ಆಫೀಸಲ್ಲಿ ಕಂಪ್ಯೂಟರ್ ಚಾಲೂ ಮಾಡೋಣ ಅಂತ ಬಗ್ಗಿ, ಸ್ವಿಚ್ ಕಡೆ ಕೈ ಇಡೋ ಹೊತ್ತಿಗೆ ಕತ್ತು ಉಳುಕಿರುತ್ತದೆ. ತಲೆ ಎತ್ತುವ ಹೊತ್ತಿಗೆ ಪ್ರಾಣ ಹೋಗುವಷ್ಟು ನೋವು. ಆಮೇಲೆ, ಅಕ್ಕ, ಪಕ್ಕ ತಿರುಗಿಸಲು ಆಗದು. ಒಂದು ಕ್ಷಣ ಯಾವುದೋ ದೊಡ್ಡ ರೋಗ ಅಂಟಾಕಿಕೊಂಡಿದೆ ಅನಿಸಿಬಿಡುತ್ತದೆ. ಈ ರೀತಿ ತಲೆ ಅಲ್ಲಾಡಿಸಲು ಆಗದೆ, ಡ್ರೈವ್ ಮಾಡಿಕೊಂಡು ಮನೆಗೆ ಹೋಗುವುದಾದರು ಹೇಗೆ? ಹಿಂದೆ ಯಾವ ವಾಹನ ಬರುತ್ತಿದೆ ಅಂತ ಕತ್ತು ತಿರುಗಿಸಿಯಾದರೂ ನೋಡಬೇಕಲ್ಲ. ಆಫೀಸಿನಿಂದ ಮನೆಗೆ ದ್ವಿಚಕ್ರವಾಹನದಲ್ಲಿ ಹೋಗುವವರಿಗೆ ಈ ರೀತಿ ಆದರೆ, ಕತೆ ಮುಗೀತು.
ಇದಕ್ಕೆ ಕಾರಣ, ಮಾನಸಿಕ ಒತ್ತಡ ಹಾಗೂ 8-10 ಗಂಟೆಗಳ ಕಾಲ ಕೂತಲ್ಲಿಯೇ ಕೆಲಸ ಮಾಡುವುದು. ಆಗ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಹಾಗಂತ ಇದೇನು ದೊಡ್ಡ ಸಮಸ್ಯೆ ಅಲ್ಲ. ನಿರ್ಲಕ್ಷಿಸುವಂತೆಯೂ ಇಲ್ಲ.
ರಾತ್ರಿ ಹೊತ್ತು ನೀವು ಸರಿಯಾದ ಭಂಗಿಯಲ್ಲಿ ಮಲಗದಿದ್ದಲ್ಲಿ ಈ ರೀತಿಯ ನೋವು ಕಾಣಿಸಿಕೊಳ್ಳುತ್ತದೆ. ತಲೆ ದಿಂಬು ಸರಿಯಾಗಿಲ್ಲದಿದ್ದರೂ ಹೀಗೆ ಆಗಬಹುದು. ದಿಂಬನ್ನು ಹೆಚ್ಚು ಎತ್ತರಕ್ಕೆ ಇಟ್ಟುಕೊಂಡರೆ ಕತ್ತಿನ ಮಾಂಸ ಕಂಡಗಳಿಗೇ ಸಮಸ್ಯೆ. ಭಾರ ಎತ್ತುವಾಗ ಸ್ನಾಯುಗಳಿಗೆ ಆಯಾಸವಾಗಿ ಅಥವಾ ಉಳುಕಿ ಕತ್ತು ನೋವು ಬರುವ ಸಾಧ್ಯತೆ ಉಂಟು. ಇದಕ್ಕೆ ಪರಿಹಾರವೂ ಉಂಟು. ನಿಮ್ಮ ತಲೆಗೆ ಹೊಂದಿಕೆಯಾಗದಷ್ಟು ಎತ್ತರದ ದಿಂಬು ಬಳಸಬೇಡಿ. ಪ್ರತಿದಿನ ಬೆಳಗ್ಗೆ 5 ರಿಂದ 10 ನಿಮಿಷಗಳ ಕಾಲ ಸೂರ್ಯ ನಮಸ್ಕಾರದಂಥ ಯೋಗ ಮಾಡಿದರೆ, ಕತ್ತಿನ ಸುತ್ತ ರಕ್ತ ಪರಿಚಲನೆ ಯಾಗುತ್ತದೆ. ಆಗ ಸಡನ್ನಾಗಿ ಕತ್ತು ಹಿಡಿಯುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೂ ಈ ರೀತಿಯ ಕತ್ತು ನೋವು ಬರುವ ಸಾಧ್ಯ ಇದೆ. ಸೂರ್ಯನ ಪ್ರಖರ ಕಿರಣಗಳಿಗೆ ಮೈ ಒಡ್ಡುವ ಮೂಲಕ ಸುಲಭಾಗಿ ಡಿ ವಿಟಮಿನ್ ಪಡೆಯಬಹುದು. ಇದರಿಂದ ಮೂಳೆ ಗಟ್ಟಿಯಾಗುತ್ತದೆ. ಕತ್ತು ನೋವಿಗೆ ಪರಿಹಾರ ದೊರಕುತ್ತದೆ.