Advertisement

ಚಕ್ಕರ್‌ ಎಂಪಿಗಳಿಗೆ ಮೋದಿ ಕ್ಲಾಸ್‌

10:07 AM Jul 04, 2019 | Team Udayavani |

ನವದೆಹಲಿ: ‘ನಿಮ್ಮ ನೇತೃತ್ವದಲ್ಲಿ ನಡೆಯುವ ಬಿಜೆಪಿ ರ್ಯಾಲಿಗೆ ಅಮಿತ್‌ ಶಾ ಬಂದು ಮಾತನಾಡಬೇಕಾಗಿದ್ದವರು ಕೊನೇ ಕ್ಷಣದಲ್ಲಿ ಬರದೇ ಇದ್ದರೆ ಹೇಗಾಗುತ್ತದೆ? ಲೋಕಸಭೆಯಲ್ಲಿ ನೀವು ಸಂಸತ್‌ ಸದಸ್ಯರಾಗಿ ಬಾರದೇ ಇದ್ದರೆ ನನಗೆ ಮುಜುಗರವಾಗುವುದಿಲ್ಲವೇ?’

Advertisement

-ಹೀಗೆಂದು ಬಿಜೆಪಿಯ ಲೋಕಸಭೆ ಸದಸ್ಯರಿಗೆ ತೀಕ್ಷ್ಣ ಪ್ರಶ್ನೆ ಹಾಕಿದ್ದು ಪ್ರಧಾನಿ ನರೇಂದ್ರ ಮೋದಿ. ನವದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಅಂಶವನ್ನು ಅವರು ಪ್ರಸ್ತಾಪಿಸಿದ್ದಾರೆ.

ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ತ್ರಿವಳಿ ತಲಾಖ್‌ ವಿಧೇಯಕ ಮಂಡನೆ ವೇಳೆ ಮತ್ತು ಬಜೆಟ್ ಅಧಿವೇಶನದ ಆರಂಭದ ಕೆಲ ದಿನಗಳಲ್ಲಿ ಹಲವು ಬಿಜೆಪಿ ಸಂಸದರು ಸದನದಲ್ಲಿ ಹಾಜರಿರದೇ ಇದ್ದದ್ದು ಪ್ರಧಾನಿಯವರಿಗೆ ಮುಜುಗರ ಉಂಟು ಮಾಡಿತ್ತು. ಹೀಗಾಗಿ, ಮಂಗಳವಾರ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಅಶಿಸ್ತು ತೋರದಂತೆ ನಾಯಕರಿಗೆ ಸೂಚಿಸಿದ್ದಲ್ಲದೆ, ಕಲಾಪಕ್ಕೆ ಹಾಜರಿರಬೇಕಾದ ಪ್ರಾಮುಖ್ಯತೆ ಬಗ್ಗೆ ಬೊಟ್ಟು ಮಾಡಿ ತೋರಿಸಿದ್ದಾರೆ.

ಪ್ರಧಾನಿ ಮಾತನಾಡುವುದಕ್ಕೆ ಮೊದಲು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಸಂಸತ್‌ ಸದಸ್ಯರು ಪ್ರಮುಖ ಕಲಾಪಗಳ ಮಂಡನೆ, ಚರ್ಚೆ ವೇಳೆ ಹಾಜರಿರಬೇಕಾದ ಪ್ರಾಮುಖ್ಯತೆ ಬಗ್ಗೆ ವಿವರಿಸಿದ್ದರು. ನಂತರ ಮಾತನಾಡಿದ ಪ್ರಧಾನಿ ಮೋದಿ, ಸಂಸತ್‌ ಸದಸ್ಯರಾದವರು ಜನರ ಆಶೋತ್ತರಗಳನ್ನು ಬಿಂಬಿಸಬೇಕು ಎಂದಿದ್ದಾರೆ.

ಜತೆಗೆ ಕಲಾಪಕ್ಕೆ ಗೈರಾಗುವುದನ್ನು ಸಹಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ. ‘ನಿಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ಅಮಿತ್‌ ಶಾ ಕೊನೆಯ ಕ್ಷಣದಲ್ಲಿ ಬಾರದೇ ಇದ್ದರೆ ಹೇಗಾಗುತ್ತದೆ? ಎಂದು ಕಠಿಣವಾಗಿಯೇ ಪ್ರಶ್ನೆ ಮಾಡಿದ್ದಾರೆ ಪ್ರಧಾನಿ. ಸಭೆಯಲ್ಲಿ ಹಾಜರಿದ್ದ ಸಂಸದರತ್ತ ನೋಡಿ ಪ್ರಶ್ನೆಯನ್ನು ಮತ್ತೂಮ್ಮೆ ಕೇಳಿದರು ‘ಹೇಳಿ ಹೇಗಾಗುತ್ತದೆ? ನಿಮ್ಮಲ್ಲೇ ಎಂಥ ಅನುಭವವಾಗುತ್ತದೆ? ಎಂದು ಪ್ರಶ್ನೆ ಮಾಡಿದರು.

