Advertisement

ಕುಮಾರಸ್ವಾಮಿ ಬತ್ತಳಿಕೆಯಲ್ಲಿ ಯಾವುದಾದರೂ “ಅಸ್ತ್ರ’ಇದೆಯೇ?

11:19 PM Jul 15, 2019 | Team Udayavani |

ಬೆಂಗಳೂರು: ವಿಶ್ವಾಸಮತದ ಅಗ್ನಿಪರೀಕ್ಷೆ ಗೆಲ್ಲುವ ಕಾರ್ಯತಂತ್ರ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಾರಿಗೂ ಗುಟ್ಟುಬಿಟ್ಟುಕೊಡುತ್ತಿಲ್ಲ. ಸರ್ಕಾರ ಉಳಿಸಿಕೊಳ್ಳಲು ಅವರು ರೂಪಿಸಿರುವ ಮಾಸ್ಟರ್‌ ಪ್ಲ್ರಾನ್‌ ಏನಿರಬಹುದು ಎಂಬುದರ ಬಗ್ಗೆ ಸಣ್ಣ ಸುಳಿವು ಸಹ ಬಿಟ್ಟುಕೊಡುತ್ತಿಲ್ಲ. ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರವಾದರೂ ಯಾವುದು ಎಂಬುದೇ ನಿಗೂಢವಾಗಿದೆ.

Advertisement

ಸರ್ಕಾರ ಉಳಿಯಲಿದೆ, ನೀವೇನೂ ಚಿಂತೆ ಮಾಡಬೇಡಿ. ಸರ್ಕಾರ ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ಆದರೆ, ಇನ್ಮುಂದೆ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆಗಾರಿಕೆ ಎಂದು ಸಚಿವರು ಹಾಗೂ ಶಾಸಕರಿಗೆ ಹೇಳಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸದ ಬಗ್ಗೆ ಜೆಡಿಎಸ್‌ನವರಿಗೆ ಅಚ್ಚರಿಯಾಗಿದೆಯಾದರೂ ಅವರ ಕಾರ್ಯತಂತ್ರದ ಶೈಲಿ ಗೊತ್ತಿರುವುದರಿಂದ ಏನಾದರೂ ಆಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕಾಂಗ್ರೆಸ್‌ ನಾಯಕರ ಜತೆಗಿನ ಮಾತುಕತೆಯಲ್ಲೂ ವಿಶ್ವಾಸಮತಯಾಚನೆ ದಿನದವರೆಗೆ ಕಾಂಗ್ರೆಸ್‌ ಶಾಸಕರನ್ನು ಭದ್ರಪಡಿಸಿಕೊಳ್ಳಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕರ ಪ್ರಕಾರವೇ ಮುಖ್ಯಮಂತ್ರಿಯವರು ಮುಂಬೈನಲ್ಲಿರುವ ಅತೃಪ್ತರ ಬಗ್ಗೆ ತೀರಾ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ಆದರೆ, ಹಲವರ ಸಂಪರ್ಕದಲ್ಲಿರುವುದಂತೂ ಹೌದು.

ಇನ್ನು, ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚನೆಗೆ ಸಿದ್ಧ ಎಂದು ಹೇಳಿರುವ ಬಗ್ಗೆ ಬಿಜೆಪಿಯಲ್ಲೂ ಒಂದು ರೀತಿಯಲ್ಲಿ ಆತಂಕ ಮನೆ ಮಾಡಿದೆ. ರಿವರ್ಸ್‌ ಆಪರೇಷನ್‌ ಏನಾದರೂ ಮಾಡಬಹುದಾ? ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಏಕೆಂದರೆ, ಮುಂಬೈನಲ್ಲಿರುವ ಕೆಲವರು ಬರದಿದ್ದರೂ ಸರ್ಕಾರ ಉಳಿಯುತ್ತದೆ. ಅದು ಹೇಗೆ ಎಂಬುದು ನೀವೇ ನೋಡಿ ಎಂದು ತಮ್ಮ ಆಪ್ತರ ಬಳಿ ಕುಮಾರಸ್ವಾಮಿ ಹೇಳಿರುವುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.

ಗೌಡರ ಸಲಹೆ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಲಹೆಯಂತೆಯೇ ಪ್ರತಿ ಹಂತದಲ್ಲೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡೆದುಕೊಳ್ಳುತ್ತಿದ್ದು, ಯಾವುದೇ ರೀತಿಯಲ್ಲೂ ಯಾರಿಗೂ ಸುಳಿವುಬಿಟ್ಟುಕೊಡುತ್ತಿಲ್ಲ.

Advertisement

ಪ್ರತಿಪಕ್ಷ ಬಿಜೆಪಿಯ ನಾಯಕರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಪ್ರತಿ ನಡೆಯ ಬಗ್ಗೆಯೂ ನಿಗಾ ವಹಿಸಿರುವ ಬಗ್ಗೆಯೂ ತಿಳಿಸಿರುವ ದೇವೇಗೌಡರು, ಕೇಂದ್ರ ಬಿಜೆಪಿ ನಾಯಕರ ಪಾತ್ರ, ರಾಜ್ಯ ಬಿಜೆಪಿ ನಾಯಕರ ತಂತ್ರದ ಬಗ್ಗೆ ತಿಳಿಸಿ ಅದಕ್ಕೆ ತಕ್ಕಂತೆ ಪ್ರತಿತಂತ್ರ ರೂಪಿಸಲು ಸಲಹೆ ನೀಡಿದ್ದಾರೆ. ಅದರಂತೆ ಕುಮಾರಸ್ವಾಮಿ ಯಾರಿಗೂ ಯಾವುದರ ಮಾಹಿತಿಯೂ ನೀಡದೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈ ಮಧ್ಯೆ, ವಿಶ್ವಾಸಮತ ಯಾಚನೆ ನಿಗದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರು ಹಾಗೂ ಜೆಡಿಎಸ್‌ನ ಸಚಿವರು-ಶಾಸಕರ ಜತೆ ನಿರಂತರ ಸಮಾಲೋಚನೆಯಲ್ಲಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌, ಹಿರಿಯ ನಾಯಕ ಮಲ್ಲಿಕಾರ್ಜು ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್‌ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಆಪ್ತ ಸಚಿವರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪುರ್‌, ಸಾ.ರಾ.ಮಹೇಶ್‌ ಸೇರಿ ಹಲವರ ಜತೆ ಸಮಾಲೋಚನೆ ನಡೆಸಿ, ನಮ್ಮ ಪಕ್ಷದ ಶಾಸಕರು ಬೇರೆ ಯಾರೂ ಬಿಜೆಪಿಯತ್ತ ಹೋಗದಂತೆ ನೋಡಿಕೊಳ್ಳುವಂತೆ ಸಚಿವರಿಗೆ ಸೂಚಿಸಿ ಹದ್ದಿನ ಕಣ್ಣಿಡುವಂತೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next