Advertisement

ಅಂತಾರಾಜ್ಯ ರಸ್ತೆಯಲ್ಲಿ ಸಂಚಾರಕ್ಕೆ ಆತಂಕ; ಶೀಘ್ರ ದುರಸ್ತಿಗೆ ಆಗ್ರಹ

03:40 PM May 29, 2019 | Team Udayavani |

ಈಶ್ವರಮಂಗಲ: ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಕೇರಳ ರಾಜ್ಯವನ್ನು ಸಂಪರ್ಕಿಸುವ ಈಶ್ವರಮಂಗಲ – ಸುಳ್ಯಪದವು ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ. ಚುನಾವಣೆ ಸಂದರ್ಭ ಭರವಸೆ ನೀಡುವ ನಾಯಕರು ಅನಂತರ ಗಡಿನಾಡ ರಸ್ತೆ ಅಭಿವೃದ್ಧಿಗೆ ಕುಂಟು ನೆಪ ಹೇಳುತ್ತಿದ್ದಾರೆ.

Advertisement

ಈಶ್ವರಮಂಗಲ-ಸುಳ್ಯಪದವು ಜಿ.ಪಂ. ರಸ್ತೆ ಕೇರಳ ರಾಜ್ಯವನ್ನು ಸಂಪರ್ಕಿಸುತ್ತದೆ. ಮೂರು ದಶಕಗಳಿಂದ ಈ ರಸ್ತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿಲ್ಲ. ಕಾಂಗ್ರೆಸ್‌, ಬಿಜೆಪಿ ಶಾಸಕರು ಆಯ್ಕೆಯಾದರೂ ಈ ರಸ್ತೆ ಹೊಂಡಗಳಿಂದ ಮುಕ್ತಿಗೊಂಡಿಲ್ಲ. ವರ್ಷ ವರ್ಷ ಈ ರಸ್ತೆ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಕೊಟ್ಟ ಅನುದಾನ ಕೋಟ್ಯಂತರ ರೂಪಾಯಿ ಆಗಿ ಹೋಗಿದೆ. ರಸ್ತೆ ಮಾತ್ರ ನಾದುರಸ್ತಿಯಲ್ಲಿದೆ.

ರಸ್ತೆ ಅಭಿವೃದ್ಧಿ ಅನಿವಾರ್ಯ
ಕೇರಳ – ಕರ್ನಾಟಕ ಗಡಿಭಾಗದ ಜನರಿಗೆ ಈ ರಸ್ತೆ ಅನಿವಾರ್ಯವಾಗಿದೆ. ಈಶ್ವರಮಂಗಲ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಗಡಿಭಾಗದ ಜನರು ಈಶ್ವರಮಂಗಲ ಪೇಟೆಯನ್ನು ಅವಲಂಬಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಗ್ರಾಮ ಕರಣಿಕರ ಕಚೇರಿ, ಶಿಕ್ಷಣ ಸಂಸ್ಥೆ, ಬ್ಯಾಂಕ್‌, ವಾಣಿಜ್ಯ ಮಳಿಗೆಗಳು, ದೂರವಾಣಿ ವಿನಿಮಯ ಕೇಂದ್ರ ಹೀಗೆ ಗ್ರಾಮಸ್ಥರು ಈ ಪ್ರದೇಶವನ್ನು ಅವಲಂಬಿಸಿದ್ದಾರೆ.

ಮಳೆಗಾಲದಲ್ಲಿ ರಸ್ತೆ ಮೇಲೆ ನೀರು
ಚರಂಡಿಯ ಸಮರ್ಪಕ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ಇದ್ದ ಅಲ್ಪಸ್ವಲ್ಪ ಡಾಮರು ಕೂಡ ಕೊಚ್ಚಿ ಹೋಗುತ್ತಿದೆ. ಬೇಸಗೆಯಲ್ಲಿ ರಸ್ತೆಯು ಧೂಳಿನಿಂದ ಕೂಡಿರುತ್ತದೆ. ಇದರಿಂದ ಸವಾರರಿಗೆ ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಮೆಸ್ಕಾಂ ವಿದ್ಯುತ್‌ ಕಂಬಗಳು, ಬಡಗನ್ನೂರು ಗ್ರಾ.ಪಂ. ಸಂಬಂಧಪಟ್ಟ ಕುಡಿಯುವ ನೀರಿನ ಕೊಳವೆ ಬಾವಿಗಳು, ಅದರ ಶೆಡ್ಡಗಳು ಇವೆ. ಅಲ್ಲಲ್ಲಿ ರಸ್ತೆಯಲ್ಲಿ ಹೊಂಡಗಳು ಇದ್ದು ಮಳೆಯ ನೀರು ತುಂಬಿ ವಾಹನ ಸಂಚಾರ ದುಸ್ತರವಾಗಿದೆ.