Advertisement

ಪ್ರಧಾನಿಯವರು ಮತ್ತೂಮ್ಮೆ ಪ್ರಶ್ನೆ ಕೇಳಿದಾಗ ‘ಬೇಸರವಾಗುತ್ತದೆ’ ಎಂದು ಸಭೆಯಲ್ಲಿ ಇದ್ದ ಸಂಸದರೊಬ್ಬರು ಹೇಳಿದರು. ಅದನ್ನು ಕ್ಷಣ ಮಾತ್ರದಲ್ಲಿ ತಿಳಿದ ನರೇಂದ್ರ ಮೋದಿ ‘ನಿಮ್ಮ ವರ್ತನೆಯಿಂದಲೂ ನನಗೆ ಅದೇ ಭಾವನೆ ಉಂಟಾಗುತ್ತದೆ’ ಎಂದರು.

‘ಎರಡು ಲಕ್ಷ ಮತಗಳಿಂದ ನೀವು ಗೆದ್ದಿದ್ದೀರಿ ಎಂದು ನೀವು ಸಂತೋಷಪಟ್ಟುಕೊಳ್ಳಬಹುದು. ಆದರೆ ನಿಮ್ಮ ಅತ್ಯಂತ ಆಪ್ತ ಸ್ನೇಹಿತನೇ ನಿಮಗೆ ಮತ ಹಾಕಿಲ್ಲ ಎಂದು ಗೊತ್ತಾದರೆ ಬೇಸರವಾಗುತ್ತದೆ ಅಲ್ಲವೇ? ನಮ್ಮ ಪಕ್ಷದ ಸಂಸದರಲ್ಲಿ ಹಲವರು ಕಲಾಪಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಗೊತ್ತಾದ ಬಳಿಕ ನನಗೆ ನೀವು ಅನುಭವಿಸುವ ರೀತಿಯಲ್ಲಿ ನನಗೂ ಆಗಿದೆ’ ಎಂದರು.

6ರಂದು ಚಾಲನೆ: ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಜು.6ರಂದು ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಚಾಲನೆ ನೀಡಲಿದ್ದಾರೆ. ಪ್ರತಿ ಬೂತ್‌ ಮಟ್ಟದಲ್ಲಿ ಐದು ಗಿಡಗಳನ್ನು ನೆಡುವಂತೆಯೂ ಸಲಹೆ ನೀಡಿದ್ದಾರೆ ಪ್ರಧಾನಿ. ದೇಶಾದ್ಯಂತ ಈ ಪ್ರಕ್ರಿಯೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.

ಯಾರ ಪುತ್ರನ ರಕ್ಷಣೆಯೂ ಇಲ್ಲ
ಜನಪ್ರತಿನಿಧಿಗಳಿಗೆ ದುರಹಂಕಾರ ಸಲ್ಲದು ಎಂದು ಹೇಳಿದ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಕೈಲಾಶ್‌ ವಿಜಯವರ್ಗೀಯ ಪುತ್ರ-ಶಾಸಕ ಆಕಾಶ್‌ ವಿಜಯ ವರ್ಗೀಯ ಮಧ್ಯಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗೆ ಬ್ಯಾಟ್‌ನಲ್ಲಿ ಥಳಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ‘ಯಾರ ಪುತ್ರನೇ ಆಗಲಿ, ಅನುಚಿತ ವರ್ತನೆ ಸಹಿಸಲು ಸಾಧ್ಯವೇ ಇಲ್ಲ. ಅಂಥವರಿಗೆ ಬೆಂಬಲ ನೀಡುವವರನ್ನೂ ಪಕ್ಷದಿಂದ ವಜಾ ಮಾಡಬೇಕು ಎಂದು ಕಟುವಾಗಿಯೇ ಹೇಳಿದ್ದಾರೆ. ಸಂಸದರಾಗಿ ಜನರ ಆಶೋತ್ತರಗಳನ್ನು ಈಡೇರಿಸುವುದು ನಿಮ್ಮ ಕೆಲಸ’ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next