ಸಾಮಾಜಿಕ ಜಾಲತಾಣ ಅತ್ಯಂತ ಪ್ರಬಲಯುತವಾದ ಮಾಧ್ಯಮವಾಗಿ ರೂಪುಗೊಂಡಿದೆ. ಸಾಮಾಜಿಕ ಜಾಲತಾಣ ಉಪಯೋಗಿಸುವುದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕವೂ ಎಲ್ಲರೂ ಬಳಸುತ್ತಿದ್ದಾರೆ.
ಸಾಕಷ್ಟು ಜನರು ಹೇಳುತ್ತಾರೆ ಮೊಬೈಲ್ ಬಂದಮೇಲೆ ಕಾಲ ಕೆಟ್ಟು ಹೋಯಿತು ಎಂದು. ಈ ಮಾತನ್ನು ಆವಶ್ಯಕವಾಗಿ ಒಪ್ಪೋಣ ಆದರೆ ಮೊಬೈಲ್ನಿಂದ ಸಾಕಷ್ಟು ಒಳ್ಳೆ ಕೆಲಸ ಮಾಡಲು ಕೂಡ ಸಾಧ್ಯ ಇದೆ ಎಂಬುದನ್ನು ನಾವು ನಮ್ಮ ಸುತ್ತಮುತ್ತ ಕಾಣಬಹುದು. ಮೊಬೈಲ್ ಅನ್ನು ನಾವು ಹೇಗೆ ಉಪಯೋಗ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಪ್ರಯೋಜನ ನಿರ್ಧಾರವಾಗಿದೆ. ಮೊಬೈಲ್ನಿಂದ ಒಳ್ಳೆಯದು ಆಗಿದೆ, ಕೆಟ್ಟದ್ದು ಆಗಿದೆ.
ಅದೇನೆ ಇರಲಿ. ಪ್ರಸ್ತುತ ನಾವಿಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಒಳ್ಳೆಯ ಕೆಲಸವನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡೋಣ. ಅದೊಂದು ತಾಯಿ ಮತ್ತು ಮಗಳು ಇಬ್ಬರೇ ಇರುವ ಬಡ ಕುಟುಂಬ. ತಾಯಿಗೇ ವಯಸ್ಸಾಗಿದೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಪದವಿ ಓದುತ್ತಿರುವ ಮಗಳು ಒಂದು ದಿನ ಕಾಲೇಜಿಗೆ ಹೋಗುವಾಗ ಹಿಂದೆ ಇಂದ ಬಂದ ಬೈಕ್ನವರು ಆಕೆಗೆ ಆಕ್ಸಿಡೆಂಟ್ ಮಾಡಿ, ಪರಾರಿಯಾಗುತ್ತಾರೆ. ತತ್ಕ್ಷಣ ಅಲ್ಲಿದ್ದವರ ಸಹಾಯದ ಮೂಲಕ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು.
ಎರಡು ಕಾಲು ಮುರಿದು ಹೋದ ಕಾರಣ ಚಿಕಿತ್ಸೆಗೆ ವೈದ್ಯರು ಕೇಳಿದ್ದು 4 ಲಕ್ಷ ರೂಪಾಯಿ. ಬಡತನ ಬೇರೆ ಅಷ್ಟೊಂದು ಹಣ ಇಲ್ಲ. ಆದರೆ ಆ ಊರಿನ ಯುವಕರೆಲ್ಲ ಸೇರಿ ಸಹಾಯ ಮಾಡಿ ಎಂಬ ವಿವರ ಸಹಿತ ಒಂದು ಪೋಸ್ಟರ್ ಮಾಡಿ ವಾಟ್ಸಾಪ್, ಫೇಸ್ಬುಕ್ ಹೀಗೆ ಇನ್ನೂ ಅನೇಕ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಎಲ್ಲ ಕಡೆ ಪೋಸ್ಟರ್ ಹಂಚುವ ಮೂಲಕ ಆ ಕುಟುಂಬಕ್ಕೆ ಚಿಕಿತ್ಸೆಗೆ ಬೇಕಾದ ಹಣದ ವ್ಯವಸ್ಥೆಯನ್ನು ಮಾಡಿದರು. ಈ ಪುಣ್ಯದ ಕಾರ್ಯ ಆಗಿದ್ದು ಸಾಮಾಜಿಕ ಜಾಲತಾಣದ ಮೂಲಕವೇ.