ರಸ್ತೆಗೆ ವಾಲಿಕೊಂಡ ಮರಗಳು
ನೆಟ್ಟಣಿಗೆಮುಟ್ನೂರು ಮತ್ತು ಪಡುವನ್ನೂರು ಗ್ರಾಮಗಳಲ್ಲಿ ಹಾದುಹೋಗುವ ಈಶ್ವರಮಂಗಲ ಸುಳ್ಯಪದವು ಜಿ.ಪಂ. ರಸ್ತೆಯು ಕನ್ನಡ್ಕ ರಕ್ಷಿತಾರಣ್ಯದಲ್ಲಿ ಹಾದು ಹೋಗುತ್ತದೆ. ರಕ್ಷಿತಾರಣ್ಯದ ಕೆಲ ಮರಗಳು ರಸ್ತೆಗೆ ವಾಲಿಕೊಂಡಿದ್ದು, ಬೇರುಗಳು ಮಣ್ಣಿನಿಂದ ಬೇರ್ಪಟ್ಟಿವೆ. ಬಲವಾದ ಗಾಳಿ ಬೀಸಿದರೆ ಮರಗಳು ರಸ್ತೆಗೆ ಬೀಳಲಿವೆ. ಇದರಿಂದ ಅನಾಹುತಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವಾಗಿ ಸ್ಪಂದಿಸಬೇಕಾಗಿದೆ.

Advertisement

ಯಾವುದೇ ಪ್ರಯೋಜನವಾಗಿಲ್ಲ
ಈ ರಸ್ತೆ ಬಗ್ಗೆ ಸ್ಥಳೀಯರೊಬ್ಬರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಮನವಿ ಮಾಡಿ ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿ ಎರಡು ವರ್ಷ ಕಳೆದಿದೆ. ಜಿ.ಪಂ. ಎಂಜಿನಿಯರಿಂಗ್‌ ವಿಭಾಗದಿಂದ ವರದಿ ಕಾರ್ಯಾಲಯಕ್ಕೆ ತಲುಪಿದರೂ ಪ್ರಯೋಜನವಾಗಿಲ್ಲ.

ಪೂರ್ಣಪ್ರಮಾಣದ ಅನುದಾನ ಬಂದಿಲ್ಲ
ಮಳೆಹಾನಿಯ ಅನುದಾನ ಇದೆ. ನೀರಿನ ಸಮಸ್ಯೆಯಿಂದಾಗಿ ರಸ್ತೆ ಕಾಮಗಾರಿ ನಡೆದಿಲ್ಲ. ಆಯ್ದ ಸ್ಥಳವನ್ನು ಗುರುತಿಸಿ ಕಾಮಗಾರಿ ನಡೆಸುತ್ತೇವೆ. ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಗೆ ಯಾವುದೇ ಅನುದಾನ ಬಂದಿಲ್ಲ.
ಗೋವರ್ಧನ ಜಿ.ಪಂ. ಎಂಜಿನಿಯರ್‌

ಶಾಸಕರೊಂದಿಗೆ ಚರ್ಚೆ
ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಮುಂದಿನ ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಯನ್ನು ನಡೆಸು ಕುರಿತು ಅವರು ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ದುರಸ್ತಿಗೊಳಿಸುವಂತೆ ವಿನಂತಿ ಮಾಡಲಾಗಿದೆ. ಪೂರಕವಾಗಿ ಸ್ಪಂದಿಸಿದ್ದಾರೆ.
– ಉದಯ ಕುಮಾರ ಕನ್ನಡ್ಕ
ರಿಕ್ಷಾ ಚಾಲಕ, ಸುಳ್ಯಪದವು

Advertisement

Udayavani is now on Telegram. Click here to join our channel and stay updated with the latest news.

Next