾಜಕಾರಣವೇ ಅಂಥದ್ದು. ಭಾರತದ ಜತೆಗೇ ಸ್ವಾತಂತ್ರ್ಯ ಸಿಕ್ಕರೂ ಈ ದೇಶಕ್ಕೆ ತನ್ನೊಳಗಿನ ಶತ್ರುಗಳಿಂದ ಇಂದಿಗೂ ಸ್ವಾತಂತ್ರ್ಯ ಎಂಬುದೇ ಸಿಕ್ಕಿಲ್ಲ. ಜತೆಗೆ ಆ ದೇಶ ತನ್ನ ಸೇನೆಗೆ ಮತ್ತು ಗುಪ್ತಚರ ಸಂಸ್ಥೆಗೆ ಇನ್ನಿಲ್ಲದ ಅಧಿಕಾರ ಕೊಟ್ಟಾಗಲೇ ಆ ದೇಶದ ಸರ್ವನಾಶ ಆರಂಭವಾಗಿತ್ತು. ವಿಚಿತ್ರವೆಂದರೆ ಅದು ಇಂದಿಗೂ ಮುಂದುವರಿದೇ ಇದೆ. ಇದಕ್ಕೆ ಉದಾಹರಣೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ನಡೆದ ದಾಳಿ.

Advertisement

ಸದ್ಯ ಏನಾಗಿದೆ? :

ಪಾಕಿಸ್ಥಾನದ ಪಂಜಾಬ್‌ ಪ್ರಾಂತದಲ್ಲಿರುವ ವಾಜಿರಾಬಾದ್‌ನಲ್ಲಿ ರ್ಯಾಲಿ ನಡೆಸುತ್ತಿದ್ದ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇದು ಇಮ್ರಾನ್‌ ಹತ್ಯೆಗಾಗಿ ನಡೆಸಲಾದ ಸಂಚು ಎಂದೇ ಹೇಳಲಾಗಿದ್ದು, ಅದೃಷ್ಟವಶಾತ್‌ ಅವರು ಬದುಕುಳಿದಿದ್ದಾರೆ. ಈ ರ್ಯಾಲಿಯನ್ನು ಸೇನೆ ಬೆಂಬಲಿತ ಶಹಬಾಜ್‌ ಶರೀಫ್ ಸರಕಾರದ ವಿರುದ್ಧ ನಡೆಸಲಾಗುತ್ತಿತ್ತು. ಪಿಸ್ತೂಲ್‌ ಹಿಡಿದಿದ್ದ ವ್ಯಕ್ತಿಯೊಬ್ಬ ಇಮ್ರಾನ್‌ ಖಾನ್‌ ಮೇಲೆ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆಯಾದರೂ ಮತ್ತೂಂದು ಮೂಲಗಳ ಪ್ರಕಾರ ಎಕೆ-46 ಗನ್‌ ಹಿಡಿದಿದ್ದ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಈ ವೇಳೆ ಇಮ್ರಾನ್‌ ಖಾನ್‌ ಅವರ ಹಲವಾರು ಬೆಂಬಲಿಗರೂ ಗಾಯಗೊಂಡಿದ್ದಾರೆ.

ಇಮ್ರಾನ್‌ ಗುರಿ ಏಕೆ? :

ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನ ಸರಕಾರ, ಸೇನೆ ಮತ್ತು ಐಎಸ್‌ಐ ವಿರುದ್ದ ಇಮ್ರಾನ್‌ ಖಾನ್‌ ಸಂಪೂರ್ಣವಾಗಿ ತಿರುಗಿಬಿದ್ದಿದ್ದಾರೆ. ದೇಶದ ಈ ಸ್ಥಿತಿಗೆ ಸೇನೆ ಮತ್ತು ಐಎಸ್‌ಐ ಕಾರಣ ಎಂಬುದು ಅವರ ನೇರ ಆರೋಪ. ಅಲ್ಲದೆ ಸದ್ಯ ಇರುವ ಶಹಬಾಜ್‌ ಶರೀಫ್ ನೇತೃತ್ವದ ಸರಕಾರವೂ ಸೇನೆಯ ಕೈಗೊಂಬೆ. ಈ ಬಗ್ಗೆ ದೇಶಾದ್ಯಂತ ನಡೆಸುತ್ತಿರುವ ರ್ಯಾಲಿಗಳಲ್ಲಿ ಇಮ್ರಾನ್‌ ಖಾನ್‌ ಆರೋಪಿಸಿಕೊಂಡು ಬರುತ್ತಲೇ ಇದ್ದಾರೆ. ಇವರ ಈ ಆರೋಪಗಳಿಂದಾಗಿ ಇತ್ತೀಚೆಗಷ್ಟೇ ಸೇನಾಧಿಕಾರಿಗಳು ಮತ್ತು ಐಎಸ್‌ಐ ಮುಖ್ಯಸ್ಥರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ನೀಡಿದ್ದರು. ವಿಚಿತ್ರವೆಂದರೆ ಪಾಕ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐಎಸ್‌ಐ ಮುಖ್ಯಸ್ಥರೊಬ್ಬರು ಪತ್ರಿಕಾಗೋಷ್ಠಿ ನಡೆಸಿದ್ದರು.

Advertisement

ಮುಂದೇನಾಗಬಹುದು? :

ಪಾಕಿಸ್ಥಾನದಾದ್ಯಂತ ಇಮ್ರಾನ್‌ ಖಾನ್‌ ಅತ್ಯಂತ ಜನಪ್ರಿಯತೆ ಹೊಂದಿದ್ದಾರೆ. ಇದರಿಂದಾಗಿಯೇ ಅವರ ಮೇಲೆ ಸೇನೆ ಮತ್ತು ಐಎಸ್‌ಐ ಕೆಂಗಣ್ಣು ಬೀರಿವೆ. ಇತ್ತೀಚಿನ ದಿನಗಳಲ್ಲಿ ದೇಶದ ಗುಲಾಮಿತನದ ಬಗ್ಗೆ ಆಗಾಗ್ಗೆ ಮಾತನಾಡುತ್ತಲೇ ಇರುವ ಇಮ್ರಾನ್‌ ಖಾನ್‌, ನಮ್ಮ ಸ್ಥಿತಿ ಏನಾಗಿದೆ ಎಂಬುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಅಲ್ಲಿನ ಜನತೆಯನ್ನು ಬಡಿದೆಬ್ಬಿಸುತ್ತಿದ್ದಾರೆ. ಈಗ ಇಮ್ರಾನ್‌ ಖಾನ್‌ ಮೇಲಿನ ದಾಳಿ ಅತೀದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಬಹುದು. ಈಗಾಗಲೇ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷವು ದೇಶಾದ್ಯಂತ ಪ್ರತಿಭಟನೆಗೆ ಕರೆಕೊಟ್ಟಿದೆ. ಒಂದೊಮ್ಮೆ ಇದು ಹಿಂಸಾರೂಪಕ್ಕೆ ತಿರುಗಿದರೆ ಆ ದೇಶದ ಸ್ಥಿತಿ ಸುಧಾರಿಸುವುದು ತೀರಾ ಕಷ್ಟವೇ ಆಗಬಹುದು.

ಪ್ರೀತಿಯ ಕೂಸು ಇಮ್ರಾನ್‌  :