ಹಾಗಾದರೆ ಈ ಸಾಮಾಜಿಕ ಜಾಲತಾಣದ ಮೂಲಕ ಒಂದು ಗ್ರಾಮದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರೆ ಖಂಡಿತ ಸಾಧ್ಯ ಎಂದು ಹೇಳಬಲ್ಲೆ. ಒಂದು ಗ್ರಾಮದ ಅಭಿವೃದ್ಧಿ ಎಂದರೆ ಆ ಊರಿನ ಶಾಲೆ, ದೇವಸ್ಥಾನ, ಅಂಗನವಾಡಿ ಹೀಗೆ ಇನ್ನು ಅನೇಕ ಕಡೆ ಮೂಲಭೂತ ಸೌಲಭ್ಯಗಳ ಕೊರತೆ ಆಗದಂತೆ ನೋಡಿಕೊಳ್ಳುವುದು. ಕಳೆದ ವರ್ಷ ನಮ್ಮ ಶಾಲೆಯ ಬಗ್ಗೆ ಒಂದು ಲೇಖನ ಬರೆದು ಫೇಸ್ಬುಕ್ನಲ್ಲಿ ಹಾಕಿದೆ. ನಮ್ಮೂರ ಸರಕಾರಿ ಶಾಲೆಯಲ್ಲಿ 80 ಮಕ್ಕಳಿದ್ದಾರೆ. ಎಲ್ಲರೂ ಬಡಕುಟುಂಬದಿಂದ ಬಂದವರು. ಹೀಗಾಗಿ ಪುಸ್ತಕ, ಬ್ಯಾಗ್ ಬೇಕು ಎಂದು ಒಬ್ಬರಿಗೆ ಫೇಸಬುಕ್ನಲ್ಲಿಯೇ ಸಂದೇಶ ಹಾಕಿದೆ. ಅವರು ಖುಷಿಯಿಂದ ಒಪ್ಪಿದ್ದರು. ಹೀಗೆಯೇ ಪುಸ್ತಕ, ಬ್ಯಾಗ್ ಜತೆಗೆ ಪ್ರತಿ ಮಕ್ಕಳಿಗೂ ಚೆಂದದ 2 ಜತೆ ಸಮವಸ್ತ್ರ, ಐಡಿ ಕಾರ್ಡ್, ಮೈಕ್ ಹೀಗೆ ಸುಮಾರು 2,20,000 ರೂ. ಮೌಲ್ಯದ ವಸ್ತುಗಳು ದಾನಿಗಳಿಂದ, ಸಾಮಾಜಿಕ ಜಾಲತಾಣದ ಮೂಲಕವೇ ಶಾಲೆಗೆ ಬಂತು. ಊರಿಗೆ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹಾಕಲಾಗಿತ್ತು. ಬಸ್ ನಿಲ್ದಾಣ ಕೂಡ ಒಂದು ಸಂಸ್ಥೆಯ ಮೂಲಕ ನಿರ್ಮಾಣವಾಗಲು ತಯಾರಾಗುತ್ತಿದೆ.
ಇನ್ನು ಅನೇಕ ವಿಭಿನ್ನ ಶೈಲಿಯಿಂದ ಗ್ರಾಮದ ಅಭಿವೃದ್ಧಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಡಲು ಸಾಧ್ಯ. ಯಾವುದೇ ಆಗಲಿ ನಾವು ಬಳಸಿಕೊಳ್ಳುವ ರೀತಿ ಮುಖ್ಯವಾಗಿದೆ. ಸಾಮಾಜಿಕ ಜಾಲತಾಣವನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡರೆ ಖಂಡಿತ ಉಪಕಾರ ಪಡೆಯಬಹುದಾಗಿದೆ. ಮನಸ್ಸುಗಳು ಬದಲಾಗಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಪಣ ತೊಡೋಣ.
-ವಿನಾಯಕ ಪ್ರಭು
ವಾರಂಬಳ್ಳಿ