Advertisement
ಅದೊಂದು ದೊಡ್ಡ ಆಫೀಸ್. ಸಾವಿರಾರು ಜನ ಉದ್ಯೋಗಿಗಳು. ಸಣ್ಣಪುಟ್ಟ ಕಚೇರಿಗಳನ್ನು ನೋಡಿದ್ದ ಅವಳಿಗೆ ಮೊದಲನೇ ಸಲ ಅಷ್ಟು ದೊಡ್ಡ ಆಫೀಸ್ ಕಂಡು ತಲೆ ತಿರುಗಿದಂತಾಗಿತ್ತು. ಮನಸ್ಸಲ್ಲೇ ಧೈರ್ಯ ಮಾಡಿ ಪ್ರವೇಶಿಸಿದಳು. ಕೆಲಸ ಕಲಿಯಲು ಶುರು ಮಾಡಿದಳು. ಹೀಗೆ ನೋಡ ನೋಡುತ್ತಿದ್ದಂತೆ ಆರು ತಿಂಗಳು ಕಳೆದೇಬಿಟ್ಟಿತ್ತು.
Related Articles
Advertisement
ಕೆಲವು ಪವಿತ್ರ ಸಂಬಂಧಗಳನ್ನು ಕೆಟ್ಟ ಆಲೋಚನೆಯಲ್ಲಿ ನೋಡುವ ಇಂತಹ ಕಣ್ಣುಗಳು ಹೊಸತೇನಲ್ಲ. ಆದರೆ ನಿಷ್ಕಲ್ಮಶ ಸ್ನೇಹಕ್ಕೆ ಪ್ರೀತಿಯ ಹಣೆಪಟ್ಟಿ ಕಟ್ಟಿದ ಆತ, ಎಲ್ಲರಲ್ಲಿಯೂ ಅವಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ. ಅಂದಿನಿಂದ ಅವಳ ಇಬ್ಬರು ಅಣ್ಣಂದಿರನ್ನು ಬಿಟ್ಟರೆ ಮತ್ತೆಲ್ಲರೂ ಆಕೆಯನ್ನು ಒಂದು ರೀತಿಯ ಅಸಹ್ಯ ಭಾವನೆಯಲ್ಲಿ ನೋಡಲು ಶುರುಮಾಡಿದರು.
ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದ ಆ ಮುಗ್ಡೆಯ ಬದುಕಲ್ಲಿ ಈ ಒಂದು ಘಟನೆ ಎಲ್ಲವನ್ನೂ ಬದಲಾಯಿಸಿತು. ಸದಾ ಸಂತಸದಲ್ಲಿ ಕುಪ್ಪಳಿಸುತ್ತಿದ್ದ ಅವಳನ್ನು ಎಲ್ಲರೂ ಸೇರಿ ಕಣ್ಣೀರಿನ ಕಡಲಲ್ಲಿ ತೇಲಿಸಿಬಿಟ್ಟರು. “ನನ್ನಿಂದಲೇ ಆಕೆಗೆ ಕೆಟ್ಟ ಹೆಸರು’ ಎಂದು ನೊಂದ ಅವಳ ಫ್ರೆಂಡ್ ಕೂಡ ದೂರ ಹೋಗಲು ನಿರ್ಧಾರ ಮಾಡಿದ್ದು ಅವಳ ಮುಗ್ಧ ಮನಸ್ಸನ್ನು ಮತ್ತಷ್ಟು ಕುಗ್ಗಿಸಿಬಿಟ್ಟಿತು.
ಎಲ್ಲರೂ ಅವಳನ್ನು ವಿಚಿತ್ರವಾಗಿ ಪ್ರಶ್ನಿಸುವಾಗ, ಅವರಿಬ್ಬರ ಸಂಬಂಧದ ಬಗ್ಗೆ ಅಸಹ್ಯವಾಗಿ ಮಾತನಾಡುವಾಗ ಆಕೆಗೆ ನೋವಿನ ಕಣ್ಣೀರು ಉಮ್ಮಳಿಸಿ ಬಂತು. ನಮ್ಮಿಬ್ಬರದ್ದು ಪರಿಶುದ್ದ ಸ್ನೇಹವೆಂದು ಎಷ್ಟೇ ಗೋಗರೆದರೂ ಅವರು ಆಕೆಯನ್ನು ಆಡಿಕೊಂಡು ನಗುವುದು ಒಂದು ರೂಢಿ ಮಾಡಿಕೊಂಡರು. ಇದನ್ನು ಕಂಡು ಸುಮ್ಮನಿರಲಾರದ ಅವಳ ಅಣ್ಣಂದಿರು ಆಕೆಯ ಮುಖದಲ್ಲಿ ಮೊದಲಿದ್ದ ನಗು ಮತ್ತೆ ಕಾಣಿಸಬೇಕು ಅಂತ ತುಂಬಾನೇ ಪ್ರಯತ್ನ ಪಟ್ಟರು.