ವಿಚಿತ್ರವೆಂದರೆ ನವಾಜ್‌ ಶರೀಫ್ ಮತ್ತು ಬೆನಜೀರ್‌ ಭುಟ್ಟೋ ಕುಟುಂಬಗಳ ರಾಜಕೀಯ ನೋಡಿದ್ದ ಪಾಕಿಸ್ಥಾನದ ಸೇನೆಗೆ ಹೊಸ ರಾಜಕೀಯ ಪಕ್ಷವೊಂದು ಬೇಕಾಗಿತ್ತು. ಆಗ ಸಿಕ್ಕವರೇ ಇಮ್ರಾನ್‌ ಖಾನ್‌. ಇವರು ಪಕ್ಷ ಆರಂಭಿಸಿದಾಗಿನಿಂದಲೂ ಅದಕ್ಕೆ ತೆರೆಮರೆಯಲ್ಲೇ ನೀರೆರೆಯುತ್ತಾ ಬಂದ ಸೇನೆ, ನವಾಜ್‌ ಶರೀಫ್ ಅವರ ಅನಂತರದಲ್ಲಿ ಚೆನ್ನಾಗಿಯೇ ಬೆಳೆಸಿತು. 2018ರ ಅಲ್ಲಿನ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಹೆಚ್ಚಿನ ಸ್ಥಾನ ಪಡೆ ದರು. ಆದರೆ ಇವರಿಗೆ ಸರಕಾರ ರಚನೆಗೆ ಬೇಕಾದ ನಂಬರ್‌ ಇರಲಿಲ್ಲ. ವಿಶೇಷ ವೆಂದರೆ ಇವರಿಗೆ ನಂಬರ್‌ ಒದಗಿಸಿಕೊಟ್ಟಿದ್ದೇ ಪಾಕಿಸ್ಥಾನದ ಸೇನೆ. ಸಣ್ಣ ಪುಟ್ಟ ಪಕ್ಷಗಳನ್ನು ಒಂದು ಮಾಡಿ, ಸರಕಾರ ರಚನೆಗೆ ಬೇಕಾದ ನಂಬರ್‌ ಒದಗಿಸಿಕೊಟ್ಟಿತ್ತು.

ಅನಂತರದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಐಎಸ್‌ಐ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಇಮ್ರಾನ್‌ ಮತ್ತು ಸೇನೆ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಜತೆಗೆ ದೇಶಕ್ಕೆ ನಿಜವಾದ ಬಾಸ್‌ ನಾನೇ, ಸೇನೆಯಲ್ಲ ಎಂಬುದನ್ನು ಬಿಂಬಿಸಿ ಕೊಳ್ಳಲು ಇಮ್ರಾನ್‌ ಮುಂದಾದರು. ಇದೂ ಸೇನೆಯ ಸಿಟ್ಟಿಗೆ ಕಾರಣವಾಯಿತು.

ತತ್‌ಕ್ಷಣವೇ ಜಾಗೃತರಾದ ಸೇನಾಧಿಕಾರಿಗಳು, ಮೈತುಂಬಾ ಭ್ರಷ್ಟಾಚಾರ ಆರೋಪ ಹೊತ್ತಿದ್ದ ಶಹಬಾಜ್‌ ಶರೀಫ್ ನೇತೃತ್ವದಲ್ಲಿ ಹೊಸ ಸರಕಾರ ರಚನೆಗೆ ಬೇಕಾದ ಎಲ್ಲ ಸಹಾಯ ಮಾಡಿದರು. ಇಮ್ರಾನ್‌ ಖಾನ್‌ ಸರಕಾರ ಕಿತ್ತೂಗೆದು, ಶಹಬಾಜ್‌ ಶರೀಫ್ ನೇತೃತ್ವದ ಸರಕಾರ ರಚನೆಯಾಯಿತು.

ಇದಾದ ಬಳಿಕವಂತೂ ಇಮ್ರಾನ್‌ ಖಾನ್‌, ನೇರವಾಗಿಯೇ ಸೇನೆ ಮತ್ತು ಐಎಸ್‌ಐ ವಿರುದ್ಧ ತೊಡೆತಟ್ಟಿ ನಿಂತರು. ಇದರ ಪರಿಣಾಮವೇ ಗುರುವಾರ ನಡೆದ ದಾಳಿ ಎಂದೇ ಬಿಂಬಿಸಲಾಗುತ್ತಿದೆ.

ಪಾಕ್‌ನಲ್ಲಿ ಸೇನೆ, ಐಎಸ್‌ಐ ನಿಜವಾದ ಬಾಸ್‌ :

ಇತಿಹಾಸವನ್ನು ಗಮನಿಸುತ್ತಾ ಹೋದರೆ ಯಾವ ರಾಜಕಾರಣಿಗಳು ಅಲ್ಲಿನ ಸೇನೆ ಮತ್ತು ಐಎಸ್‌ಐ ಜತೆ ಚೆನ್ನಾಗಿರುತ್ತಾರೆಯೋ ಅವರ ಬದುಕು ಚೆನ್ನಾಗಿರುತ್ತದೆ. ಆರಾಮವಾಗಿ ಸರಕಾರವನ್ನು ನಡೆಸಿಕೊಂಡು ಹೋಗಬಹುದು. ಆದರೆ ಒಮ್ಮೆ ಏನಾದರೂ ಸೇನೆ ಅಥವಾ ಐಎಸ್‌ಐ ವಿರುದ್ಧ ಕೊಂಚ ಪ್ರತಿರೋಧ ತೋರಿದರೂ ಸಾಕು, ಅಲ್ಲಿಗೆ ಅವರ ಕಥೆ ಮುಗಿಯಿತು.

