Advertisement

ಈಶ್ವರಯ್ಯ 78ರ ಸಂಗೀತ ಅಂತ್ಯಾಕ್ಷರಿ

01:28 PM Sep 08, 2017 | Team Udayavani |

ಉಡುಪಿ -ಪರ್ಕಳದ ಸರಿಗಮ ಭಾರತಿ ಸಂಸ್ಥೆಯ ಸಭಾಂಗಣದಲ್ಲಿ ಆಗಸ್ಟ್‌ 20ರಂದು ರಾಗಧನ ಸಂಸ್ಥೆಯು ತನ್ನ ಅಧ್ಯಕ್ಷರೂ ಪ್ರಖ್ಯಾತ ಕಲಾ ವಿಮರ್ಶಕರೂ ಆದ ಅನಂತಪುರ ಈಶ್ವರಯ್ಯನವರ 78ನೇ ಜನ್ಮದಿನದ ಅಭಿನಂದನೆಯನ್ನು ಸರಳವಾದ, ವಿನೂತನ ಆಪ್ತ ಶೈಲಿಯಲ್ಲಿ ಹಮ್ಮಿಕೊಂಡು ಸಂಭ್ರಮಿಸಿತು.

Advertisement

ಆಡಂಬರ ಇಲ್ಲದೆ, ಬರೇ ಅರ್ಧ ಗಂಟೆಯ ಚೊಕ್ಕದಾದ ಹೃದಯಸ್ಪರ್ಶಿ ಅಭಿನಂದನೆ ನಡೆದದ್ದು ವಿಶೇಷವಾಗಿತ್ತು. ಸಮಾರಂಭವು ಈಶ್ವರಯ್ಯ ಸಹಿತ ಹಲವು ಹಿರಿಯ ಕಲಾವಿದರಿಂದ ದ್ವೀಪಪ್ರಜ್ವಲನದ ಮೂಲಕ ಆರಂಭವಾದರೆ ಇದಕ್ಕೆ ಎಂಐಟಿಯ ಸಂಶೋಧನಾ ವಿದ್ಯಾರ್ಥಿ ವಿಷ್ಣು ಅವರ ಶ್ಲೋಕ ಮಧುರವಾದ ಹಿನ್ನೆಲೆಯಾಯಿತು. ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿಯವರ ಪ್ರಾರ್ಥನೆಯ ಬಳಿಕ, ವಿ| ಪ್ರತಿಭಾ ಸಾಮಗರಿಂದ ಈಶ್ವರಯ್ಯನವರ ಬಗ್ಗೆ ಹಿತವಾದ ಅಭಿನಂದನೆ ನೆರವೇರಿತು. ರಾಗಧನ ಬಳಗದ ಹಿರಿಯರು ಈಶ್ವರಯ್ಯ ಅವರನ್ನು ಅಭಿನಂದಿಸಿದರು. ಅಭಿನಂದನೆಗೆ ಹೃದಯ ತುಂಬಿ ಪ್ರತಿಸ್ಪಂದಿಸಿದ ಈಶ್ವರಯ್ಯನವರು, ತಾನು “ಪುನಃ ಜನ್ಮವಿದ್ದರೆ ಉಡುಪಿಯಲ್ಲೇ ನಿಮ್ಮೆಲ್ಲರ ಒಡನಾಡಿಯಾಗಿ ಹುಟ್ಟುವೆ’ ಎಂಬ ಬಯಕೆಯನ್ನು, ಕವಿ ಪಂಪನ ನುಡಿಯಂತೆ ಉಚ್ಚರಿಸಿ ಭಾವುಕರಾದರು. ರಾಜ್ಯ ಸರಕಾರದ ಸಂಗೀತ, ನೃತ್ಯ ಅಕಾಡೆಮಿಯ “ಕಲಾ ವಿಮರ್ಶೆ’ ವಿಭಾಗಕ್ಕೆ ಆಯ್ಕೆಯಾದ “ವಿಮರ್ಶೆಯ ಹರಿತ’ದ ಲೇಖಕ, ಕಲಾವಿದ, ಗುರು ಅರವಿಂದ ಹೆಬ್ಟಾರರನ್ನು ಈಶ್ವರಯ್ಯನವರಿಂದಲೇ ಗೌರವಿಸಿದುದು ಔಚಿತ್ಯಪೂರ್ಣವಾಗಿತ್ತು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ, ರಂಜನೆಯ ಕಾರ್ಯಕ್ರಮವಾಗಿ ಈಶ್ವರಯ್ಯನವರ ಸಲಹೆಯಂತೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಂತ್ಯಾಕ್ಷರಿ ಸ್ಪರ್ಧೆಯು ಪ್ರಸ್ತುತಗೊಂಡಿತು. ಇದು ಶ್ರಾವಣ ಸಂಜೆಯಂದು ಹಲವು ಕಾಲ ನೆನಪಿನಲ್ಲಿಡಬಹುದಾದ ಸಂಗೀತ ಸಲ್ಲಾಪ ವಾಗಿತ್ತು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲೇ ಪ್ರಾಯಃ ಪ್ರಥಮ ಪ್ರಯತ್ನ ಎಂಬುದು ರಸಿಕರ ಅಂಬೋಣವಾಗಿತ್ತು. ಪುತ್ತೂರು, ಕಾರ್ಕಳ, ಮಂಗಳೂರು ಮತ್ತು ಉಡುಪಿಯ ಎಲ್ಲ ಕಡೆಗಳಿಂದ ಸಂಗೀತಾಸಕ್ತರು ಈ ಸ್ಪರ್ಧೆಯನ್ನು ವೀಕ್ಷಿಸಲು ಬಂದು ಸೇರಿದ್ದು ಇದಕ್ಕೆ ಸಾಕ್ಷಿ.

