Advertisement
ಈ ಪಂದ್ಯಕ್ಕೂ ಮುನ್ನ ಉದ್ಭವಿಸಿರುವ ದೊಡ್ಡ ಪ್ರಶ್ನೆಯೆಂದರೆ, “ಆ್ಯಂಡ್ರೆ ರಸೆಲ್ ಅವರನ್ನು ತಡೆಯಲು ಚೆನ್ನೈ ಬಳಿ ಅಸ್ತ್ರವಿದೆಯೇ?’ ಎಂಬುದು. ತಂಡ ಎಷ್ಟೇ ಕಠಿನ ಸ್ಥಿತಿಯಲ್ಲಿದ್ದರೂ ತನ್ನ ಪವರ್‌ಫುಲ್ ಸ್ಟ್ರೋಕ್‌ಗಳ ಮೂಲಕ ಎದುರಾಳಿ ಬೌಲರ್‌ಗಳನ್ನು ಪುಡಿಗೈದು, ಒಂದೆರಡು ಓವರ್‌ಗಳಲ್ಲೇ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಮರ್ಥ ಆಟಗಾರನಾಗಿ ಹೊರಹೊಮ್ಮಿದ್ದಾರೆ ಆ್ಯಂಡ್ರೆ ರಸೆಲ್. ಈ ಐಪಿಎಲ್‌ನ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಎಂಬುದು ಈ ಕೆರಿಬಿಯನ್ ದೈತ್ಯನ ಪಾಲಿನ ಹೆಗ್ಗಳಿಕೆ. ಸದ್ಯ ರಸೆಲ್ ಅಬ್ಬರದ ಮುಂದೆ ಗೇಲ್ ಸಹಿತ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳೂ ಮಂಕಾಗಿದ್ದಾರೆ.ರಸೆಲ್ ಕಳೆದ ಶುಕ್ರವಾರ ಬೆಂಗಳೂರಿ ನಲ್ಲೇ ಆರ್‌ಸಿಬಿಯನ್ನು ಚೆಂಡಾಡಿದ ದೃಶ್ಯಾವಳಿ ಈಗಲೂ ಕಣ್ಮುಂದೆ ಸುಳಿಯುತ್ತಿದೆ!
ಎರಡೂ ತಂಡಗಳು ಕ್ವಾಲಿಟಿ ಸ್ಪಿನ್ನರ್‌ಗಳನ್ನು ಹೊಂದಿರುವುದು ವಿಶೇಷ. ಚೆನ್ನೈ ಬಳಿ ಹರ್ಭಜನ್, ಜಡೇಜ, ತಾಹಿರ್ ಇದ್ದಾರೆ. ಸುನೀಲ್ ನಾರಾಯಣ್, ಪೀಯೂಷ್ ಚಾವ್ಲಾ, ಕುಲದೀಪ್ ಯಾದವ್ ಕೋಲ್ಕತಾದ ಸ್ಪಿನ್ ಅಸ್ತ್ರಗಳು. ಯಾರು ಸ್ಪಿನ್ನನ್ನು ಸಮರ್ಥವಾಗಿ ನಿಭಾಯಿಸುವರೋ, ಅವರಿಗೆ ಗೆಲುವಿನ ಅವಕಾಶ ಹೆಚ್ಚು.
Related Articles
ಚೆನ್ನೈ ಟ್ರ್ಯಾಕ್ ತುಸು ನಿಧಾನ ಗತಿಯಿಂದ ಕೂಡಿರುವುದರಿಂದ ಇಲ್ಲಿ ಈ ವರೆಗೆ ದೊಡ್ಡ ಸ್ಕೋರ್ ದಾಖಲಾಗಿಲ್ಲ. ಆದರೆ ಇದನ್ನು ಸುಳ್ಳು ಮಾಡುವ ಸಾಮರ್ಥ್ಯ ಕೆಕೆಆರ್‌ಗೆ ಇದೆ. ಧೋನಿ ಪಡೆ ತವರಿನಲ್ಲಿ ಆಡುತ್ತಿದೆ ಎಂಬುದಷ್ಟೇ ಪ್ಲಸ್ ಪಾಯಿಂಟ್. ತವರಿನ ಎಲ್ಲ 3 ಪಂದ್ಯಗಳಲ್ಲೂ ಚೆನ್ನೈ ಜಯ ಸಾಧಿಸಿದೆ. ಆದರೆ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಪಾಲಿಗೆ ಚೆನ್ನೈ ತವರೂರು ಎಂಬುದನ್ನು ಮರೆಯುವಂತಿಲ್ಲ.
Advertisement