ಇತ್ತೀಚೆಗಷ್ಟೇ ಕೀನ್ಯಾದಲ್ಲಿ ಎಐಆರ್‌ಐ ಟಿವಿಯ ಆ್ಯಂಕರ್‌ವೊಬ್ಬರನ್ನು ಹತ್ಯೆ ಮಾಡಲಾಗಿದೆ. ಇವರು ಸೇನೆ ಮತ್ತು ಐಎಸ್‌ಐ ಟೀಕಾಕಾರರಾಗಿದ್ದರು ಎಂಬ ಕಾರಣಕ್ಕೆ ಜೀವ ಭಯ ಎದುರಾಗಿತ್ತು. ಹೀಗಾಗಿಯೇ ಅವರು ದೇಶ ಬಿಟ್ಟು ಕೀನ್ಯಾಗೆ ಹೋಗಿದ್ದರು. ಆದರೆ ಅಲ್ಲಿ ಗುಂಡಿಟ್ಟು ಹತ್ಯೆ ಮಾಡಿ, ಬೇರೆ ಯಾರನ್ನೋ ಸಾಯಿಸ ಬೇಕಾಗಿತ್ತು. ಮಿಸ್ಟೇಕ್‌ ಆಗಿ ಇವರನ್ನು ಹತ್ಯೆ ಮಾಡಲಾಗಿದೆ ಎಂಬ ಸ್ಪಷ್ಟನೆ ಕೇಳಿಬಂತು. ಈ ಸ್ಪಷ್ಟನೆಯನ್ನು ಕೇಳಲು ಯಾರೂ ತಯಾರಿಲ್ಲ ಎಂಬುದು ಬೇರೆ ಮಾತು.

ರಾಜಕೀಯ ಹತ್ಯೆಗಳು, ಪಲಾಯನ :

ಪಾಕಿಸ್ಥಾನದ ಸೇನೆ ಜತೆಗೆ ಸಂಬಂಧ ಹಾಳು ಮಾಡಿಕೊಂಡರೆ ಒಂದೋ ಸಾವನ್ನಪ್ಪಬೇಕಾಗುತ್ತದೆ ಅಥವಾ ದೇಶದಿಂದ ಪರಾರಿಯಾಗಬೇಕಾಗುತ್ತದೆ ಎಂಬುದಕ್ಕೆ ಇತಿಹಾಸ ಹಲವಾರು ಉದಾಹರಣೆಗಳನ್ನು ನೀಡಿದೆ.

  1. ಲಿಯಾಖತ್‌ ಅಲಿ ಖಾನ್‌ :

ಪಾಕಿಸ್ಥಾನದ ಮೊದಲ ಪ್ರಧಾನಿಯಾಗಿದ್ದ ಇವರು, 1951ರಲ್ಲಿ ದುಷ್ಕರ್ಮಿಯೊಬ್ಬನ ಗುಂಡಿನ ದಾಳಿಗೆ ಬಲಿಯಾಗುತ್ತಾರೆ. ವಿಚಿತ್ರವೆಂದರೆ ಇವರು ಪಾಕಿಸ್ಥಾನದ ಅತ್ಯಂತ ಪ್ರಸಿದ್ಧ ರಾಜಕಾರಣಿಯಾಗಿದ್ದರು. ಇವರ ಪ್ರಸಿದ್ಧಿಯ ಬಗ್ಗೆ ಅಲ್ಲಿನ ಎಡಪಂಥೀಯ ಮತ್ತು ಪಾಕ್‌ ಸೇನೆ ಸಹಿಸಿಕೊಳ್ಳಲಿಲ್ಲ. ಇವರ ವಿರುದ್ಧ ದೇಶದಲ್ಲಿ ಅಸಹನೆ ವ್ಯಕ್ತವಾಗುತ್ತಿರುವಾಗಲೇ ನಿಗೂಢವಾಗಿ ಇವರ ಹತ್ಯೆಯಾಗುತ್ತದೆ.

