Advertisement

ಪಂಚಲಿಂಗೇಶ್ವರನಿಗೆ ಧನುಪೂಜೆಯೇ ಪ್ರಿಯ

10:51 PM Jan 09, 2020 | mahesh |

ಈಶ್ವರಮಂಗಲ: ಧನು ಸಂಕ್ರಮಣದ ಮರು ದಿನದಿಂದ ಮಕರ ಸಂಕ್ರಮಣದ ವರೆಗೆ ಧನುರ್‌ ಮಾಸದಲ್ಲಿ ಆಗಮೋಕ್ತ ಪದ್ಧತಿಯ ದೇಗುಲಗಳಲ್ಲಿ ಧನುಪೂಜೆ ನಡೆಯುತ್ತದೆ. ಧನುಪೂಜೆ ಶಿವನಿಗೆ ಇಷ್ಟವಾಗಿರುವುದರಿಂದ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನೂರಾರು ಭಕ್ತರು ಪಾಲ್ಗೊಳ್ಳುತ್ತಾರೆ.

Advertisement

ಬ್ರಾಹ್ಮಿ ಮುಹೂರ್ತದಲ್ಲಿ ದೇವಾನುದೇವತೆಗಳ ಪ್ರಸನ್ನ ಕಾಲದಲ್ಲಿ ಧನು ಪೂಜೆ ನೆರವೇರುತ್ತದೆ. ಇದನ್ನು ಧ್ಯಾನ ಕಾಲ ಎಂದೂ ಕರೆಯುತ್ತಾರೆ. ಈ ಹೊತ್ತಿನಲ್ಲಿ ದೇವಸ್ಥಾನದಲ್ಲಿ ದೇವರ ನಾಮಸ್ಮರಣೆ, ರುದ್ರಪಠಣ, ಪ್ರದಕ್ಷಿಣೆ ಇತ್ಯಾದಿಗಳನ್ನು ನೆರವೇರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿ ಇದೆ.

ಈಶ್ವರಮಂಗಲದ ಶ್ರೀ ಪಂಚ ಲಿಂಗೇಶ್ವರ ನೆಟ್ಟಣಿಗೆಮುಟ್ನೂರು ಗ್ರಾಮ ದೇವರು ಆಗಿರುವುದರಿಂದ ಗ್ರಾಮದ ಆಸ್ತಿಕ ಬಂಧುಗಳ ಜತೆ ಗಡಿಭಾಗದ ನೂರಾರು ಭಕ್ತರು ಒಟ್ಟಾಗಿ ಶ್ರದ್ಧಾಭಕ್ತಿಯಿಂದ ದೇವಸ್ಥಾನದಲ್ಲಿ ಮುಂಜಾನೆ ಧನುಪೂಜೆಯಲ್ಲಿ ಭಾಗವಹಿಸುತ್ತಾರೆ. ಶಿವನಿಗೆ ಪ್ರಿಯವಾದ ಸೋಮವಾರ ಹಾಗೂ ರಜಾ ದಿನಗಳಲ್ಲಿ ಧನು ಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಗರಿಷ್ಠವಾಗಿರುತ್ತದೆ.

ಪೂಜಾ ವಿಧಾನ
ಮುಂಜಾನೆ ವ್ರತಾಚರಣೆಯೊಂದಿಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. 5 ಗಂಟೆಯಿಂದ ನಿರ್ಮಾಲ್ಯ ವಿಸರ್ಜನೆ, ದೇವರಿಗೆ ಅಭಿಷೇಕ, ಷೋಡಶೋಪಚಾರ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯುತ್ತದೆ. ಪೂಜಾ ಸಮಯದಲ್ಲಿ ವಿಶೇಷವಾಗಿ ರುದ್ರಪಾರಾಯಣ ನಡೆಯುತ್ತದೆ. ಧನು ಪೂಜೆಯ ಅನಂತರ ದೇವರಿಗೆ ಬೆಳಗ್ಗಿನ ಪೂಜೆ ನಡೆಯುತ್ತದೆ. ನೂರಾರು ಭಕ್ತರು ನಿತ್ಯವೂ ಭಾಗವಹಿಸುತ್ತಿದ್ದಾರೆ.

ವಿಶೇಷ ಅಲಂಕಾರ
ಭಕ್ತರು ತುಳಸಿ, ಹಿಂಗಾರ, ಸೇವಂತಿಗೆ, ಮಲ್ಲಿಗೆ ಹೂವುಗಳನ್ನು ತಂದು ಧನು ಪೂಜೆಯಲ್ಲಿ ಭಾಗವಹಿಸುತ್ತಾರೆ. ದೇವರಿಗೆ ವಿಶೇಷವಾಗಿ ಅಲಂಕಾರ ನಡೆಯುತ್ತದೆ. ಹಲವು ವರ್ಷಗಳಿಂದ ದೇಗುಲದಲ್ಲಿ ಧನು ಪೂಜೆ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಪೂಜೆ ಮಾಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಧನುಪೂಜೆ ಪ್ರಾರಂಭದಲ್ಲಿ 78 ಪೂಜೆಗಳು ನಡೆದಿದ್ದು, ಕೊನೆಯ ದಿನ ಧನುಪೂಜೆ ಮಾಡಿಸುವವರ ಸಂಖ್ಯೆ 200 ಮೀರುವ ಸಾಧ್ಯತೆ ಇದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಣಿಲತ್ತಾಯ ಹೇಳಿದ್ದಾರೆ.

Advertisement

ಸೇವಾ ರೂಪದಲ್ಲಿ ಫಲಾಹಾರ ವ್ಯವಸ್ಥೆ
ಧನುಪೂಜೆ ಪ್ರಾರಂಭ ಮತ್ತು ಕೊನೆಯ ದಿನ ದೇವಸ್ಥಾನದ ವತಿಯಿಂದ ಫಲಾಹಾರದ ವ್ಯವಸ್ಥೆ ನಡೆಯುತ್ತಿದೆ. ಅನಂತರ ದಿನನಿತ್ಯ ಭಕ್ತರು ಸೇವಾ ರೂಪದಲ್ಲಿ ಇಡ್ಲಿ ಸಾಂಬಾರು, ಅವಲಕ್ಕಿ, ಹೆಸರು ಕಾಳಿನ ಪಲ್ಯ ಮುಂತಾದ ತಿಂಡಿಗಳನ್ನು ವಿತರಿಸುತ್ತಾರೆ. ಇದು ಧನುಪೂಜೆ ಸಮಯದಲ್ಲಿ ಮಾತ್ರ ನಡೆಯುತ್ತಿರುವುದು ವಿಶೇಷವಾಗಿದೆ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಪ್ರತಿ ವರ್ಷವೂ ನಡೆಯುವುದರಿಂದ ಭಕ್ತರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಸೋಮವಾರ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
-ಎಚ್‌.ಟಿ.ಸುನೀಲ್‌, ಆಡಳಿತಾಧಿಕಾರಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಈಶ್ವರಮಂಗಲ

 ಮಾಧವ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next