ಹುಬ್ಬಳ್ಳಿ: ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿಯವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ನಿವಾಸಕ್ಕೆ ಹೋಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ಅವರ ನಿವಾಸಕ್ಕೆ ಹೋಗಬಾರದು ಎಂಬ ನಿಯಮ ಏನಾದರು ಇದೆಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಪ್ರಶ್ನೆಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಸಿಜೆಐ ಇಫ್ತಿಯಾರ್ ಕೂಟದಲ್ಲಿಪಾಲ್ಗೊಂಡರೆ ನಡೆಯುತ್ತದೆ, ಗಣೇಶ ಪೂಜೆಗೆ ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಪ್ರಧಾನಿಗಳು ಹೋಗಬಾರದು ಎಂದರೆ ಹೇಗೆ. ಕಾಂಗ್ರೆಸ್ ಮತಬ್ಯಾಂಕ್ ಗೆ ಅನುಕೂಲವಿರುವುದಿದ್ದರೆ ಸುಮ್ಮನಿರುತ್ತದೆ. ಪ್ರಧಾನಿ ಗಣೇಶ ಪೂಜೆ ಹೋದರೆ ಟೀಕೆ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣವೇ ಇರುವುದು. ಮಲ್ಲಿಕಾರ್ಜುನ ಖರ್ಗೆ ನಾಮಕವಾಸ್ತೆ ಅಧ್ಯಕ್ಷ ಮಾತ್ರ. ರಾಹುಲ್ ಗಾಂಧಿ ಪ್ರಧಾನಿ ಆಗುವುದಿಲ್ಲ ಖರ್ಗೆ ಪ್ರಧಾನಿ ಆಗುತ್ತಾರೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಜಾಮೀನು ಸಿಕ್ಕಿರಬಹುದು. ಅವರೇನು ಆರೋಪ ಮುಕ್ತರಾಗಿಲ್ಲವಲ್ಲ ಎಂದರು.
ಬೆಂಗಳೂರಿನಲ್ಲಿ ಗುರುವಾರ ಬಿಜೆಪಿ ಸಂಘಟನಾತ್ಮಕ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬೈಯಲಾಗಿದೆ ಎಂಬುದು ಸುಳ್ಳು ಎಂದು ಜೋಶಿ ಹೇಳಿದರು.