ಭಾಲ್ಕಿ: ಲಿಂಗಾಯತ ಧರ್ಮಿಯರಿಗೆ ಇಷ್ಟಲಿಂಗ ಏಕೈಕ ದೈವವಾಗಿದೆ ಎಂದು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ರವಿವಾರ ಜರುಗಿದ ಸಾಮೂಹಿಕ ಇಷ್ಟಲಿಂದ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗಾಯತರಿಗೆ ಇಷ್ಟಲಿಂಗ ಪೂಜೆಯೇ ಪ್ರಮುಖ ಪೂಜೆಯಾಗಿದೆ ಹೊರತು ಬೇರಾವುದಕ್ಕೂ ಪೂಜಿಸಿದಲ್ಲಿ ವ್ಯರ್ಥ. ಹೀಗಾಗಿ ಲಿಂಗಾಯತರು ಲಿಂಗವನ್ನು ಸದ್ಗುರುಗಳ ಲಿಂಗಹಸ್ತದಿಂದ ದೀಕ್ಷಾ ಮೂಲಕ ಪಡೆದು, ಏಕಲಿಂಗ ನಿಷ್ಠರಾಗಿ ಹೊಸಜನ್ಮ ಪಡೆಯಬೇಕು ಎಂದರು. ಅಕ್ಕ ಮಹಾದೇವಿ ಹೇಳಿದಂತೆ ನರಜನ್ಮವ ತೊಡೆದು ಹರಜನ್ಮ ಮಾಡಿದ ಗುರುವೆ ಎಂಬಂತೆ ಸದ್ಗುರುವಿನಿಂದ ದೀಕ್ಷಾ ಮೂಲಕ ಇಷ್ಟಲಿಂಗ ಪಡೆದವನ ನರಜನ್ಮ ನಷ್ಟವಾಗಿ ಹರಜನ್ಮವಾಗುತ್ತದೆ ಎಂದರು. ಈ ತತ್ವದಂತೆ ಪ್ರತಿವರ್ಷ
ವಿಶೇಷ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಸಾಮೂಹಿಕ ಲಿಂಗದೀಕ್ಷೆ ಏರ್ಪಡಿಸಲಾಗುವುದು
ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ದೀಕ್ಷೆ ಪಡೆದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು. ಗುರುಪ್ರಸಾದ ಶಾಲೆಯ ಶಿಕ್ಷಕ- ಶಿಕ್ಷಕಿಯರು ದೀಕ್ಷಾ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು. ದೀಕ್ಷಾ ನಂತರ ಮಹಾಪ್ರಸಾದದ ವ್ಯವಸ್ಥೆ ಜರುಗಿತು.