Advertisement

ಸರಕಾರಿ ಶಾಲೆ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಿದ ಪೊಲೀಸ್‌

11:19 AM Aug 02, 2019 | Team Udayavani |

ವಿಶೇಷ ವರದಿ
ಈಶ್ವರಮಂಗಲ:
ಶಾಲೆ, ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳುಗಳೇ ಕಳೆದು ಹೋಗಿದೆ. ಹಲವು ಸಂಘ ಸಂಸ್ಥೆಗಳು ಉಚಿತವಾಗಿ ಶಾಲಾ ಮಕ್ಕಳಿಗೆ ಪ್ರಾರಂಭೋತ್ಸವ ಸಂದರ್ಭ ಪುಸ್ತಕ ವಿತರಿಸಿದ್ದಾರೆ. ಆದರೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್ ಸರಕಾರಿ ಶಾಲೆಯ ಮಕ್ಕಳಿಗೆ ಶಬ್ಧ ಕೋಶದ ಪುಸ್ತಕವನ್ನು ವಿತರಿಸಿ ತನ್ನಲ್ಲಿರುವ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.

Advertisement

ಕಾನ್‌ಸ್ಟೆಬಲ್ ಕಡಬ ತಾಲೂಕಿನ ಕುಂತೂರು ನಿವಾಸಿ ಗಿರೀಶ್‌ ಅವರು ವಿದ್ಯಾಭ್ಯಾಸ ಪಡೆಯುತ್ತಿರುವಾಗ ಪತ್ರಿಕೆಗಳ ಮೂಲಕ ಪ್ರಾಥಮಿಕ ಶಾಲೆ ಸ್ಥಿತಿ-ಗತಿಗಳ ಬಗ್ಗೆ ತಿಳಿದುಕೊಂಡಿದ್ದರು. ಉದ್ಯೋಗ ಸಿಕ್ಕಿದ ತತ್‌ಕ್ಷಣ ಹಿಂದಿನ ಶಾಲಾ ದಿನವನ್ನು ನೆನೆದು ಸರಕಾರಿ ಶಾಲೆ ಮಕ್ಕಳಿಗೆ ಸಹಾಯ ಹಸ್ತ ನೀಡುವ ಬಗ್ಗೆ ಮನಸ್ಸಿನಲ್ಲಿ ಧೃಢ ಸಂಕಲ್ಪ ಮಾಡಿದ್ದರು. 2018ರಲ್ಲಿ ಪೊಲೀಸ್‌ ಕರ್ತವ್ಯ ಸೇರಿದ ಅವರು ಗ್ರಾಮಾಂತರ ಪೊಲೀಸ್‌ ಠಾಣೆಯ ಪೇದೆಯಾಗಿ ನಿಡ್ಪಳ್ಳಿ ಗ್ರಾಮದ ಬೀಟ್ ಪೊಲೀಸ್‌ ಆದರು. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪುಸ್ತಕ ವಿತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗಡಿಭಾಗದಲ್ಲಿರುವ ನಿಡ್ಪಳ್ಳಿ ಗ್ರಾಮದ ಮುಂಡೂರು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 44 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಚಿಕ್ಕ ಮಕ್ಕಳಿಗೆ ಪುಸ್ತಕದೊಂದಿಗೆ ಪೆನ್ಸಿಲ್ ಅನ್ನು ನೀಡಿದ ಅವರು ಉಳಿದ ಮಕ್ಕಳಿಗೆ ಕನ್ನಡ, ಇಂಗ್ಲಿಷ್‌, ಹಿಂದಿ ಶಬ್ಧಕೋಶವನ್ನು ವಿತರಿಸಿದ್ದಾರೆ.

ಮಕ್ಕಳಿಗೆ ಭಯ ದೂರ
ಕನಿಷ್ಠ ಒಬ್ಬ ವಿದ್ಯಾರ್ಥಿಗೆ ಅಂದಾಜು 300 ರೂ. ಅನ್ನು ವಿನಿಯೋಗಿಸಿದ್ದಾರೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ ಹೆಚ್ಚುವುದಲ್ಲದೇ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಈ ಕೊಡುಗೆ ಬಹಳ ಮಹತ್ವ ಪಡೆದಿದೆ.

Advertisement

ಇಂತಹ ಕೆಲಸಗಳಿಂದ ಪೊಲೀಸರು ಪ್ರಾಥಮಿಕ ಶಾಲೆ ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಿ ಪೊಲೀಸರ ಬಗ್ಗೆ ಇರುವ ಭಯ ದೂರವಾಗಿ ಜನಸ್ನೇಹಿಯಾಗಲು ಸಾಧ್ಯವಾಗುತ್ತದೆ ಎಂದು ಮಕ್ಕಳ ಹೆತ್ತವರು ತಿಳಿಸಿದ್ದಾರೆ.

ಅಳಿಲ ಸೇವೆ
ಇಂದಿನ ಮಕ್ಕಳು ದೇಶದ ಮುಂದಿನ ಭಾವೀ ಪ್ರಜೆಗಳು. ಅವರಿಗೆ ಶಿಕ್ಷಣದಲ್ಲಿ ಯಾವುದೇ ಕೊರತೆ ಬಾರದಿರಲಿ ಎನ್ನುವುದು ನನ್ನ ಉದ್ದೇಶ. ಈ ಪುಸ್ತಕಗಳು ಅವರ ಕಲಿಕೆಗೆ ಉಪಯುಕ್ತವಾಗುತ್ತದೆ ಎನ್ನುವ ನಂಬಿಕೆ ಇದೆ. ಸರಕಾರಿ ಶಾಲೆಯ ಮಕ್ಕಳು ಉತ್ತಮ ಶಿಕ್ಷಣ ಮಾಡಿ ಉನ್ನತ ಸ್ಥಾನಕ್ಕೇರಿ ಉತ್ತಮ ನಾಗರಿಕರಾಗಬೇಕು ಎನ್ನುವ ದೃಷ್ಟಿಯಿಂದ ನನ್ನದೊಂದು ಅಳಿಲ ಸೇವೆ.
ಗಿರೀಶ್‌ ಕೆ.
ಬೀಟ್ ಪೊಲೀಸ್‌, ನಿಡ್ಪಳ್ಳಿ ಗ್ರಾಮ

ಮಾದರಿ ಕಾರ್ಯಇಶಾಲೆಗೆ ಹಿರಿಯ ವಿದ್ಯಾರ್ಥಿಗಳು, ದಾನಿಗಳು ನೆರವು ನೀಡುತ್ತಿದ್ದಾರೆ. ಶಾಲೆಗೆ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚು ಬರುತ್ತಿದ್ದಾರೆ. ಬಡ ಮಕ್ಕಳಿಗೆ ಶಬ್ಧ ಕೋಶದ ಪುಸ್ತಕ ತುಂಬಾ ಸಹಕಾರಿಯಾಗಲಿದೆ. ಪೊಲೀಸ್‌ ಗಿರೀಶ್‌ ಅವರ ಕಾರ್ಯ ಶ್ಲಾಘನೀಯ ಹಾಗೂ ಸಮಾಜಕ್ಕೆ ಮಾದರಿ ಕಾರ್ಯವಾಗಿದೆ.
ಆಶಾ, ಮುಖ್ಯ ಶಿಕ್ಷಕಿ,
 ಮುಂಡೂರು ಸರಕಾರಿ ಹಿ.ಪ್ರಾ. ಶಾಲೆ

 

Advertisement

Udayavani is now on Telegram. Click here to join our channel and stay updated with the latest news.

Next