ಮುಂಬೈ: ದಕ್ಷಿಣ ಆಫ್ರಿಕಾದ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹೊರಗುಳಿದಿದ್ದಾರೆ. ತಮ್ಮನ್ನು ತಂಡದಿಂದ ಹಿಂತೆಗೆದುಕೊಳ್ಳುವಂತೆ ಭಾರತೀಯ ಕ್ರಿಕೆಟ್ ಮಂಡಳಿಯನ್ನು (BCCI) ವಿನಂತಿಸಿದ ನಂತರ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಯಿತು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದಲ್ಲಿ ಕಿಶನ್ ಸ್ಥಾನಕ್ಕೆ ಕೆಎಸ್ ಭರತ್ ಅವರನ್ನು ನೇಮಿಸಲಾಗಿದೆ.
“ವೈಯಕ್ತಿಕ ಕಾರಣಗಳಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಿಂದ ಬಿಡುಗಡೆ ಮಾಡುವಂತೆ ಇಶಾನ್ ಕಿಶನ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ನಂತರ ವಿಕೆಟ್ ಕೀಪರ್ ಅನ್ನು ಟೆಸ್ಟ್ ತಂಡದಿಂದ ಹಿಂತೆಗೆದುಕೊಳ್ಳಲಾಗಿದೆ” ಎಂದು ಬಿಸಿಸಿಐ ಡಿಸೆಂಬರ್ 17 ರ ಭಾನುವಾರದಂದು ಪ್ರಕಟಣೆ ಹೇಳಿದೆ.
ಇಶಾನ್ ಕಿಶನ್ ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಸರಣಿಗಾಗಿ ಟಿ20 ತಂಡದ ಭಾಗವಾಗಿದ್ದರು. ಆದರೆ, ಜಿತೇಶ್ ಶರ್ಮಾ ಅವರು ವಿಕೆಟ್‌ಕೀಪರ್-ಬ್ಯಾಟರ್ ಆಗಿ ಅವಕಾಶ ಪಡೆದ ಕಾರಣ ಇಶಾನ್ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.
ಇಶಾನ್ ಕಿಶನ್ ಅವರ ವಿನಂತಿಯ ಹಿಂದಿನ ನಿರ್ದಿಷ್ಟ ಕಾರಣವನ್ನು ಬಿಸಿಸಿಐ ಉಲ್ಲೇಖಿಸಿಲ್ಲ, ಶನಿವಾರದಂದು, ತಂದೆಯ ಅನಾರೋಗ್ಯದ ಕಾರಣದಿಂದ ದೀಪಕ್ ಚಾಹರ್ ಕೂಡಾ ಏಕದಿನ ಸರಣಿಯಿಂದ ಹಿಂದುಳಿದಿದ್ದರು. ವೇಗಿ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಕೀಪಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ.