ಹೊಸದಿಲ್ಲಿ: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ನಡೆಸುತ್ತಿದ್ದಂತೆ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟೈಸಿವೆ. ಹಲವು ರಕ್ಷಣ ತಜ್ಞರು ಇದು 3ನೇ ಮಹಾಯುದ್ಧಕ್ಕೆ ಮುನ್ನುಡಿಯಾಗಬ ಹುದೇ ಎಂದು ಚರ್ಚಿಸುತ್ತಿದ್ದಾರೆ. ಅಮೆರಿಕದಲ್ಲಂತೂ ಈ ವಿಷಯ ಚುನಾವಣ ಚರ್ಚೆಯ ಕೇಂದ್ರ ಬಿಂದುವಾಗಿದೆ. ರಿಪಬ್ಲಿಕನ್ ಪಕ್ಷ ನಾಯಕ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ “ಜಗತ್ತು 3ನೇ ಮಹಾಯುದ್ಧಕ್ಕೆ ಬಂದು ನಿಂತಿದೆ’ ಎನ್ನುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಣು ಯುದ್ಧಕ್ಕೆ ಅಮೆರಿಕವನ್ನು ತಳ್ಳಲಿದ್ದಾರೆಂದು ರಿಪಬ್ಲಿಕನ್ನರು ಆರೋಪಿಸುತ್ತಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಕಳೆದ ವರ್ಷ ಅ.7ರಿಂದ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಿಳಿಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ, ಬಹುತೇಕರು 3ನೇ ಮಹಾಯುದ್ಧ ಸನ್ನಿಹಿತವಾಗುತ್ತಿದೆ ಎಂದು ಭಾವಿಸುತ್ತಿದ್ದಾರೆ.
ವಿಶ್ವಸಂಸ್ಥೆ ಮುಖ್ಯಸ್ಥರಿಗೇ ಇಸ್ರೇಲ್ ಬಹಿಷ್ಕಾರ!
ಇರಾನ್ ದಾಳಿ ಬೆನ್ನಲ್ಲೇ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ವಿರುದ್ಧ ಇಸ್ರೇಲ್ ಕೆಂಡಕಾರಿದೆ. ವಿಶ್ವಸಂಸ್ಥೆಯು ನಮ್ಮ ದೇಶದ ವಿಚಾರದಲ್ಲಿ ಪಕ್ಷಪಾತೀಯ ಧೋರಣೆ ಹೊಂದಿದ್ದು, ಮುಖ್ಯಸ್ಥ ಆಂಟೊನಿಯೋ ಗುಟೆರಸ್‌ಗೆ ನಮ್ಮ ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಇಸ್ರೇಲ್ ಘೋಷಿಸಿದೆ. ಇರಾನ್ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿಲ್ಲ. ಜಗತ್ತಿನ ಬಹುತೇಕ ದೇಶಗಳು ಈ ಹೀನ ಕೃತ್ಯವನ್ನು ಖಂಡಿಸಿ ದ್ದರೂ, ವಿಶ್ವಸಂಸ್ಥೆ ಒಂದೇ ಒಂದು ಮಾತೂ ಆಡಿಲ್ಲ. ಅಂಥವರು ಇಸ್ರೇಲ್ ನೆಲಕ್ಕೆ ಕಾಲಿಡುವ ಅರ್ಹತೆ ಹೊಂದಿಲ್ಲ ಎಂದು ಇಸ್ರೇಲ್ ಹೇಳಿದೆ.
ಅ.7ರ ಮಾದರಿ ದಾಳಿಗೆ ಹೆಜ್ಬುಲ್ಲಾ ಸಂಚು: ಇಸ್ರೇಲ್
ಟೆಲ್ ಅವೀವ್: 2023ರ ಅ. 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿ ಮಾದರಿಯಲ್ಲೇ ಇಸ್ರೇಲ್‌ನಲ್ಲಿ ದಾಳಿಗೆ ಹೆಜ್ಬುಲ್ಲಾ ಸಂಚು ರೂಪಿಸಿತ್ತು. ಇದಕ್ಕಾಗಿ ಲೆಬನಾನ್ ಗಡಿಯಲ್ಲಿ 1,000ಕ್ಕೂ ಅಧಿಕ ಉಗ್ರರನ್ನು ನಿಯೋಜಿಸಲಾಗಿತ್ತು ಎಂದು ಇಸ್ರೇಲ್ ಮಾಹಿತಿ ನೀಡಿದೆ. ಹೀಗಾಗಿಯೇ ಉಗ್ರರನ್ನು ಗುರಿಯಾಗಿಸಿ ಲೆಬನಾನ್ ಮೇಲೆ ದಾಳಿ ನಡೆಸಿ, ಅವರ ಅಡಗುದಾಣಗಳನ್ನು ಧ್ವಂಸ ಮಾಡಿದ್ದಾಗಿ ಇಸ್ರೇಲ್ ಸಮರ್ಥನೆ ನೀಡಿದೆ.
ಇದನ್ನೂ ಓದಿ: Stock Markets Slump: ಇರಾನ್-ಇಸ್ರೇಲ್ ಯುದ್ಧಕ್ಕೆ ಷೇರುಪೇಟೆ ತಲ್ಲಣ!