Advertisement
ನಮ್ಮ ಮಿದುಳೆಂಬ ಮಹಾ ಕಾರ್ಖಾನೆ ಇದೆಯಲ್ಲ, ಇದು ನಿರಂತರವಾಗಿ ಹಲವು ಯೋಚನೆಗಳನ್ನು ಉತ್ಪಾದಿಸುತ್ತಿರುತ್ತದೆ. ನಾವು ಈ ಶಕ್ತಿಯನ್ನೇನಾದರೂ ಸರಿಯಾದ ದಿಕ್ಕಿನಲ್ಲಿ ಹರಿಸಿದರೆ, ನಮ್ಮ ಬದುಕನ್ನು ಸಂಪೂರ್ಣವಾಗಿ ರೂಪಾಂತರಿಸಿ, ಅದನ್ನು ಅತ್ಯುನ್ನತ ಎತ್ತರಕ್ಕೆ ಕೊಂಡೊಯ್ಯಬಹುದು.
ಎನ್ನುವುದೇ ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಈ ಬಯಕೆಯೇ ನಮ್ಮ ಆತ್ಮದ ಮೂಲ ಗುಣ. ಆದರೂ ಇದನ್ನೆಲ್ಲ ಈಡೇರಿಸಿಕೊಳ್ಳಲು ಬಹುತೇಕರು ವಿಫಲರಾಗುತ್ತೇವೆ, ಅದದೇ ಹಳೆಯ ಗುಣಗಳನ್ನೇ ಮುಂದುವರಿಸಿಕೊಂಡು ತೊಂದರೆ ಅನುಭವಿಸುತ್ತಾ ಹೋಗುತ್ತೇವೆ…ಏಕೆ ಹೀಗೆ? ಹೊಸ ವರ್ಷದ ಹಿಂದಿನ ದಿನ ವ್ಯಕ್ತಿಯೊಬ್ಬ ಇನ್ಮುಂದೆ ತನ್ನ ಬದುಕನ್ನು ಸುಧಾರಿಸಿಕೊಳ್ಳಬೇಕೆಂದು ನಿರ್ಧರಿಸಿದ. ಬೆಳಗ್ಗೆ 4 ಗಂಟೆಗೆ ಅಲಾರಾಂ ಇಟ್ಟವನೇ, ನಿದ್ದೆಗೆ ಜಾರಿದ. ಬೆಳಗ್ಗೆ 4ಕ್ಕೆ ಅಲಾರಾಂ ಸದ್ದುಮಾಡಲಾರಂಭಿಸಿತು. ಇವನು, ಮಲಗಿದ್ದಲ್ಲಿಂದಲೇ ಕೈಚಾಚಿ ಆ ಗಡಿಯಾರದ ತಲೆಗೆ ಪೆಟ್ಟು ಕೊಟ್ಟು ಅಲಾರಾಂ ಆಫ್ ಮಾಡಿದ. ಇನ್ನೊಂದು 5 ನಿಮಿಷ ಮಲಗುತ್ತೇನೆ ಎಂದು ನಿರ್ಧರಿಸಿ ಮುಖದ ಮೇಲೆ ಹೊದಿಕೆ ಎಳೆದುಕೊಂಡ. ಅವನು ಮತ್ತೆ ಕಣ್ಣು ತೆರೆದಾಗ, ಗಡಿಯಾರದ ಮುಳ್ಳು 8 ಗಂಟೆಗೆ ಬಂದು ನಿಂತಿದ್ದವು! ಧಡ್ಡನೆ ಎದ್ದು ಕೂತವನೇ ತನ್ನನ್ನೇ ತಾನು ಶಪಿಸಿಕೊಳ್ಳಲಾರಂಭಿಸಿದ. ಹೊಸ ವರ್ಷದ ಸಂಕಲ್ಪವನ್ನು ಮೊದಲನೇ ದಿನವೇ ಹಾಳು ಮಾಡಿದೆನಲ್ಲ. ನನ್ನಂಥ ಮೈಗಳ್ಳನಿಂದ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ…ಎಂದು ಇಡೀ ದಿನ ಪಶ್ಚಾತ್ತಾಪಪಟ್ಟ. ಯಾಕೆ ತನಗೆ ಏಳಲು ಆಗಲಿಲ್ಲ ಎಂದು ಬಹಳ ಯೋಚಿಸಿದ.
