ಎಸ್.ನಾರಾಯಣ್ ನಿರ್ದೇಶನದ “ಪಂಟ’ ಸಿನಿಮಾದಲ್ಲಿ “ಕುಲುಕು ಕುಲುಕು’ ಎಂಬ ಐಟಂ ಸಾಂಗ್‌ವೊಂದನ್ನು ಮಾಡಲಾಗಿದೆ. ಈ ಹಾಟ್ ಹಾಡಿನಲ್ಲಿ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಅವರನ್ನು ಕೂಡಾ ಬಳಸಿಕೊಳ್ಳಲಾಗಿದೆ. ಈಗ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಎಸ್.ನಾರಾಯಣ್‌ರಂತಹ ಶಿಸ್ತಿನ, ಕನ್ನಡಕ್ಕೆ ಒಳ್ಳೆಯ ಸಿನಿಮಾಗಳನ್ನು ಕೊಟ್ಟ ನಿರ್ದೇಶಕರ ಸಿನಿಮಾದಲ್ಲಿ ಈ ತರಹದ ಹಾಡು ಬೇಕಿತ್ತಾ ಹಾಗೂ 90 + ವಯಸ್ಸಿನ ಸೆಂಚುರಿ ಗೌಡ, ಗಡ್ಡಪ್ಪ ಅವರನ್ನು ಐಟಂ ಸಾಂಗ್‌ನಲ್ಲಿ ಕುಣಿಸಿದ್ದು ಸರಿನಾ ಎಂಬ ವಿಷಯಗಳು ಚರ್ಚೆಯಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಐಟಂ ಸಾಂಗ್, ಡಾಬಾ ಸಾಂಗ್ ಹೊಸದಲ್ಲ. ಜೊತೆಗೆ “ತಿಥಿ’ ನಂತರ ಸೆಂಚುರಿ ಗೌಡ, ಗಡ್ಡಪ್ಪ ಅವರ ಬಾಯಿಂದ ಸಾಕಷ್ಟು ಡಬಲ್ ಮೀನಿಂಗ್, ಪೋಲಿ ಡೈಲಾಗ್‌ಗಳನ್ನು ಹೇಳಿಸಲಾಗಿದೆ. ಆದರೆ, ಈಗ “ಪಂಟ’ದ “ಕುಲುಕು’ ಹಾಡು ಚರ್ಚೆಯಾಗಲು ಕಾರಣ ಎಸ್.ನಾರಾಯಣ್ ಅವರ ಟ್ರ್ಯಾಕ್ ರೆಕಾರ್ಡ್. ಕನ್ನಡ ಚಿತ್ರರಂಗದಲ್ಲಿ ಶಿಸ್ತಿನ ನಿರ್ದೇಶಕ ಎಂದು ಗುರುತಿಸಿಕೊಳ್ಳುವ ಜೊತೆಗೆ ರಾಜಕುಮಾರ್‌ರಿಂದ ಹಿಡಿದು ಇವತ್ತಿನ ಬಹುತೇಕ ಸ್ಟಾರ್‌ಗಳನ್ನು ನಿರ್ದೇಶಿಸಿದ ನಾರಾಯಣ್ ಸಿನಿಮಾದಲ್ಲಿ ಈ ಹಾಡು ಬೇಕಿತ್ತಾ ಎಂಬಂತಹ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮ ವರ್ಗದಲ್ಲಿ ನಡೆಯುತ್ತಿದೆ.
“ಈ ಹಾಡನ್ನು ಇಷ್ಟಪಟ್ಟು ಸೇರಿಸಿದ್ದಲ್ಲ. ಅದೇ ಕಾರಣಕ್ಕೆ ಈ ಹಾಡನ್ನು ಚಿತ್ರೀಕರಿಸದೆಯೇ ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದೆ. ಚಿತ್ರದ ನಿರ್ಮಾಪಕ ಸುಬ್ರಮಣ್ಯ ಅವರಿಗೆ ಈ ಹಾಡು ಕೇಳಿ ಸಖತ್ ಇಷ್ಟವಾಗಿದೆ. ಈ ತರಹದ ಮಸಾಲ ಹಾಡು ಚಿತ್ರಕ್ಕೆ ಬೇಕು ಎಂದು ಕೇಳಿಕೊಂಡರು. ಅದಕ್ಕೆ ಕಾರಣ “ಚೌಕ’ ಚಿತ್ರದ “ಅಲ್ಲಾಡ್ಸು ಅಲ್ಲಾಡ್ಸು’ ಹಾಡು. ಆ ಹಾಡು ಬಂದಾಗ ಜನ ಥಿಯೇಟರ್‌ನಲ್ಲಿ ಕುಣಿದಿದ್ದನ್ನು ನೋಡಿದ ಸುಬ್ರಮಣ್ಯ ಅವರು “ಕುಲುಕು’ ಹಾಡನ್ನು ಮಾಡಲೇಬೇಕೆಂದು ನಿರ್ಧರಿಸಿ ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದರು.
ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ ನಿಜ. ಹಾಗಂತ ನಾನು 10 ಜನರ ಮಾತಿಗೆ ಮನ್ನಣೆ ಕೊಡಲೇಬೇಕು. ಮೊದಲು ಹಾಡು ಬೇಡವೆಂದು ನಿರ್ಧರಿಸಿದ್ದೆ. ಆದರೆ, ನಿರ್ಮಾಪಕರು ಬೇಕೇ ಬೇಕೆಂದ ನಂತರ ಈ ಹಾಡನ್ನು ಮಾಡಲು ನಿರ್ಧರಿಸಿದೆವು. ಈಗ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಎಂಟು ಗಂಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ’ ಎಂದು ಉತ್ತರಿಸುತ್ತಾರೆ ನಾರಾಯಣ್.