ಕರ್ನಾಟಕ ಶಾಸ್ತ್ರೀಯ ಸಂಗೀತದ ಅನುಭವಿಗಳು, ಸ್ವತಃ ಕಲಾವಿದರು, ಗುರುಗಳು, ವಿದ್ಯಾರ್ಥಿಗಳಿಂದ ಹೆ‌ಣೆಯಲ್ಪಟ್ಟ ನಾಲ್ಕು ತಂಡಗಳ ನಡುವೆ ಈ ಸ್ಪರ್ಧೆ ನಡೆ ಯಿತು. ನಾಲ್ಕು ತಂಡಗಳು ರಾಗಾಧಾರಿತ ಹೆಸರಿನಿಂದಲೂ ನಾಲ್ವರು ಸದಸ್ಯರಿಂದಲೂ ಸಂಯೋಜಿಸಲ್ಪಟ್ಟಿದ್ದವು. ಸಮನ್ವಯಕಾರರಾಗಿ ಈಶ್ವರಯ್ಯನವರು, ಅಂಕ ದಾಖಲೆಯಲ್ಲಿ ಪ್ರೊ| ಸದಾಶಿವ್‌ ರಾಯರು, ಹಾಡು ದಾಖಲೆಯಲ್ಲಿ ಪದ್ಮನಾಭ ಮಧ್ಯಸ್ಥರು ಸಹಕರಿಸಿದರು. ಶಾಸ್ತ್ರೀಯ ಸಂಗೀತದಲ್ಲಿನ ಎಲ್ಲ ರಚನೆಗಳನ್ನು ಪಲ್ಲವಿಯ ಸಾಲು ಪೂರ್ತಿಯಾಗಿ, ಕೊಟ್ಟ ಸಮಯಾವಕಾಶದಲ್ಲಿ ಎಲ್ಲ ಸದಸ್ಯರು ದನಿಗೂಡಿಸಿ ಹಾಡಬೇಕೆಂಬುದು ಈ ಸ್ಪರ್ಧೆಯ ನಿಯಮ. ಒಟ್ಟು ಹತ್ತು ಸುತ್ತುಗಳಲ್ಲಿ ನಡೆದ ಈ ಸ್ಪರ್ಧೆಯು ಬಹಳ ಲವಲವಿಕೆಯಿಂದ, ರಂಜನೀಯವಾಗಿ, ಕಲಾವಿದರ ಸೌಹಾರ್ದ ಸಮರವಾಗಿ ಸಭೆಯನ್ನು ಸಂತೃಪ್ತಿಗೊಳಿಸಿತು. 10 ಸುತ್ತುಗಳಲ್ಲಿ ಒಟ್ಟು 148 ರಚನೆಗಳು (ಪಿಳ್ಳಾರಿಗೀತೆ, ಸ್ವರಜತಿ, ವರ್ಣ, ಕೃತಿ -ಮಧ್ಯಮ, ವಿಳಂಬ, ದೇವರ ನಾಮ, ವಚನ, ತಿಲ್ಲಾನ, ಜಾವಳಿ, ಪದಂ) ವಿದ್ವತ್‌ಪೂರ್ಣವಾಗಿ ಮೂಡಿಬಂದಿದ್ದವು. ಹಲವು ಹಳೇ ಕಾಲದ, ಅಪೂರ್ವ ಕೃತಿಗಳ ನೆನಪು ಮರುಕಳಿಸಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಸಂಗೀತ ಸೌಹಾರ್ದ ಸಮರದಲ್ಲಿ ಎಲ್ಲ ತಂಡಗಳು ಒಂದೇ ಮಟ್ಟದಲ್ಲಿವೆ ಎಂಬುದು ಪ್ರತೀ ತಂಡಕ್ಕೂ ದೊರಕಿದ ಸಮಾನ ಅಂಕಗಳಿಂದ ಶ್ರುತಪಟ್ಟು ಅಚ್ಚರಿ ಮೂಡಿಸಿತು. ಸ್ಪರ್ಧೆಗೆ ಮಂಗಲವಾಗಿ ಸಾಮೂಹಿಕವಾಗಿ “ಭಾಗ್ಯದ ಲಕ್ಷ್ಮಿ’ ಹಾಡಲಾಯಿತು. 