  1. ಝುಲ್ಫಿಕರ್‌ ಅಲಿ ಭುಟ್ಟೋ :

1977ರಲ್ಲಿ ಇವರ ಹತ್ಯೆಯಾಗುತ್ತದೆ. ವಿಚಿತ್ರವೆಂದರೆ ಸೇನೆಯ ಕಡೆಯಿಂದ ಎರಡು ಬಾರಿ ಇವರ ಸರಕಾರ ವಜಾಗೊಳ್ಳುತ್ತದೆ. ಒಮ್ಮೆ 1965 ಮತ್ತು 1977ರಲ್ಲಿ. ಮೊದಲ ಬಾರಿ 1965ರಲ್ಲಿ ಇವರು ಪ್ರಧಾನಿಯಾಗಿರಲಿಲ್ಲ. ಆದರೆ 1977ರಲ್ಲಿ ಮಾತ್ರ ಪ್ರಧಾನಿಯಾಗಿದ್ದರು. ಆಗ ಇವರನ್ನು ಕೆಳಗಿಳಿಸಿದ್ದು ಅಲ್ಲದೇ ಅಲ್ಲಿನ ಸೇನೆ ನೇಣಿಗೇರಿಸುತ್ತದೆ.

  1. ಬೆನಜೀರ್‌ ಭುಟ್ಟೋ :

ಝುಲ್ಫಿಕರ್‌ ಅಲಿ ಭುಟ್ಟೋ ಅವರ ಪುತ್ರಿಯಾಗಿದ್ದ ಇವರು, ಪಾಕಿಸ್ಥಾನದ ಅತ್ಯಂತ ಪ್ರಭಾವಿ ಮಹಿಳೆ. ತಂದೆಯ ಮರಣಾನಂತರ ಪಿಪಿಪಿಯ ಅಧ್ಯಕ್ಷೆಯಾಗಿದ್ದ ಇವರನ್ನು 1984ರಲ್ಲಿ ಪಾಕ್‌ ಸೇನೆ ದೇಶದಿಂದ ಹೊರಹಾಕುತ್ತದೆ. 1986ರಲ್ಲಿ ವಾಪಸ್‌ ಬರುವ ಇವರು, 1988ರ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗುತ್ತಾರೆ. ಆಗ ದೇಶದಲ್ಲಿ ಆರ್ಥಿಕ ಸೇರಿದಂತೆ ಹಲವಾರು ಸುಧಾರಣೆಗಳಿಗೆ ಕೈಹಾಕಿದರೂ ಸೇನೆ ಬಿಡುವುದಿಲ್ಲ. ಅಧಿಕಾರ ಕಳೆದುಕೊಳ್ಳುತ್ತಾರೆ.

ಮತ್ತೆ 1993ರಲ್ಲಿ ಭುಟ್ಟೋ ಅವರ ಸರಕಾರವೇ ಬರುತ್ತದೆ. 1996ರಲ್ಲಿ ತಮ್ಮ ಪತಿ ಆಸಿಫ್ ಅಲಿ ಜರ್ದಾರಿ ಅವರ ಮೇಲಿನ ಭ್ರಷ್ಟಾಚಾರ ಆರೋಪದಿಂದಾಗಿ ಅಧಿಕಾರ ಕಳೆದುಕೊಳ್ಳುತ್ತಾರೆ. 1997ರ ಚುನಾವಣೆಯಲ್ಲಿ ಸೋಲುತ್ತಾರೆ. 1998ರಲ್ಲಿ ದೇಶ ಬಿಟ್ಟು ಓಡಿಹೋಗುತ್ತಾರೆ. ಇದಾದ ಬಳಿಕ 2007ರಲ್ಲಿ ದೇಶಕ್ಕೆ ವಾಪಸ್‌ ಬಂದು, ಚುನಾವಣ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಚುನಾವಣ ಪ್ರಚಾರದಲ್ಲಿ ಭುಟ್ಟೋ ಸಾಯುತ್ತಾರೆ. ಇಂದಿಗೂ ಈ ಸಾವಿಗೆ ನ್ಯಾಯ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next