Related Articles
Advertisement
ದಿನವೂ ಅವನದ್ದು ಇದೇ ಕಥೆಯಾಯಿತು. ಅವನಿಗೆ ಈ ಋಣಾತ್ಮಕ ಭಾವನೆಗಳಿಂದ ತನ್ನ ಮೇಲೆ ತನಗೆ ಕಾನ್ಫಿಡೆನ್ಸ್ ಕಡಿಮೆಯಾಗಿಬಿಟ್ಟಿತು. ಆದರೆ ಒಂದು ದಿನ ಕಚೇರಿಯಲ್ಲಿ ಕುಳಿತಿದ್ದಾಗ, ಇವನ ಬಾಸ್ ಬಳಿ ಬಂದವನೇ, “ನಾಳೆ ನೀನು ಆಫೀಸ್ ಕೆಲಸದ ಮೇಲೆ ಅರ್ಜೆಂಟಾಗಿ ಇನ್ನೊಂದು ಊರಿಗೆ ಹೋಗಲೇಬೇಕು. ಬೆಳಗ್ಗೆ 5ಕ್ಕೇ ಫ್ಲೈಟು ಎಂದು ಹೇಳಿದ. ‘
ಆಶ್ಚರ್ಯವೆಂದರೆ, ಮರುದಿನ ಬೆಳಗ್ಗೆ 4ಕ್ಕೆ ಅಲಾರಾಂ ಹೊಡೆಯುವ ಮುನ್ನವೇ ಈ ಮಹಾಶಯ ಎದ್ದು ಕುಳಿತು ರೆಡಿಯಾಗಿಬಿಟ್ಟಿದ್ದ! ಇವನು ಶೂ ಧರಿಸಿ ಎದ್ದು ಹೊರಡುವ ಸಮಯದಲ್ಲಿ ಅಲಾರಾಂ ಸದ್ದು ಮಾಡಿತು. ಇವನಿಗೆ ತನ್ನಲ್ಲಿ ಆದ ಈ ಬದಲಾವಣೆಗೆ ಕಾರಣವೇನು ಎನ್ನುವುದು ಅರ್ಥವಾಗಲಿಲ್ಲ…
ಏಕೆ ಹೀಗಾಯಿತು ಎಂದು ಹೇಳುತ್ತೇನೆ ಕೇಳಿ. ಯಾವುದೇ ಸಂಕಲ್ಪವಿರಲಿ, ಅದಕ್ಕೆ ಒಂದು ಡೆಡ್‌ಲೈನ್ ಇರಬೇಕು, ಒಂದು ಟಾರ್ಗೆಟ್ ಇರಬೇಕು, ಒಂದು ಉದ್ದೇಶವಿರಬೇಕು. ಅವನು ದಿನವೂ ನಾಲ್ಕು ಗಂಟೆಗೆ ಏಳಬೇಕು ಎಂದು ಅಲಾರಾಂ ಇಟ್ಟುಕೊಳ್ಳುತ್ತಿದ್ದನೇ ಹೊರತು, ಎದ್ದಮೇಲೆ ಏನು ಮಾಡಬೇಕು ಎಂದು ನಿರ್ಧರಿಸಿಯೇ ಇರಲಿಲ್ಲ. ಒಂದು ಗುರಿಯೇ ಇಲ್ಲವೆಂದ ಮೇಲೆ ಎದ್ದೇನು ಪ್ರಯೋಜನ ಎಂದು ಅವನ ಸುಪ್ತಮನಸ್ಸು ಅವನನ್ನು ಮಲಗಿಸಿಬಿಡುತ್ತಿತ್ತು. ಆದರೆ, ಬೆಳಗ್ಗೆ ವಿಮಾನವಿದೆ ಎಂಬ ಒಂದು ಗುರಿ, ಇನ್ನೊಂದು ಊರಿಗೆ ಹೋಗಿ ಮೀಟಿಂಗ್ ಮಾಡಬೇಕು ಎಂಬ ಉದ್ದೇಶ/ಟಾರ್ಗೆಟ್ ಅವನನ್ನು ಎದ್ದು ಕೂರಿಸಿತು.
ಅಂದಹಾಗೆ ಈ ಕಥೆಯ ಪಾತ್ರಧಾರಿ ಯಾರು? ನೀವೇನಾ?
ಮುಕುಂದಾನಂದ