ಆದರೆ ಅವರ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆ ಆಗಿಬಿಟ್ಟಿತು. ಏನೇ ಆದರೂ ಪ್ರಯತ್ನ ಬಿಡದ ಅಣ್ಣಂದಿರು ಮಾತ್ರ ಆಕೆಗೆ ಬದುಕಲ್ಲಿ ಎದುರಾಗುವ ಕಷ್ಟಗಳು, ಸವಾಲುಗಳು, ಜನರ ಚುಚ್ಚು ಮಾತುಗಳನ್ನು ಎದುರಿಸುವ ಬಗ್ಗೆ ಒಂದು ದಿನ ಪಾಠ ಮಾಡಿದರು. ನಿನ್ನ ಸ್ನೇಹವನ್ನು ಇಂತಹವರ ಮಾತಿಗೆ ಬೆಲೆ ಕೊಟ್ಟು ದೂರ ಮಾಡಿಕೊಳ್ಳಬೇಡ. ನಿನ್ನನ್ನು ನೋವಿಗೆ ದೂಡಿದವರ ಮುಂದೆ ನಗುತ್ತಾ ಇರು ಎಂದು ಧೈರ್ಯ ತುಂಬಿದರು.
ಇದ್ಯಾವುದಕ್ಕೂ ಕ್ಯಾರೇ ಅನ್ನದ ಅವಳು ಮಾತ್ರ ಮೌನಿಯಾದಳು. ಎರಡು ದಿನ ಕಳೆದು ತನ್ನ ಬೆಸ್ಟ್ ಫ್ರೆಂಡ್‌ಗೆ ಕರೆ ಮಾಡಿ, ಮಾತನಾಡಿದಳು. ಅವನನ್ನು, ಅವನ ಸ್ನೇಹವನ್ನು ಬಿಟ್ಟುಕೊಡುವ ಮನಸ್ಸು ಆಕೆಗೆ ಇರಲಿಲ್ಲ. ಅವನಿಗಂತೂ ಮೊದಲೇ ಇರಲಿಲ್ಲ. ಅಮ್ಮನಂತೆ ನೋಡಿಕೊಳ್ಳುವ ಅವಳನ್ನು ದೂರ ಮಾಡುವುದು ಆತನಿಗೆ ನಿಜಕ್ಕೂ ಕಷ್ಟ ಆಗಿತ್ತು.
ಅಣ್ಣಂದಿರು ಹೇಳಿದ ಮಾತುಗಳು ಆಕೆಯ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದ್ದವು. ಕೊನೆಗೆ ಅವರ ಮಾತುಗಳು ಸರಿ ಎನಿಸಿತು. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಬಂದಳು. ಆತನೊಂದಿಗೆ ಮತ್ತೆ ಮೊದಲಿನಂತೆ ಇರಲು ನಿರ್ಧರಿಸಿದಳು. ಆಡಿಕೊಂಡವರ ಮುಂದೆಯೇ ನಿಂತು ಅವನೊಂದಿಗೆ ಮಾತನಾಡಲು ಶುರುಮಾಡಿದಳು. ಹಿಂದೆಯಿಂದ ಮಾತಾಡೋ ವಿಷಜಂತುಗಳ ಜತೆಗೂ ಚೆನ್ನಾಗಿಯೇ ಇದ್ದಳು.
ಕೊನೆಗೂ ತನ್ನ ನಗುವಿಂದಲೇ ಅಂತಹ ಕಟುಕರನ್ನು ಮಣಿಸಿದಳು. ಎಲ್ಲ ನೋವನ್ನು ಮನಸ್ಸಿನಿಂದ ಕಿತ್ತೆಸೆದ ಅವಳು ತನ್ನ ಪುಟ್ಟ ಪ್ರಪಂಚಕ್ಕೆ ಶಾಶ್ವತವಾಗಿ ಅವನನ್ನು ಸೇರಿಸಿಕೊಂಡಳು. ಇಬ್ಬರು ಅಣ್ಣಂದಿರು, ಒಬ್ಬ ಬೆಸ್ಟ್ ಫ್ರೆಂಡ್. ಸುಂದರ ಬದುಕಿಗೆ ಇಷ್ಟೇ ಸಾಕು ಅನಿಸಿತು ಆಕೆಗೆ. ಮೂವರ ಮಡಿಲಲ್ಲಿ ಮತ್ತೆ ಮಗುವಾದಳು.
ವಾವ್ ಎಷ್ಟು ಚೆನ್ನಾಗಿದೆ ಅಲ್ವಾ? ಇತ್ತೀಚೆಗೆ ನನ್ನ ಫ್ರೆಂಡ್ ಸಿಕ್ಕಾಗ ನನಗೆ ಹೇಳಿದ ಕಥೆಯಿದು. ಆಕೆಯಂತೆ ನಂಗೂ ಇಂತಹ ಅಣ್ಣಂದಿರು, ಬೆಸ್ಟ್ ಫ್ರೆಂಡ್ ಬೇಕು ಎಂದನಿಸುತ್ತದೆ. ಎಷ್ಟೇ ನೋವು ಅನುಭವಿಸಿದರೂ ಒಳ್ಳೆಯವರಿಗೆ ಒಳ್ಳೇದೇ ಆಗುತ್ತೆ ಅನ್ನೋದಕ್ಕೆ ಇವಳೇ ಉದಾಹರಣೆ. ಒಟ್ಟಿನಲ್ಲಿ ನೀವೇನೇ ಅನ್ನಿ, ಅವಳು ಮಾತ್ರ ಲಕ್ಕಿ ಗರ್ಲ್.
ತನುಶ್ರೀ ಬೆಳ್ಳಾರೆ