Advertisement

ಇಶಾನ್‌ ಮತ್ತು ಬನ್ನಿ

09:42 PM Oct 11, 2019 | mahesh |

ಅಲ್ಲಿ ಪುಟ್ಟ ನಾಯಿ ಮರಿಯೊಂದು ಮಲಗಿತ್ತು. ಹಸಿವು, ಬಿಸಿಲಿನಿಂದ ಬಳಲಿತ್ತು. ಮಕ್ಕಳೆಲ್ಲ ಅದಕ್ಕೆ
ಕಲ್ಲೆಸೆದು ಕೇಕೆ ಹಾಕಿ ನಗುತ್ತಿದ್ದರು. ನಾಯಿ ಮರಿ ಸ್ಥಿತಿ ಕಂಡು ಇಶಾನ್‌ಗೆ ಪಾಪ ಎನಿಸಿತು. “ಏಯ್‌ ಎಲ್ಲರೂದೂರ ಹೋಗಿ. ಪಾಪದ ಪ್ರಾಣಿ ಅದು. ಅದಕ್ಕೆ ಎಂತಕ್ಕೆ ಉಪದ್ರವ ಕೊಡುತ್ತೀರಿ?’ ಎಂದು ಧ್ವನಿ
ಏರಿಸಿ ಕೇಳಿದ. ಮಕ್ಕಳೆಲ್ಲ ಚದುರಿದರು.

Advertisement

ಶಾಲೆಯಲ್ಲಿ ಮಧ್ಯಾಹ್ನ ಊಟದ ಬೆಲ್‌ ಬಾರಿಸಿತು. ಮಕ್ಕಳೆಲ್ಲ ಬುತ್ತಿ ಬಿಚ್ಚುವ ತಯಾರಿಯಲ್ಲಿದ್ದರು. ಇಶಾನ್‌ ಬುತ್ತಿ ಮತ್ತು ನೀರಿನ ಬಾಟಲ್‌ ಹಿಡಿದುಕೊಂಡು ತರಗತಿಯಿಂದ ಹೊರ ಬಂದ. ಶಾಲೆ ಎದುರಿನ ಮೈದಾನದ ಬದಿಯಲ್ಲಿ ಉದ್ಯಾನವಿದೆ. ಅಲ್ಲಿ ಮರದ ಬುಡದಲ್ಲಿ ಕುಳಿತು ಊಟ ಮಾಡುವುದು ಇಶಾನ್‌ ಮತ್ತು ಗೆಳೆಯರಿಗೆ ರೂಢಿ.

ಮೈದಾನದ ಮೂಲೆಯಲ್ಲಿ ಒಂದಷ್ಟು ಮಕ್ಕಳು ಗುಂಪು ಸೇರಿರುವುದು ಕಾಣಿಸಿತು. ಕೆಲವರು ಕಲ್ಲು ಎಸೆಯುವುದು ಕಾಣಿಸಿತು. ಇಶಾನ್‌ ಕುತೂಹಲದಿಂದ ಅತ್ತ ನಡೆದ. ಅಲ್ಲಿ ಪುಟ್ಟ ನಾಯಿ ಮರಿಯೊಂದು ಮಲಗಿತ್ತು. ಹಸಿವು, ಬಿಸಿಲಿನಿಂದ ಬಳಲಿತ್ತು. ಮಕ್ಕಳೆಲ್ಲ ಅದಕ್ಕೆ ಕಲ್ಲೆಸೆದು ಕೇಕೆ ಹಾಕಿ ನಗುತ್ತಿದ್ದರು.

ನಾಯಿ ಮರಿ ಸ್ಥಿತಿ ಕಂಡು ಇಶಾನ್‌ಗೆ ಪಾಪ ಎನಿಸಿತು. “ಏಯ್‌ ಎಲ್ಲರೂ ದೂರ ಹೋಗಿ. ಪಾಪದ ಪ್ರಾಣಿ ಅದು. ಅದಕ್ಕೆ ಎಂತಕ್ಕೆ ಉಪದ್ರವ ಕೊಡುತ್ತೀರಿ?’ ಎಂದು ಧ್ವನಿ ಏರಿಸಿ ಕೇಳಿದ. ಮಕ್ಕಳೆಲ್ಲ ಚದುರಿದರು.