ಯಾವುದೇ ಶ್ರುತಿ, ಹಿಮ್ಮೇಳದ ನೆರವಿಲ್ಲದ ಈ ಸಂಗೀತ ಸಮರಕ್ಕೆ ತಂಡದ ಸದಸ್ಯರಾದ ರಾಘವೇಂದ್ರ ಆಚಾರ್ಯರು ತಮ್ಮ ಬಾಯಿಯಿಂದ ಹೊರಹೊಮ್ಮಿದ ಅವನದ್ಧ ವಾದ್ಯಗಳ ತತ್ವಾರಗಳ ಮಿಡಿತಗಳಿಂದ ಇನ್ನಷ್ಟು ಮೆರುಗನ್ನು ನೀಡಿದರು! ವಿಭಿನ್ನ ಶಾರೀರ, ಶ್ರುತಿಯಿರುವ ತಂಡದ ಸದಸ್ಯರ ಧ್ವನಿಯನ್ನು ಇಂಪಾಗಿ ಶ್ರವಣಸಾಧ್ಯವೆನಿಸುವಂತೆ ಮಾಡಿದ್ದು ಪರ್ಕಳ ಶ್ರೀಪತಿ ತಂತ್ರಿಗಳ ಧ್ವನಿವರ್ಧಕದ ಕೈಚಳಕ ಚಮತ್ಕಾರ. ಸಭಾಂಗಣ ಪ್ರವೇಶಿಸುವಾಗಲೇ ಕಲಾತ್ಮಕವಾಗಿ ಸಂದರ್ಭಕ್ಕನುಗುಣವಾಗಿ ಚಿತ್ರಿಸಿದ “ರಂಗೋಲಿ’ಯ ಕತೃì ಸುರೇಖಾ ಅವರು ಅಭಿನಂದನಾರ್ಹರು. 

Advertisement

ಇಂತಹ ಒಂದು ಕುತೂಹಲಕಾರಿ, ನವೀನ ಕಾರ್ಯಕ್ರಮವನ್ನು ಅಷ್ಟೇ ಉತ್ಸುಕತೆ, ಹುಮ್ಮನಸ್ಸಿನಿಂದ ಬಂದು ಆಲಿಸಿದ ರಸಿಕ ಬಂಧುಗಳು ವಿಶೇಷವಾಗಿ ಶ್ಲಾಘನೀಯರು. ಇಂತಹ ಹೊಸ ಕಾರ್ಯಕ್ರಮಕ್ಕೆ ಶ್ರೋತೃಗಳು ಸ್ಪಂದಿಸಿದ ವಿಧದಿಂದ ಇಂತಹ ಇನ್ನಷ್ಟು ಮೌಲ್ಯಯುತವಾದ, ಶಾಸ್ತ್ರೀಯ ಸಂಗೀತದ ಸಂಪತ್ತನ್ನು ಮೊಗೆಯುವ, ಪಸರಿಸುವ, ನವ್ಯವೂ ಅಪೂರ್ವವೂ ಆದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉತ್ಸಾಹ, ಧೈರ್ಯ ಸಂಸ್ಥೆಯ ಪದಾಧಿಕಾರಿಗಳಿಗೆ ಹುಟ್ಟಿದ್ದು ಸತ್ಯ. 

ಪ್ರತಿಭಾ

Advertisement

Udayavani is now on Telegram. Click here to join our channel and stay updated with the latest news.

Next