Advertisement

ಸುಲಭವೇ ಗೆಲುವು? ಸಿದ್ದು ಮೆಟ್ಟಿ ನಿಲ್ಲಬೇಕಾಗಿದೆ ಸವಾಲುಗಳ ಸರಣಿ

12:01 AM Jan 10, 2023 | Team Udayavani |

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣೆ ಸ್ಪರ್ಧೆ ಕೋಲಾರದಿಂದಲೇ ಎಂಬುದು ಕೊನೆಗೂ ಘೋಷಣೆಯಾಗಿದೆ. ಆದರೆ ಅವರ ಗೆಲುವಿನ ಹಾದಿ ಅಂದು
ಕೊಂಡಷ್ಟು ಸುಲಭವಲ್ಲ.

Advertisement

ಸಿದ್ದರಾಮಯ್ಯ ಸ್ಪರ್ಧೆಯ ತೀರ್ಮಾನದೊಂದಿಗೆ ಅಲ್ಲಿನ ರಾಜಕೀಯ ಚಿತ್ರಣ ಬದಲಾಗಲಿದ್ದು, ಮುಂದೆ ಎದುರಾಗುವ ಸವಾಲುಗಳು ಕಡಿಮೆಯೇನಲ್ಲ. ಮೇಲ್ನೋಟಕ್ಕೆ ಸದ್ಯ ಕಾಂಗ್ರೆಸ್‌- ಜೆಡಿಎಸ್‌-ಬಿಜೆಪಿ ತ್ರಿಕೋನ ಸ್ಪರ್ಧೆಯ ಲಕ್ಷಣ ಕಂಡುಬಂದರೂ ಮತದಾನ ಹತ್ತಿರ ಬಂದಾಗ ಬದಲಾಗ ಬಹುದಾದ ಸ್ವರೂಪ ಅಂತಿಮವಾಗಿ ಸೋಲು- ಗೆಲುವನ್ನು ನಿರ್ಧರಿಸಲಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್‌ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರೆ ಸವಾಲು ಕಠಿನವಾಗಬಹುದು.

ಸಿದ್ದರಾಮಯ್ಯ ಸ್ಪರ್ಧೆಯಿಂದ ಕೋಲಾರ-ಚಿಕ್ಕಬಳ್ಳಾಪುರ-ಬೆಂಗ ಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಲಾಭವಾಗಬಹುದು. ಆದರೆ ಅವರ ಪಾಲಿಗೆ ಕೋಲಾರ ಮತ್ತೂಂದು “ಚಾಮುಂಡೇಶ್ವರಿ ಚುನಾವಣೆ’ ಚಕ್ರವ್ಯೂಹದಂತಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.

ತಲೆನೋವು-ಸವಾಲು
ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಬಣ ರಾಜಕೀಯ ಹಾಗೂ ಭಿನ್ನಮತ ಶಮನ ಸಿದ್ದರಾಮಯ್ಯ ಅವರಿಗೆ ಪ್ರಾರಂಭಿಕ ಅತೀ ದೊಡ್ಡ ತಲೆನೋವು. ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿದ್ದು, ಕೋಲಾರದ ಕಾರ್ಯ ಕ್ರಮದಲ್ಲಿ ಜತೆಯಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಷ್ಟು ಸರಳವಾಗಿ ಈ ಬಣ ರಾಜಕೀಯ ಸಮಸ್ಯೆ ಬಗೆಹರಿಯುವುದಿಲ್ಲ. ಅಲ್ಲಿ ಸ್ಥಳೀಯ ಸಮಸ್ಯೆ ಬೇರೆಯೇ ಇದೆ.

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಶಾಸಕ ಶ್ರೀನಿವಾಸ ಗೌಡ, ಪರಿಷತ್‌ ಸದಸ್ಯರಾದ ನಸೀರ್‌ ಅಹಮದ್‌, ಅನಿಲ್‌ಕುಮಾರ್‌ ಒಂದು ಕಡೆಯಾದರೆ ಕೆ.ಎಚ್‌. ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಮತ್ತೂಂದು ಕಡೆ. ಎರಡೂ ಬಣದ ಜತೆ ಸಮನ್ವಯ ಸಾಧಿಸಿ ಗೆಲುವಿನ ಹಾದಿ ಸುಗಮ ಗೊಳಿಸಿಕೊಳ್ಳಬೇಕಾದ ಸವಾಲು ಸಿದ್ದರಾಮಯ್ಯ ಮುಂದಿದೆ.

Advertisement

ಮುನಿಯಪ್ಪ ದೇವನಹಳ್ಳಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಇವೆ. ಅವರು ಅಲ್ಲಿ ಸ್ಪರ್ಧಿಸಿ ಅವರ ಬೆಂಬಲಿಗರು ಅಲ್ಲಿಗೆ ಸ್ಥಳಾಂತರವಾದರೆ ಮುನಿಯಪ್ಪ ಅನುಪಸ್ಥಿತಿ ಬೇರೆಯದೇ ಸಂದೇಶ ರವಾನಿಸಲಿದೆ.
ಕೋಲಾರದಲ್ಲಿ ಟಿಕೆಟ್‌ ಆಕಾಂಕ್ಷಿ ಗಳಾಗಿದ್ದ ವಿ.ಆರ್‌. ಸುದರ್ಶನ್‌, ಬ್ಯಾಲಹಳ್ಳಿ ಗೋವಿಂದ ಗೌಡ, ಊರುಬಾಗಿಲು ಶ್ರೀನಿವಾಸ್‌, ಮನೋಹರ್‌, ಎಲ್‌.ಎ. ಮಂಜುನಾಥ್‌ ಅವರು ಸಿದ್ದು ಗೆಲುವಿಗಾಗಿ ಎಷ್ಟರ ಮಟ್ಟಿಗೆ ಶ್ರಮಿಸು ತ್ತಾರೆ ಎಂಬುದೂ ನಿರ್ಣಾಯಕ.

ಕೈಹಿಡಿಯುವವರು ಯಾರು?
ಸಿದ್ದರಾಮಯ್ಯ ಮುಸ್ಲಿಂ, ಕುರುಬ, ಪರಿಶಿಷ್ಟ ಜಾತಿಯ ಮತಗಳ ಮೇಲೆ ಕಣ್ಣಿಟ್ಟು ಅಖಾಡ ಪ್ರವೇಶಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಸಿ.ಎಂ.ಆರ್‌. ಶ್ರೀನಾಥ್‌ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಸ್ಥಳೀಯವಾಗಿ ವರ್ಚಸ್ಸು ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಪೂರ್ವಾಶ್ರಮದ ಶಿಷ್ಯ ವರ್ತೂರು ಪ್ರಕಾಶ್‌ ಬಿಜೆಪಿ ಅಭ್ಯರ್ಥಿ. ಕುರುಬ ಸಮುದಾಯದ ಇವರು ನೆಚ್ಚಿಕೊಂಡಿರುವುದು ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ ಮತಗಳನ್ನು.

ಸಿದ್ದು ಕೋಲಾರ ಸ್ಪರ್ಧೆ ಊಹಿಸಿದ್ದ ಉದಯವಾಣಿ
ಕೋಲಾರ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು “ಉದಯವಾಣಿ’ ಅ. 28ರಂದು ಮೊದಲು ವಿಶೇಷ ವರದಿ ಮಾಡಿತ್ತು.

- ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next