ನಾಯಿ ಮರಿ ಕೃತಜ್ಞತೆಯಿಂದ ಇಶಾನ್‌ನತ್ತ ನೋಡಿತು. ಬಿಳಿ ಬಣ್ಣದ ಮುದ್ದು ನಾಯಿ ಮರಿ ಅದು. ಇಶಾನ್‌ ಅದರ ಬಳಿ ಕುಳಿತು ತಲೆ ನೇವರಿಸಿದ. ಅದರ ಮುಖ ನೋಡಿಯೇ ಬಳಲಿದೆ ಎನಿಸಿತು. ಬಾಟಲ್‌ನಿಂದ ಅಂಗೈಗೆ ನೀರು ಸುರಿದು ಅದರ ಮುಂದಿಟ್ಟ. ಲಗುಬಗನೆ ಕುಡಿಯಿತು. ಹೀಗೆ ಮೂರು ಸಲ ನೀರು ಕುಡಿಸಿದ.

Advertisement

ಮತ್ತೇನೋ ನಿರ್ಧರಿಸಿದವನಂತೆ ಬುತ್ತಿ ಮುಚ್ಚಳ ತೆರೆದು ಅದರಲ್ಲಿದ್ದ ತಿಂಡಿಯನ್ನೆಲ್ಲ ನಾಯಿ ಮರಿ ಮುಂದಿರಿಸಿದ. ತುಂಬ ಹಸಿದಿದ್ದ ಅದು ತಿಂಡಿಯನ್ನೆಲ್ಲ ತಿಂದಿತು. ಅನಂತರ ಇಶಾನ್‌ನ ಕಾಲು ತಬ್ಬಿ ಧನ್ಯವಾದ ಅರ್ಪಿಸಿತು.

ಇದನ್ನೆಲ್ಲ ನೋಡುತ್ತಿದ್ದ ಇಶಾನ್‌ನ ಗೆಳೆಯರು ಅವನನ್ನು ಬಳಿಗೆ ಕರೆದು ಅವರಲ್ಲಿದ್ದ ತಿಂಡಿಯನ್ನು ಅವನಿಗೆ ನೀಡಿದರು.

ಅಂದಿನಿಂದ ನಾಯಿಮರಿ ಇಶಾನ್‌ನ ಉತ್ತಮ ಸ್ನೇಹಿತನಾಯಿತು. ಅದಕ್ಕೆ ಅವನು ಬನ್ನಿ ಎಂದು ಹೆಸರಿಟ್ಟ. ಬೆಳಗ್ಗೆ ಶಾಲೆ ಗೇಟಿನ ಬಳಿ ಕಾಯುತ್ತಿದ್ದ ಬನ್ನಿ ಇಶಾನ್‌ ಬರುತ್ತಿದ್ದಂತೆ ಓಡಿ ಬಂದು ಅವನ ಕಾಲು ತಬ್ಬುತ್ತಿದ್ದಂತೆ ಅದರ ದಿನಚರಿ ಆರಂಭವಾಗುತ್ತಿತ್ತು. ಅವನ ತರಗತಿಯ ಹೊರಗೆ ಮಲಗಿರುತ್ತಿದ್ದ ಬನ್ನಿ ಇಶಾನ್‌ ಆಟ ಆಡುವಾಗ ಅವನ ಜತೆ ಇರುತ್ತಿತ್ತು. ಇಶಾನ್‌ ಅದಕ್ಕೆಂದೇ ತಿಂಡಿ ತರುತ್ತಿದ್ದ. ಇಶಾನ್‌ ಆಡುವಾಗ ಬಾಲ್‌ ಹೆಕ್ಕಿ ತರುವುದು, ಅವನ ಗೆಳೆಯರ ಜತೆ ತರಲೆ ಮಾಡಿಕೊಂಡಿರುತ್ತಿದ್ದ ಬನ್ನಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಂಜೆ ತರಗತಿ ಬಿಟ್ಟ ಅನಂತರ ಇಶಾನ್‌ ಬನ್ನಿ ಜತೆ ಸ್ವಲ್ಪ ಹೊತ್ತು ಆಡಿ ಮನೆಗೆ ತೆರಳುತ್ತಿದ್ದ. ಗೇಟಿನ ಬಳಿ ಅವನನ್ನು ಬೀಳ್ಕೊಟ್ಟ ಅನಂತರ ಬನ್ನಿ ಮರದ ಕೆಳಗೆ ಮಲಗುತ್ತಿತ್ತು. ಅದರಿಂದ ಯಾವುದೇ ರೀತಿಯ ತೊಂದರೆ ಇಲ್ಲದ ಕಾರಣ ಶಾಲೆಯವರೂ ಬನ್ನಿಯನ್ನು ಹೊರಗಟ್ಟಿರಲಿಲ್ಲ.

ಅದೊಂದು ದಿನ ಕೊನೆಯ ತರಗತಿ ಪಿಟಿ ಆಗಿತ್ತು. ಆಡಿ ತರಗತಿ ಒಳಗೆ ಬಂದ ಇಶಾನ್‌ಗೆ ತಲೆ ಸುತ್ತು ಬರತೊಡಗಿತು. ಆಗಲೇ ಬೆಲ್‌ ಆಗಿದ್ದರಿಂದ ಮಕ್ಕಳೆಲ್ಲ ಮನೆಗೆ ಓಡಿದರು. ನಡೆಯಲು ಸಾಧ್ಯವಿಲ್ಲ ಎನಿಸಿ ವಿಶ್ರಾಂತಿ ಪಡೆದರೆ ಸರಿ ಆಗಹುದು ಎನಿಸಿ ಇಶಾನ್‌ ಡೆಸ್ಕ್ಗೆ ತಲೆ ಆನಿಸಿ ಮಲಗಿದ. ಸ್ವಲ್ಪ ಹೊತ್ತು ಕಳೆದು ಎದ್ದು ನಿಂತ. ಎರಡು ಹೆಜ್ಜೆ ಎತ್ತಿ ಇಟ್ಟವನೇ ಕುಸಿದು ಬಿದ್ದ. ಬೊಬ್ಬೆ ಹಾಕಲು ಬಾಯಿ ತೆರೆದರೆ ಶಬ್ದವೇ ಹೊರಬರಲಿಲ್ಲ. ಆವನು ಕೊನೆಯ ಬೆಂಚ್‌ನ ಕೆಳಗೆ ಬಿದ್ದಿದ್ದರಿಂದ ಬಾಗಿಲ ಬಳಿ ಆಕಸ್ಮಿಕವಾಗಿ ಯಾರಾದರೂ ಬಂದರೂ ಕಾಣುವ ಹಾಗೆ ಇರಲಿಲ್ಲ. ಅದನ್ನು ತಿಳಿದೇ ಇಶಾನ್‌ ಏನಾದರೂ ಶಬ್ದ ಮಾಡುವ ಎಂದು ಕೈ ಎತ್ತಲು ನೋಡಿದ. ಊಹುಂ ಕೈ ಎತ್ತಲು ಸಾಧ್ಯವೇ ಆಗುತ್ತಿಲ್ಲ. ಏನು ಮಾಡಲೂ ತೋಚಲಿಲ್ಲ. ನಿಧಾನವಾಗಿ ಶಾಲೆಯಿಂದ ಒಬ್ಬೊಬ್ಬರೆ ಖಾಲಿಯಾಗ ತೊಡಗಿದರು.

