ನಿನ್ನ ಮುಂದೆ ಎಲ್ಲವನ್ನೂ ಹೇಳಿಬಿಡಬೇಕು ಎಂದು ಪ್ರಿಪೇರ್ ಆಗಿಯೇ ಬಂದಿದ್ದೆ. “ಸ್ವಲ್ಪ ಮಾತನಾಡಬೇಕು ಅಂದಾಗ ನಿನಗೂ ಅದರ ಸುಳಿವು ಸಿಕ್ಕಿತೇನೋ? ಸರಿಯಾದ ಸಮಯಕ್ಕೆ ನೀನು ಬರಲೇ ಇಲ್ಲ. ನನ್ನ ಮನಸ್ಸಿನಲ್ಲಿದ್ದ ಮಾತುಗಳೆಲ್ಲ ಅಲ್ಲಿಯೇ ಕರಗಿ ಹೋದವು. ಕೆಲವೊಂದು ಸಲ ಎಲ್ಲವನ್ನೂ ನೀನೇ ಹೇಳುತ್ತಿಯೇನೋ ಅಂತ ಅನಿಸುತ್ತಿತ್ತು…
ನನಗೆ ಗೊತ್ತು, ನಿನ್ನ ಮನಸ್ಸಿನಲ್ಲಿ ನಾನಿದ್ದೇನೆ ಅಂತ. ಆದರೂ, ನೀನು ಇದುವರೆಗೂ ಏನು ಹೇಳಲಿಲ್ಲ. ಆವಾಗಲೇ ನಾನು ಹೇಳಬಹುದಿತ್ತು. ಹೇಳಲಾಗಲಿಲ್ಲ. ನಿನಗೂ ಕೂಡ ಈಗ ಅಂಥದ್ದೇನಾದರೂ ಹೇಳಬೇಕು ಅಂತ ಅನಿಸುತ್ತಿದೆಯಾ? ಅದ್ಯಾಕೋ ಗೊತ್ತಾಗುತ್ತಿಲ್ಲ, ಇಬ್ಬರಲ್ಲಿ ಒಬ್ಬರು ಹೇಳಲೇಬೇಕಲ್ಲ? ಅದಕ್ಕೇ ನಾನೇ ಮೊದಲು ಹೇಳಿದರಾಯಿತು ಎಂದು ಹಲವಾರು ಬಾರಿ ಅಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಈಗಲೂ ಹೇಳುಬೇಕು ಎನ್ನುವ ಆಸೆ. ನಿನಗೆ ಕೇಳಿಸಿಕೊಳ್ಳುವ ವ್ಯವಧಾನ ಇದೆಯಾ?
ಕನಸಿನ ಮೆಲುಕು ಹಾಕುತ್ತಾ, ಅದನ್ನು ನನಸು ಮಾಡಬೇಕು ಎಂದು ಹೊರಟರೆ ಕಾಲ ಅಡ್ಡಿ ಬಂದು ಎಲ್ಲವನ್ನು ಮರೆಸಿಬಿಡುತ್ತದೆ. ಅದಕ್ಕೆ ಕೆಲವೊಂದು ಬಾರಿ ಕನಸಿನ ಮಾತನ್ನೇ ಕೇಳಬಾರದು ಅಂತ ನಿರ್ಧಾರ ಮಾಡಿದ್ದೆ, ಕಂಡ ಕನಸಿನಲ್ಲಿ ನಿನ್ನ ಹಾಜರಾತಿ ಕಂಪಲ್ಸರಿ, ನೀನು ಕನಸಿಗೆ ಬರಲೇಬೇಕೆಂಬ ಅಲಿಖಿತ ಒಪ್ಪಂದವಾಗಿದೆಯೇನೋ.
ನಿನ್ನ ಮುಂದೆ ಎಲ್ಲವನ್ನೂ ಹೇಳಿಬಿಡಬೇಕು ಎಂದು ಪ್ರಿಪೇರ್ ಆಗಿಯೇ ಬಂದಿದ್ದೆ. “ಸ್ವಲ್ಪ ಮಾತನಾಡಬೇಕು ಅಂದಾಗ ನಿನಗೂ ಅದರ ಸುಳಿವು ಸಿಕ್ಕಿತೇನೋ? ಸರಿಯಾದ ಸಮಯಕ್ಕೆ ನೀನು ಬರಲೇ ಇಲ್ಲ. ನನ್ನ ಮನಸ್ಸಿನಲ್ಲಿದ್ದ ಮಾತುಗಳೆಲ್ಲ ಅಲ್ಲಿಯೇ ಕರಗಿ ಹೋದವು. ಕೆಲವೊಂದು ಸಲ ಎಲ್ಲವನ್ನು ನೀನೇ ಹೇಳುತ್ತಿಯೇನೋ ಅಂತ ಅನಿಸುತ್ತಿತ್ತು.
ಎಷ್ಟೋ ಬಾರಿ ನಿನ್ನ ನಡೆಯೇ ನನಗೆ ಅರ್ಥವಾಗುವುದಿಲ್ಲ, ನಿನಗೆ ಇಷ್ಟವಾಗದಿದ್ದರೆ ನೇರವಾಗಿಯೇ ಹೇಳಬಹುದಿತ್ತು. ಅದ್ಯಾಕೆ ಹಾಗೆ ಮಾಡಿದೆಯೋ ಗೊತ್ತಿಲ್ಲ. ಈಗ ಅದೆಲ್ಲ ಹೋಗಲಿ. ನೀನೆಲ್ಲಿದ್ದಿಯಾ? ಈಗಲೂ ನಿನ್ನ ಮನಸ್ಸು ನನ್ನನ್ನು ಕೇಳುತ್ತಿದೆಯಾ?
ಸೀತ ಅನಿ ಸಾಗರ