ಇತ್ತ ಮೈದಾನದಲ್ಲಿ ಇಶಾನ್‌ಗಾಗಿ ಬನ್ನಿ ಕಾಯುತ್ತಿತ್ತು. ಮಾಮೂಲಿ ಸಮಯ ಕಳೆದರೂ ಇಶಾನ್‌ ಕಾಣದೆ ಕಂಗಾಲಾಯಿತು. ಗೇಟ್‌ ಬಳಿಯಿಂದ ಇಶಾನ್‌ ತರಗತಿಯ ಬಳಿ ಬಂತು. ಒಳಗೆ ಬರಬಾರದೆಂದು ಇಶಾನ್‌ ಅವತ್ತೇ ಅಪ್ಪಣೆ ಮಾಡಿದ್ದ. ಹೀಗಾಗಿ ಸ್ವಲ್ಪ ಹೊತ್ತು ಹೊರಗೇ ಕುಳಿತಿತ್ತು. ಒಂದೆರಡು ಸಲ ಜಗಲಿ ಬಳಿ ಹೋಗಿ ಬಂತು. ಏನು ಮಾಡಬೇಕೆಂದು ತಿಳಿಯಲಿಲ್ಲ. ಶತಪಥ ಹಾಕಿತು. ಕೊನೆಗೆ ಏನಾದರೂ ಆಗಲಿ ಎಂದು ಮೆಲ್ಲ ಹೆಜ್ಜೆ ಇಡುತ್ತ ಇಶಾನ್‌ನ ತರಗತಿ ಪ್ರವೇಶಿಸಿತು.

ಮೊದಲಿಗೆ ಸ್ನೇಹಿತನನ್ನು ಕಾಣದೆ ಬನ್ನಿಗೆ ನಿರಾಸೆಯಾಯಿತು. ಇನ್ನೇನು ತಿರುಗಬೇಕು ಎಂದಾಗ ಸಣ್ಣಗೆ ನರಳುವ ಧ್ವನಿ ಕೇಳಿಸಿ ಕೊನೆಯ ಬೆಂಚ್‌ನತ್ತ ಓಡಿ ಬಂತು. ಅಲ್ಲಿ ಇಶಾನ್‌ ಬಿದ್ದಿರುವುದು ಕಾಣಿಸಿತು. ಬಳಿ ಬಂದು ಅವನ ಮುಖ ನೆಕ್ಕಿತು. ಕಷ್ಟಪಟ್ಟು ಕಣ್ಣು ತೆರದ ಇಶಾನ್‌ಗೆ ಬನ್ನಿಯನ್ನು ನೋಡಿ ಸಮಾಧಾನವಾಯಿತು.

ಆಗಲೇ ಪ್ಯೂನ್‌ ಎಲ್ಲ ತರಗತಿಗಳ ಬಾಗಿಲಿಗೆ ಬೀಗ ಹಾಕಿಕೊಂಡು ಬರತೊಡಗಿದ ಶಬ್ದ ಕೇಳಿಸಿತು. ಬಿಟ್ಟ ಬಾಣದಂತೆ ಅವನ ಬಳಿ ಓಡಿ ಬಂದ ಬನ್ನಿ ಪ್ಯಾಂಟ್‌ ಹಿಡಿದು ಎಳೆಯಿತು. ತನ್ನನ್ನು ಕರೆಯುತ್ತಿದೆ ಎಂದು ಅರ್ಥ ಮಾಡಿಕೊಂಡ ಪ್ಯೂನ್‌ ಅದರ ಹಿಂದೆ ಓಡಿದ. ಬಿದ್ದಿದ್ದ ಇಶಾನ್‌ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಅವನ ಮನೆಯವರಿಗೆ ವಿಷಯ ತಿಳಿಸಿದ. ಬನ್ನಿಯ ಸಾಹಸಕ್ಕೆ ಎಲ್ಲರೂ ತಲೆದೂಗಿದರು.

-  ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next